ಅಂತರಗಂಗೆ ಚಾರಣಿಗರ ಲಗ್ಗೆ

klr truking
ಅಂತರಗಂಗೆ ಚಾರಣಕ್ಕೆ ತೆರಳುವ ಮುಖ್ಯದ್ವಾರ.
Published on

> ಕಿರುವಾರ ಎಸ್​.ಸುದರ್ಶನ್​ ಕೋಲಾರ

ಜಿಲ್ಲೆಯ ಸುಪ್ರಸಿದ್ಧ ಚಾರಣ ಹಾಗೂ ಧಾರ್ಮಿಕ ಕ್ಷೇತ್ರವಾದ ಅಂತರಗಂಗೆಗೆ ಆಗಮಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಪ್ರವಾಸೋದ್ಯಮದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾದರೂ ಪ್ರಾಕೃತಿಕ ಸೌಂದರ್ಯಕ್ಕೆ ಧಕ್ಕೆಯುಂಟಾಗುವ ಸನ್ನಿವೇಶ ಸೃಷ್ಟಿಯಾಗಿದೆ.

ಕೋಲಾರಕ್ಕೆ ಭೇಟಿ ನೀಡಿದ ಕೂಡಲೇ ನೆನಪಾಗುವುದು ಅಂತರಗಂಗೆಬೆಟ್ಟ. ಅಲ್ಲಿನ ದಣ ಶ್ರೀ ಕಾಶಿ ವಿಶ್ವೇಶ್ವರ ದೇವಸ್ಥಾನ, ಜಲಪಾತ, ಗುಹೆಗಳು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿವೆ.

ಪ್ರವಾಸಿಗರ ಆಗಮನದಿಂದ ನಾನಾ ರೀತಿಯ ಚಟುವಟಿಕೆಗಳು ಬೀರುಸುಗೊಂಡಿರುವ ಬೆನ್ನಲ್ಲೇ ಅನಧಿಕೃತ ಅಂಗಡಿಗಳ ನಿರ್ಮಾಣ, ಕಸದ ರಾಶಿ, ಪ್ರವಾಸಿಗರಿಂದ ಹಣ ವಸೂಲಿ ಹೀಗೆ ಹಲವಾರು ಸಮಸ್ಯೆಗಳು ತಲೆದೋರಿವೆ.

ಹಣ ಸುಲಿಗೆ ಆರೋಪ: ಈ ಮೊದಲು ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆ ಹೊಂದಾಣಿಕೆಯೊಂದಿಗೆ ಇಕೋ ಸಂಸ್ಥೆಯೊಂದಿಗೆ ಪ್ರವಾಸಿಗರಿಗೆ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಒಬ್ಬರಿಗೆ 250 ರೂ. ಶುಲ್ಕ ನಿಗದಿ ಮಾಡಲಾಗಿತ್ತು. ನಂತರದ ಬೆಳವಣಿಗೆಗಳಿಂದ ಸರ್ಕಾರದಮಟ್ಟದಲ್ಲಿ ಸಂಸ್ಥೆಯೊಂದಿಗಿನ ಒಪ್ಪಂದ ರದ್ದುಪಡಿಸಿ, ಅರಣ್ಯ ಇಲಾಖೆಯಿಂದಲೇ ಆ್ಯಪ್​ ಅಭಿವೃದ್ಧಿಪಡಿಸಿ ನೋಂದಣಿಗೆ ಅವಕಾಶ ಕಲ್ಪಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ.

ಅರಣ್ಯ ವಿಹಾರ ವೆಬ್​ಸೈಟ್​ ಅಥವಾ ಆ್ಯಪ್​ನಲ್ಲಿ ನೋಂದಣಿ ಮಾಡಿಕೊಂಡು ಚಾರಣಕ್ಕೆ ಬರಬೇಕು. ಇದರಲ್ಲಿ ಪ್ರತಿಯೊಬ್ಬರಿಗೆ 250 ರೂ. ನಿಗದಿಪಡಿಸಿದೆ. ವಾರಾಂತ್ಯದಲ್ಲಿ ವಿಶೇಷ ಶುಲ್ಕ ಎಂದು 400 ರೂ. ನಿಗದಿಪಡಿಸಿದೆ. ಆದರೆ, ಆನ್​ಲೈನ್​ ಬುಕ್ಕಿಂಗ್​ ಮಾಡದವರು ಸ್ಥಳದಲ್ಲಿದ್ದ ಸಿಬ್ಬಂದಿಗೆ ನಗದು ರೂಪದಲ್ಲಿ ಅಥವಾ ಯುಪಿಐ ಮೂಲಕ ಹಣ ಪಾವತಿ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ಯಾವುದೇ ರಸೀದಿ ಸಿಗುವುದಿಲ್ಲ. ಹಣಕ್ಕೆ ಇಮೇಲ್​ ಮೂಲಕ ರಸೀದಿ ಕಳುಹಿಸುವುದಾಗಿ ಟೂರಿಸ್ಟ್​ ಗೈಡ್​ ಹೇಳುತ್ತಾರಾದರೂ ಒಂದು ವೇಳೆ ಕಡಿಮೆ ಶುಲ್ಕ ನೀಡುತ್ತೇವೆ, ರಸೀದಿ ಏನು ಬೇಡ ಎಂದರೆ ಹಣ ತೆಗೆದುಕೊಂಡು ಕಳುಹಿಸಿಕೊಡುತ್ತಿದ್ದಾರೆ. ಆದರೆ, ಈ ಹಣ ಸರ್ಕಾರಕ್ಕೆ ಸೇರುವ ಬದಲು ಖಾಸಗಿ ವ್ಯಕ್ತಿಗಳ ಜೇಬು ಸೇರುತ್ತಿದೆ. ಈ ಅಕ್ರಮದಲ್ಲಿ ಪ್ರವಾಸಿ ಗೈಡ್​ಗಳು, ಅರಣ್ಯ ಸಿಬ್ಬಂದಿ ಜತೆಗೆ ಸ್ಥಳಿಯರು ಕೆಲವರು ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ.

