PHOTOS: ಮನುಷ್ಯರೇ ಕೂರುವಷ್ಟು ದೊಡ್ಡ ಎಲೆ!

Leaf
Published on

| ಸುರೇಶ್ ಮರಕಾಲ ಸಾಯ್ಬರಕಟ್ಟೆ 

ನೀವು ಉಡುಪಿಯ ಕೋಟಾ ಸಮೀಪದ ಬನ್ನಾಡಿಯ ಉಪ್ಲಾಡಿಯ ಬಳಿ ಪ್ರಯಾಣಿಸಿದ್ದರೆ, ರಸ್ತೆಯ ಎರಡೂ ಕಡೆ ಕೊಜೆ ಮಣ್ಣು ತೆಗೆದಲ್ಲಿ ತುಂಬಿ ನಿಂತ ನೀರನ್ನೂ, ನೀರೂ ಕಾಣಿಸದಷ್ಟು ತುಂಬಿಕೊಂಡ ಬಿಳಿ-ಕೆಂಪು ಜೆಲ್ಲಿ ಗಿಡಗಳನ್ನೂ (ತಾವರೆ ಜಾತಿ) ಮನಸಾರೆ ಕಂಡಿರುತ್ತೀರಿ. ಇದು ಬನ್ನಾಡಿಯಲ್ಲಿ ಮಾತ್ರವಲ್ಲ, ನಿಮ್ಮೂರಿನ ಯಾವುದೇ ನೀರು ತುಂಬಿದ ತಾವರೆಗಳಿರುವ ಕೆರೆ-ಕೊಳಗಳಾದರೂ ಆದೀತು, ಇನ್ನೂ ಹತ್ತಿರಕ್ಕೆ ಹೋಗಿ ನೋಡಿದ್ದರೆ ಅಲ್ಲಿಯ ಬಿಳಿ-ಕೆಂಪು ತಾವರೆ ಹೂಗಳ ಸೊಬಗನ್ನೂ, ಬದಿಯಲ್ಲೆ ಹರಡಿಕೊಂಡ ಬೊಗಸೆಯಗಲದ ಅದರ ಎಲೆಗಳನ್ನೂ, ಎಲೆಯ ಮೇಲೆ ಅತ್ಯಂತ ಆಲಸಿಯಾಗಿ ಕುಳಿತು ಅರೆಧ್ಯಾನಸ್ಥ ಸ್ಥಿತಿಯಲ್ಲಿರುವ ಕಪ್ಪೆಗಳನ್ನೂ ಕಂಡಿರುತ್ತೀರಿ. ನೀವು ಹೋದೊಡನೆ ಆ ಕಪ್ಪೆಗಳು- ಧ್ಯಾನ ಭಂಗವಾದವರಂತೆ- “ಡುಳುಂ” ಎಂದು ನೀರಿಗೆ ಜಿಗಿಯುವುದನ್ನು ಕಂಡು, "ಛೇ! ನಮಗೂ ಹೀಗೆ ತಾವರೆ ಎಲೆಯ ಮೇಲೆ ಕುಳಿತುಕೊಳ್ಳುವ ಹಾಗಿದ್ದರೆ!?" ಎಂದು ಯೋಚಿಸಿ ನಿಡುಸುಯ್ದಿರುತ್ತೀರಿ. ಆದರೆ ಚಿಂತಿಸಬೇಡಿ, ಅಂತದ್ದೊಂದು ಅದ್ಭುತ ಅವಕಾಶ ನಿಮಗಿದೆ!!

