

ರಾಣೆಬೆನ್ನೂರ: ಸರ್ಕಾರಿ ಶಾಲೆ ಮಕ್ಕಳು ದಾನಿಗಳಿಂದ ದೊರೆಯುವ ಪುಸ್ತಕ ಸೇರಿ ಇತರ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಡಿವೈಎಸ್ಪಿ ಲೋಕೇಶ ಜೆ. ಹೇಳಿದರು.
ರೈತ ಹುತಾತ್ಮ ದಿನಾಚರಣೆ ನಿಮಿತ್ತ ನಗರದ ಅಶೋಕ ವೃತ್ತದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಣೆ ಸಮಾರಂಭದಲ್ಲಿ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆ ಮಕ್ಕಳಿಗಾಗಿ ಸರ್ಕಾರ ಬಿಸಿಯೂಟ, ಉಚಿತ ಪಠ್ಯಪುಸ್ತಕ, ಸೈಕಲ್ ವ್ಯವಸ್ಥೆ ಸೇರಿ ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ. ಮಕ್ಕಳು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಜತೆಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಬೇಕು ಎಂದರು.
ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಅಧ್ಯಕ್ಷತೆ ವಹಿಸಿದ್ದರು.
ಶಹರ ಠಾಣೆ ಸಿಪಿಐ ಡಾ. ಶಂಕರ, ಪ್ರಮುಖರಾದ ಚಂದ್ರಣ್ಣ ತಿಳವಳ್ಳಿ, ಶಿವಕುಮಾರ ನರಸಗೊಂಡರ, ರಾಜು ಅಂಗಡಿ, ಮಂಜುನಾಥ ಗುಡ್ಡಣ್ಣನವರ, ಶೋಭಾ ಇಚ್ಚಂಗಿ, ಶೈಲಮ್ಮ ಆದರಳ್ಳಿ, ಸಂಜೀವ ರೆಡ್ಡಿ ಹಾಗೂ ಶಾಲೆಯ ಶಿಕ್ಷಕರು ಇತರರು ಉಪಸ್ಥಿತರಿದ್ದರು.