

ಶಿವಮೊಗ್ಗ: ಜೀವ ವೈವಿಧ್ಯದ ಆಗರವಾಗಿರುವ 34 ಸ್ಥಳಗಳನ್ನು ವಿಶ್ವ ಮಟ್ಟದಲ್ಲಿ ಗುರುತಿಸಲಾಗಿದೆ. ಅದರಲ್ಲಿ ಭಾರತದ ಪಶ್ಚಿಮಘಟ್ಟವೂ ಸೇರಿದೆ. ವಿಶೇಷ ಸ್ಥಾನ ಪಡೆದಿರುವ ಪಶ್ಚಿಮಘಟ್ಟಕ್ಕೆ ಈಗ ಆತಂಕ ಎದುರಾಗಿದೆ ಎಂದು ವನ್ಯಜೀವಿ ಸಂರಕ್ಷಕ, ಐಯುಸಿಎನ್ ಸದಸ್ಯ ಎಸ್.ಜಿ.ವಿನಾಯಕ ಕಳವಳ ವ್ಯಕ್ತಪಡಿಸಿದರು.
ಡಿವಿಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಿಂದ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜೀವ ವೈವಿಧ್ಯ ಹಾಗೂ ಸಂರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಕರ್ನಾಟಕದ ಮೂಲಕವೂ ಪಶ್ಚಿಮಘಟ್ಟ ಹಾಯ್ದುಹೋಗುತ್ತದೆ. ಹೀಗಾಗಿ ಇಲ್ಲಿನ ಪರಿಸರಕ್ಕೆ ಇನ್ನಿಲ್ಲದ ಮಹತ್ವವಿದೆ ಎಂದು ತಿಳಿಸಿದರು.
ಯಾವುದೇ ಪರಿಸರದಲ್ಲಿ ಅಪರೂಪದ ವನ್ಯಜೀವಿ ಸಂಪತ್ತು ಅದು ಪ್ರಾಣಿ, ಪಕ್ಷಿ, ಸರಿಸೃಪ, ಕೀಟ, ಸಸ್ಯ, ಹೂವು, ಮರಗಳೇ ಆಗಿರಬಹುದು ಹಾಗೂ ಆ ಪರಿಸರಕ್ಕೆ ಆಪತ್ತು ಎದುರಾಗಿದ್ದರೆ ಅದನ್ನು ಜೀವ ವೈವಿಧ್ಯದ ಹಾಟ್‌ಸ್ಪಾಟ್ ಎಂದು ಗುರುತಿಸಲಾಗುತ್ತಿದೆ. ಪಶ್ಚಿಮ ಘಟದಲ್ಲಿ ಅಪರೂಪದ ವನ್ಯಜೀವಿ ಸಂಪತ್ತೂ ಇದೆ. ಅದಕ್ಕೆ ಆಪತ್ತೂ ಎದುರಾಗಿದೆ ಎಂದರು.
ಜೀವ ವೈವಿಧ್ಯ ಸಮತೋಲನದಲ್ಲಿರಲು ಆಹಾರ ಸರಪಳಿ ಸಮರ್ಪಕವಾಗಿರಬೇಕು. ಈ ಸರಪಳಿ ಎಲ್ಲಿ ತುಂಡಾದರೂ ಜೀವ ವೈವಿಧ್ಯದಲ್ಲಿ ಅಸಮತೋಲನ ಉಂಟಾಗುತ್ತದೆ. ಜೀವ ವೈವಿಧ್ಯ ಕಾಪಾಡಿಕೊಳ್ಳುವಲ್ಲಿ ಹುಲಿಗಳ ಪಾತ್ರವು ಅತ್ಯಂತ ಪ್ರಮುಖವಾಗಿದೆ ಎಂದು ವಿವರಿಸಿದರು.
ಬಿಗಿಯಾದ ಕಾನೂನುಗಳಿಲ್ಲದ ಕಾರಣ ಹಾಗೂ ಹೆಚ್ಚಿದ ಬೇಟೆ ಪರಿಣಾಮ ನಮ್ಮ ದೇಶದಲ್ಲಿ ಹುಲಿಗಳ ಸಂತತಿ ಗಣನೀಯವಾಗಿ ಕುಸಿತ ಕಂಡಿತ್ತು. ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ 1972ರಲ್ಲಿ ವನ್ಯಜೀವಿ ಕಾಯ್ದೆ ಜಾರಿಗೊಳಿಸಿ ಅದನ್ನು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಇರಿಸಿಕೊಂಡಿದ್ದು ಹಾಗೂ 1973ರಲ್ಲಿ ಪ್ರಾಜೆಕ್ಟ್ ಟೈಗರ್ ಯೋಜನೆ ರೂಪಿಸಿದ ಪರಿಣಾಮ ಇಂದು ಭಾರತದ ಕಾಡುಗಳಲ್ಲಿ ಮೂರು ಸಾವಿರ ಹುಲಿಗಳಿವೆ ಎಂದು ಹೇಳಿದರು.
ಡಿವಿಎಸ್ ಉಪಾಧ್ಯಕ್ಷ ಎಸ್.ಪಿ.ದಿನೇಶ್, ಕಾರ್ಯದರ್ಶಿ ಎಸ್.ರಾಜಶೇಖರ್, ಸಹ ಕಾರ್ಯದರ್ಶಿ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಪ್ರಾಧ್ಯಾಪಕರಾದ ಎನ್.ಕುಮಾರಸ್ವಾಮಿ, ಡಾ. ಶ್ರೀನಿವಾಸ ಲಮಾಣಿ, ಡಾ. ಎಚ್.ಎಂ.ಸಂತೋಷ್ ಇತರರಿದ್ದರು.
ಬಿ.ಎಸ್‌ಸಿ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಅಂತಿಮ ವರ್ಷದ ವಿದ್ಯಾರ್ಥಿಗಳು ಗಿಡ ನೆಡುವ ಮೂಲಕ ಕಾಲೇಜಿಗೆ ಸ್ವಾಗತ ಕೋರಿದರು.