ದಕ್ಷಿಣ ಅಮೆರಿಕಾದ ಅಮೆಜಾ಼ನ್ ಕಾಡು- ಅದೊಂದು ವಿಸ್ಮಯಗಳ ಸಾಗರ! ಸೂರ್ಯ ರಶ್ಮಿಯೂ ನೆಲಕ್ಕೆ ತಗುಲದಷ್ಟು ದಟ್ಟವಾಗಿ ಹರಡಿಕೊಂಡಿರುವ ನೂರಾರು ಅಡಿ ಎತ್ತರಕ್ಕೆ ಜಿಗಿದು ಮುಗಿಲು ಮುಟ್ಟುವ ನಿತ್ಯ ಹರಿದ್ವರ್ಣ ಮರಗಳು, ಪ್ರಪಂಚದಲ್ಲಿ ಕಂಡು ಕೇಳರಿಯದ ಪ್ರಾಣಿ ಪಕ್ಷಿಗಳು, ಮುನ್ನೂರು ಕೆ.ಜಿ. ಬೆಳೆಯಬಲ್ಲ ರಾಕ್ಷಸ ಗಾತ್ರದ ಅನಾಕೊಂಡಾಗಳು, ಕಣ್ಮುಚ್ಚಿ ತೆರೆಯುವುದರೊಳಗೆ ಮೂಳೆಯವರೆಗೆ ಹಿಸಿದು ಹಾಕುವ ರಕ್ತ ಪಿಪಾಸು ಫಿರಾನ್ಹಾ ಮೀನುಗಳು, ಮೊಣಕಾಲು ಎತ್ತರ ಬೆಳೆಯುವ ಗೋಲಿಯಾತ್ ಕಪ್ಪೆಗಳು, ಭೀಕರ ಮೊಸಳೆಗಳನ್ನೂ ಶಾಕ್ ಹೊಡೆಸಿ ಪ್ರಜ್ಞೆ ತಪ್ಪಿಸಬಲ್ಲ ಪ್ರಚಂಡ ಇಲೆಕ್ಟ್ರಿಕ್​ ಈಲ್‌ಗಳು, ಸೋಮಾರಿಗಳ ರಾಜ ‘ಸ್ಲಾತ್’, ಕಚ್ಚಿದರೆ ಮೈಗೆ ಬೆಂಕಿ ಹೊತ್ತಿಸಿದಷ್ಟು ಉರಿ ತರಬಲ್ಲ ಬೆಂಕಿ ಇರುವೆಗಳು... - ಈ ವಿಸ್ಮಯಗಳ ಪಟ್ಟಿಗೆ ಮತ್ತೊಂದು ಸೇರ್ಪಡೆ, ಅಮೆಜಾ಼ನಿನ ದೈತ್ಯ ತಾವರೆ ಎಲೆ. ಈ ಎಲೆಗಳ ಅಗಲ ಕೇಳಿದರೆ ಹೌಹಾರುತ್ತೀರಿ. ಒಂದು ಅಡಿ?, ಎರಡು ಅಡಿ?, ಮೂರು, ನಾಲ್ಕು, ಐದು ಅಡಿ? ನೀವು ನಂಬಲಿಕ್ಕಿಲ್ಲ!, ಇದರ ಎಲೆಗಳು ಪೂರ್ತಿ ಮೂರು ಮೀಟರ್ ವ್ಯಾಸ ಹೊಂದಿದೆ! ಎಂದರೆ ಸುಮಾರು ಒಂದು ಕೊಪ್ಪರಿಗೆಯಷ್ಟು ಅಗಲ!! ಸಾಮಾನ್ಯ ನಮ್ಮ-ನಿಮ್ಮಂತಹ ಮನುಷ್ಯರು ಸಿಂಹಾಸನದ ಮೇಲೆ ಕುಳಿತ ರಾಜನಂತೆ ಈ ಎಲೆಯ ಮೇಲೆ ವಿರಾಜಮಾನರಾಗಬಹುದು! ಹೆಚ್ಚೇಕೆ?!, ಗರಿಷ್ಠ 135 ಕೆ.ಜಿ ತೂಕದವರೆಗಿನ ದಡೂತಿ ವ್ಯಕ್ತಿ ಕೂಡಾ ಆರಾಮವಾಗಿ ಇದರ ಮೇಲೆ ಕೂರಬಹುದು! ಅಷ್ಟು ತೂಕವನ್ನು ಎಲೆಯ ಮೇಲೆ ಇಟ್ಟರೂ ಎಲೆ ಮುಳುಗಲಾರದು! ಮುಳುಗದಂತೆ ತಡೆಯಲು ಎಲೆಯ ಅಡಿಭಾಗದಲ್ಲಿ ನೇರಳೆ ಬಣ್ಣದ ಜೇಡರ ಬಲೆಗಳಂತೆ ಹೆಣೆದುಕೊಂಡಿರುವ ‘ನರ’ಗಳ ವ್ಯೂಹವೇ ಇದೆ. ಈ ನರಗಳ ಪೂರ್ತಿ ಗಾಳಿ ತುಂಬಿಕೊಂಡಿರುವುದರಿಂದ, ಬೇರೆ ಎಲೆಗಳಿಗಿಂತ ಐವತ್ತು-ಅರವತ್ತು ಪಟ್ಟು ಹೆಚ್ಚು ಭಾರವನ್ನು ತಡೆಯುವ ಸಾಮರ್ಥ್ಯ ಈ ಎಲೆಗಿದೆ!

