

ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಗ್ರಾಮದಲ್ಲಿರುವ ಧರೆಗೆ ದೊಡ್ಡವರ ಮಂಟೇಸ್ವಾಮಿ ಮಠಕ್ಕೆ ಐದನೇ ಪಂಕ್ತಿ ಸೇವೆ ಪ್ರಯುಕ್ತ ಸೋಮವಾರ ನಡೆದ ಫಲಹಾರದಯ್ಯನ ಸೇವೆಯಲ್ಲಿ ಸಹಸ್ರಾರು ಭಕ್ತರು ಆಗಮಿಸಿ ಗದ್ದುಗೆ ದರ್ಶನ ಪಡೆಯುವ ಮೂಲಕ ಮಂಟೇಸ್ವಾಮಿ ಎದುರು ಸೇವೆ ಜಾತ್ರೆಗೆ ತೆರೆ ಬಿದ್ದಿತು.
ಶ್ರೀ ಮಠದ ಪೀಠಾಧಿಕಾರಿ ಶ್ರೀ ಜ್ಞಾನಾನಂದ ಚನ್ನರಾಜೇ ಅರಸು ಅವರು ಬೆಳಗ್ಗೆ ಸಮೀಪದ ದೊಡ್ಡಮ್ಮ ತಾಯಿ ಗದ್ದುಗೆಗೆ ಪೂಜೆ ಸಲ್ಲಿಸಿ ಫಲಹಾರ ಎಡೆ ಹಿಡುವುದರ ಜತೆಗೆ ಮುಂಭಾಗದ ಪೀಠದ ಮೇಲೆ ಕುಳಿತು ಲೋಕದ ಕಲ್ಯಾಣಕ್ಕಾಗಿ ಧ್ಯಾನ ಮಾಡಿದರು.
ಶರಣಾರ್ಥಿ ಕೂಗಿದ ಪರಿಚಾರಕ: ಈ ವೇಳೆ ಮಠದ ಪರಿಚಾರಕ ಮರಿಸ್ವಾಮಿ ಜಾಗಟೆ ಬಡಿದುಕೊಂಡು ಹರಹರ ಪರಂಜ್ಯೋತಿ ಪಾದಕ್ಕರುವಾಯ್ತು ಉಘೇ,, ಪರಮ ಪರವಸ್ತು ಪಾವನಮೂರ್ತಿ ಅಖಂಡ ಮಹಿಮ ಅಲ್ಲಮ ಪ್ರಭುವಿನ ಮನಗೆದ್ದ ಮಂಟೇಲಿಂಗಯ್ಯನ ಪಾದಕೆ ಶರಣು ಶರಣು ಉಘೇ,, ಆಕಾಶವನ್ನು ವದಿಕೆ ಮಾಡಿ, ಭೂಮಿಯ ತೊಟ್ಟಿಲು ಮಾಡಿ, ನಕ್ಷತ್ರಗಳ ತಾರಾ ದೀಪ ಮಾಡಿ, ನನ್ನಂಗು ನರರಿಗಿರಲಿ, ನರರಂಗು ನನಗಿಲ್ಲ, ಭಾರಿ ಗುಂಡು ಬಾವಿಗೆ ಚಾಚಿ ಒರಗಿ ಮಲಗಿರುವ ಧರೆಗೆ ದೊಡ್ಡವರ ಪಾದಕ್ಕೆ ಶರಣು ಶರುಣಾರ್ಥಿ, ಅರಕಣ್ಣೆ ತುರಕಣ್ಣೆ ಮಾಡಿ ಹಲಗೂರು ಪಂಚಾಳಿಗರಿಗೆ 773 ಹಿಂಡುಗೂಡಿದ ಮಾರಿಯರ ವಿನಾಶಕ್ಕೆ ಆಯುಧ ನೀಡಿದ ನೀಲಿ ಸಿದ್ದಪ್ಪಾಜಿ ಪಾದಕೆ ಶರಣು, ಅರಮನೆ ಅರಸರಿಗೆ ಹರಸಿ ಕಂಡಾಯಕೊಟ್ಟ ಕಿರುಗಣ್ಣ ರಾಚಪ್ಪಾಜಿಗೆ ಉಘೇ,, ದೊಡ್ಡಮ್ಮ ತಾಯಿ, ಚನ್ನಾಜಮ್ಮ, ಫಲಾರದಯ್ಯನ ಪಾದಕೆ ಉಘೇ, ಉಘೇ,, ಎಂದು ಶರಾರ್ಥಿ ಕೂಗಿದರು.
ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತ ಸಮೂಹ ಊಘೇ.., ಉಘೇ,, ಎಂದು ಭಕ್ತಿ ಪರವಶರಾದರು.