‘ವಿಕ್ಟೋರಿಯಾ ಅಮೆಜಾ಼ನಿಕಾ’ ಎಂದು ಕರೆಯಲಾಗುವ ಈ ದೈತ್ಯ ತಾವರೆ ನಿಂಫೇಸಿಯೇ ಕುಟುಂಬಕ್ಕೆ ಸೇರಿದ್ದು. ಅಮೆಜಾ಼ನ್ ಕಾಡು ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳಾದ ಬ್ರೆಜಿ಼ಲ್, ಅರ್ಜೈಂಟೈನಾ, , ಪೆರುಗ್ವೆ, ಓಕ್ಸ್ಬೋಲೇಕ್ಸ್ಗಳಲ್ಲಿ ಈ ತಾವರೆ ಹೆಚ್ಚಾಗಿ ಕಂಡು ಬರುತ್ತದೆ. ಈ ಗಿಡವನ್ನು ಮೊದಲು 1801ರಲ್ಲಿ ಟೆಡಿಯಾನಸ್ ಹೆನ್ಕೆ ಎಂಬುವವನು ಬೊಲಿವಿಯಾದಲ್ಲಿ ಗುರುತಿಸಿದ. ಆದರೆ ಇಂಥದ್ದೊಂದು ದೈತ್ಯ ಎಲೆಯ ಸುಂದರ ತಾವರೆ ಇದೆಯೆಂದು ಪ್ರಪಂಚಕ್ಕೆ ಗೊತ್ತಾದದ್ದು 1837ರಲ್ಲಿ ಸರ್ ರಿಚರ್ಡ್ ಶೋಂಬರ್ಗ್ ಎಂಬುವವರು ಗಯಾನದಲ್ಲಿ ಕಂಡುಹುಡುಕಿ, ಬ್ರಿಟಿಷ್ ಬಾಟನಿಕಲ್ ಸೊಸೈಟಿಗೆ ಸಮರ್ಪಿಸಿದ ನಂತರವಷ್ಟೇ. ಬ್ರಿಟಿಷ್ ಬಾಟನಿಕಲ್ ಸೊಸೈಟಿ ಇಂಗ್ಲೆಂಡ್‌ನ ಅಂದಿನ ರಾಣಿ ವಿಕ್ಟೋರಿಯಾ ನೆನಪಿನ ಗೌರವಾರ್ಥವಾಗಿ ಈ ಗಿಡಕ್ಕೆ “ವಿಕ್ಟೋರಿಯಾ ಅಮೆಜಾ಼ನಿಕಾ” ಎಂದು ಹೆಸರಿಟ್ಟಿತು.

ಹತ್ತಿರತ್ತಿರ ಸುಮಾರು ಹತ್ತು ಅಡಿ ವ್ಯಾಸವಿರುವ ಅಮೆಜಾ಼ನಿಕಾದ ಎಲೆ ಹಾಗೂ ಇಡೀ ಗಿಡವೇ ಒಂದು ವಿಸ್ಮಯದ

ಆಗರ! ಒಂದು ವರ್ಷದವರೆಗೆ ಬದುಕಬಲ್ಲ ಈ ಗಿಡದಲ್ಲಿ, ಇದರ ಹೂ, ಬೇರುಗಳು, ಎಲೆಯ ಮೇಲ್ಭಾಗ ಮಾತ್ರ ಮುಳ್ಳುರಹಿತವಾಗಿದ್ದು, ಉಳಿದೆಲ್ಲ ಕಡೆಗಳು ಹರಿತವಾದ ಮುಳ್ಳುಗಳಿಂದ ತುಂಬಿರುತ್ತದೆ. ಈ ಮುಳ್ಳುಗಳು ಮೀನು ಹಾಗು ಇತರ ಪ್ರಾಣಿಗಳಿಂದ ಗಿಡಕ್ಕೆ ಸಂಪೂರ್ಣ ರಕ್ಷಣೆ ನೀಡುತ್ತದೆ. ಈ ಗಿಡದ ಬೆಳವಣಿಗೆಯೋ- ರಾಕ್ಷಸ ವೇಗದ್ದು! ದಿನವೊಂದಕ್ಕೆ ಸರಾಸರಿ ಎಂಟು ಇಂಚು ಉದ್ದ ಬೆಳೆಯಬಲ್ಲದು! ನೀರಿನೊಳಗೆ ಇದರ ದಂಟು ಏಳರಿಂದ ಎಂಟು ಮೀಟರ್ ಆಳದವರೆಗೆ –ಎಂದರೆ ಸುಮಾರು ನಾಲ್ಕು ಮನುಷ್ಯರಷ್ಟು ಉದ್ದ!!- ಹರಡಿರುತ್ತದೆ!! ಮುಖ್ಯವಾಗಿ ಇದರ ಎಲೆಗಳು ನೀರಿನಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವಾಗ ಮುಳುಗದಂತೆ, ನಮ್ಮ ಊಟದ ಬಟ್ಟಲಿನ ಸುತ್ತಲೂ ಅಂಚು ಇರುವ ಹಾಗೆ ಆರರಿಂದ ಒಂಭತ್ತು ಇಂಚು, ಕೆಲವೊಮ್ಮೆ ಒಂದು ಅಡಿ ಎತ್ತರದ ಅಂಚು ಇರುತ್ತದೆ. ಅಮೆಜಾ಼ನಿನಲ್ಲಿ ವರ್ಷವಿಡೀ ಮಳೆ ಬರುವುದರಿಂದ ಮಳೆ ನೀರು ಕೊಪ್ಪರಿಗೆಯಂತಹ ಈ ಎಲೆಯೊಳಗೆ ತುಂಬಿ, ನೀರಿನ ಭಾರಕ್ಕೆ ಎಲೆ ಹರಿಯದಂತೆ, ಎಲೆಯ ಮಧ್ಯಭಾಗದಲ್ಲಿ ಒಂದು ಕವಾಟ ಅಥವಾ ಕಿಂಡಿ ಇರುತ್ತದೆ. ಇದರಿಂದ ಮಳೆಯ ನೀರು ಎಲೆಯಿಂದ ಸರಾಗವಾಗಿ ಕೆಳಕ್ಕೆ ಹರಿದು ಹೋಗುತ್ತದೆ. ಆದರೆ ಒಂದು ತೊಟ್ಟು ನೀರು ಕೂಡಾ ಒಳಗೆ ಬರಲಾರದು- ಒಂದು ರೀತಿಯಲ್ಲಿ ಬಾವಿಯ ಪಂಪಿನ ಫುಟ್‌ವಾಲ್‌ನಂತೆ; ಆದರೆ ಉಲ್ಟಾ ಅಷ್ಟೆ!!
ಅಮೆಜಾ಼ನಿಕಾದ ಎಲೆಗಳು ಸಾಮಾನ್ಯ ಮನುಷ್ಯನೊಬ್ಬನ ತೂಕವನ್ನು ತಡೆದುಕೊಳ್ಳಬಹುದಾದರೂ, ಅವು ಬಹಳ ನಾಜೂಕು ಮತ್ತು ಮೃದು! ಎಷ್ಟು ನಾಜೂಕೆಂದರೆ ಕೇವಲ ಒಂದು ಫೀಟ್ ಎತ್ತರದಿಂದ ಜ್ಯೂಸ್ ಕುಡಿಯುವ ಸ್ಟ್ರಾವನ್ನು ನೇರವಾಗಿ ಎಲೆಯ ಮೇಲೆ ಕೆಡೆದರೆ, ಎಲೆ ಸರ‍್ರನೆ ಹರಿದೇ ಹೋಗುತ್ತದೆ! ಹೀಗಾಗಿ ಎಲೆಯ ಮೇಲೆ ಯಾರಾದರೂ ಕುಳಿತುಕೊಳ್ಳುವ ಮೊದಲು ಅಗಲವಾದ ಪ್ಲಾಸ್ಟಿಕ್ ಅಥವಾ ರಬ್ಬರ್ ಹಾಳೆಯನ್ನು ಇಟ್ಟು, ಅದರ ಮೇಲೆ ಕುಳಿತುಕೊಳ್ಳುತ್ತಾರೆ. ಇದರಿಂದ ವ್ಯಕ್ತಿಯ ಭಾರ ಇಡೀ ಎಲೆಯ ಮೇಲೆ ಸಮಾನವಾಗಿ ಹರಡಿ, ಎಲೆ ಹರಿಯುವುದಿಲ್ಲ!

ಈ ಗಿಡದ ಹುಬ್ಬೇರಿಸುವ ಇನ್ನೊಂದು ವಿಸ್ಮಯವೆಂದರೆ, ರಾತ್ರಿಯಲ್ಲಿ ಹೆಣ್ಣಾಗಿ, ಹಗಲಲ್ಲಿ ಗಂಡಾಗಿ ರೂಪ ಪರಿವರ್ತನೆಹೊಂದುವ ಅದರ ಹೂಗಳು!! ಸಂಜೆ ಆಗುತ್ತಿದ್ದಂತೆ ತದ್ರೂಪ್ ನಮ್ಮ ಬ್ರಹ್ಮ ಕಮಲದಂತೆ ಬಿಳಿಯ ಬಣ್ಣದ ತನ್ನ ದಳಗಳನ್ನು ಅರಳಿಸುತ್ತದೆ. ಈಗ ಅದರೊಳಗಿನಿಂದ ಹೊರಸೂಸುವ ಅನಾನಸು ಹಣ್ಣಿನಂತಹ ಪರಿಮಳ ದೂರದೂರದ ದುಂಬಿಗಳನ್ನು ಆಕರ್ಷಿಸುತ್ತದೆ. ಅಮೆಜಾ಼ನಿಕಾದ ಹೂವು ಈಗ ಹೆಣ್ಣಾಗಿರುತ್ತದೆ! ಮತ್ತೇರಿಸುವ ಹೂವಿನ ಪರಿಮಳ ಹುಡುಕುತ್ತಾ ಬಂದ ದುಂಬಿಯು ತನ್ನ ಮೈಯ್ಯಲ್ಲಿ ಹೊತ್ತು ತರುವ ಬೇರೆ ಗಂಡು ಹೂಗಳ ಪರಾಗರೇಣುವನ್ನು ಈ ಹೆಣ್ಣು ಹೂವಿನೊಳಗೆ ಚೆಲ್ಲುತ್ತದೆ. ಹೂವಿನ ಘಮಘಮಿಸುವ ಪರಿಮಳದಿಂದ ವೇಳೆ-ಕಾಲದ ಪರಿಜ್ಞಾನವನ್ನು ಕಳೆದುಕೊಳ್ಳುವ ದುಂಬಿ; ರಾತ್ರಿ ಕಳೆದು ಬೆಳಕು ಹರಿಯುತ್ತಿದ್ದಂತೆ ಮುದುಡಿಕೊಳ್ಳುವ ಹೂವಿನ ದಳದೊಳಗೆ ಸಿಕ್ಕಿ ಬಿದ್ದು ಬಂಧಿಯಾಗುತ್ತದೆ. ಹಗಲಾಗುತ್ತಿದ್ದಂತೆ ಬಿಳಿಯ ಬಣ್ಣದ ಹೂ ಗುಲಾಲಿ ಬಣ್ಣಕ್ಕೆ ತಿರುಗುತ್ತದೆ! ಅಷ್ಟೆ ಅಲ್ಲ, ಹೆಣ್ಣಾಗಿದ್ದ ಹೂ ಈಗ ಗಂಡಾಗಿ ಪರಿವರ್ತನೆ ಹೊಂದುತ್ತದೆ!! ಜೊತೆಗೆ ತಾನೇ ಸ್ವತಃ ಪರಾಗರೇಣುವನ್ನು ಬಿಡುಗಡೆ ಮಾಡುತ್ತದೆ! ಹೂವಿನೊಳಗೆ ಸಿಕ್ಕಿ ಬಿದ್ದ ದುಂಬಿಯು ಮಾರನೆ ದಿನ ಸಂಜೆ ಹೂವು ಮತ್ತೆ ತನ್ನ ದಳಗಳನ್ನು ಬಿಡಿಸಿ ಅರಳುತ್ತಲೆ, “ಬದುಕಿದೆಯಾ ಬಡಜೀವವೆ” ಎಂದು ಹೂವಿನಿಂದ ಪರಾರಿಯಾಗುತ್ತದೆ- ಮತ್ತೊಂದು ಹೂವನ್ನು ಅರಸುತ್ತಾ! ಆದರೆ ಆ ವೇಳೆಗಾಗಲೆ ದುಂಬಿಯ ಮೈತುಂಬ ಪರಾಗರೇಣುವನ್ನು ಹಚ್ಚಿ, ಹೂವು ತನ್ನ ಕಾರ್ಯವನ್ನು ಅಚ್ಚುಕಟ್ಟಾಗಿ ಮುಗಿಸಿರುತ್ತದೆ! ಹೊರಹಾರಿದ ದುಂಬಿಯು ಮತ್ತೊಂದು ಬಿಳಿ ಹೂವಿನಲ್ಲಿ ಮೈಮೇಲಿನ ಪರಾಗರೇಣುವನ್ನು ಚೆಲ್ಲುತ್ತದೆ. ನಂತರ ಹಗಲಲ್ಲಿ ಗುಲಾಲಿ ಬಣ್ಣದ ಹೂವಿನೊಳಗೆ ಬಂಧಿಯಾಗಿ..... ಹೀಗೆ ಚಕ್ರ ಮುಂದುವರೆಯುತ್ತದೆ. ಹೂವು ರಾತ್ರಿಯೆಲ್ಲ ಹೆಣ್ಣಾಗಿ ಅರಳಿ, ಹಗಲಲ್ಲಿ ಗಂಡಾಗಿ ಮುದುಡಿ, ದ್ವಿಲಿಂಗಿಯಾಗಿ ವಿಸ್ಮಯವನ್ನು ನಮಗೆ ಉಳಿಸುತ್ತದೆ- ಪ್ರತಿದಿನ!

ಅದೃಷ್ಟವಶಾತ್ ದಕ್ಷಿಣ ಅಮೇರಿಕಾಕ್ಕೇನಾದರೂ ಹೋಗುವ ಅವಕಾಶ ಸಿಕ್ಕಿದರೆ, ವಿಕ್ಟೋರಿಯಾ ಅಮೆಜಾ಼ನಿಕಾವನ್ನು ತಪ್ಪದೇ ನೋಡಿ. ಆದರೊಂದು ವಿಚಾರ, ಹೋಗುವಾಗ ಒಂದು ಪ್ಲಾಸ್ಟಿಕ್ ಹಾಳೆಯನ್ನು ನಿಮ್ಮೊಂದಿಗೆ ಕೊಂಡೊಯ್ಯಲು ಮರೆಯಬೇಡಿ, ಏಕೆಂದರೆ, ಎಲೆಯನ್ನು ನೋಡಿ ಸಂತೋಷದ ಭರದಲ್ಲಿ ಹಾಗೇ ಹೋಗಿ ಎಲೆಯ ಮೇಲೆ ಕುಳಿತುಬಿಟ್ಟೀರಿ ಮತ್ತೆ!!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net