ರಸೀದಿ ನೀಡಲಿಲ್ಲ

ನಾವು ಚಾರಣಕ್ಕೆ ಬಂದ ಸ್ಥಳದಲ್ಲಿ ಯಾರೂ ಇರಲಿಲ್ಲ, ಟ್ರಕ್ಕಿಂಗ್​ ಮುಗಿಸಿಕೊಂಡು ಬೆಟ್ಟಕ್ಕೆ ಬಂದಾಗ ಟೂರಿಸ್ಟ್​ ಗೈಡ್​ ಚಂದ್ರಶೇಖರ್​ ಏಕಾಏಕಿ ಏರುಧ್ವನಿಯಲ್ಲಿ ಮಾತನಾಡಿದ್ದಲ್ಲದೆ 2 ಗಂಟೆಗೂ ಹೆಚ್ಚು ಹೊತ್ತು ಕೂರಿಸಿಕೊಂಡಿದ್ದಾರೆ. ಶುಲ್ಕ ಪಾವತಿಸಬೇಕು ಅಂತ ಹೇಳಿದ ಕೂಡಲೇ ಹಣ ಪಾವತಿ ಮಾಡಿದ್ದೇವೆ. ತೆಗೆದುಕೊಂಡಿರುವ ಹಣಕ್ಕೆ ರಸೀದಿ ನೀಡಿಲ್ಲ, ಹಣ ಸುಲಿಗೆ ಮಾಡುವುದೇ ಅವರ ಕೆಲಸ ಆಗಿದೆ. ಮಹಿಳೆಯರು, ಮಕ್ಕಳು ಎನ್ನದೇ ಕ್ರೂರವಾಗಿ ವರ್ತಿಸುತ್ತಾರೆ ಎಂದು ಪ್ರವಾಸಿಯೊಬ್ಬರು "ವಿಜಯವಾಣಿ' ಜತೆ ಅನುಭವ ಹಂಚಿಕೊಂಡರು.

ಬ್ರ್ಯಾಂಡ್​ ಅಂಬಾಸಡರ್​

ಟೂರಿಸ್ಟ್​ ಗೈಡ್​ಗೆ ಗುರುತಿನ ಚೀಟಿ ತೋರಿಸಿ ಎಂದರೆ, ಹಾಗೆಲ್ಲ ತೋರಿಸುವ ಹಾಗಿಲ್ಲ. ನಿಮ್ಮ ವಿರುದ್ಧ ಕ್ರಮಕೈಗೊಳ್ಳುತ್ತೇನೆ, ಪೊಲೀಸರಿಗೆ ದೂರು ನೀಡುತ್ತೇನೆ. ಇಲ್ಲಿ ಬ್ರ್ಯಾಂಡ್​ ಅಂಬಾಸಡರ್​ ಇದ್ದೇನೆ. ಹೇಗೆ ಬಂದಿದ್ದೀರಾ ಎಂದು ದರ್ಪ ತೋರಿದ್ದಾರೆ ಎಂದು ದೂರಿದ ಪ್ರವಾಸಿಗರು, ಈ ದೌರ್ಜನ್ಯಕ್ಕೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಕಳ್ಳದಾರಿಗಳಲ್ಲಿ ಸ್ಥಳಿಯರ ಕಾಟ

ಅಕ್ರಮದಲ್ಲಿ ಟೂರಿಸ್ಟ್​ ಗೈಡ್​ನೊಂದಿಗೆ ಕೆಲ ಸ್ಥಳಿಯರು ಶಾಮೀಲಾಗಿದ್ದು, ಪ್ರವಾಸಿಗರಿಂದ ವಸೂಲಿ ಮಾಡಿದ ಹಣವನ್ನು ಹಂಚಿಕೆ ಮಾಡಿಕೊಳ್ಳತ್ತಾರೆ ಎಂಬ ಆರೋಪ ಇದೆ. ಚಾರಣಕ್ಕೆ ಹೋಗಲು ಅಂತರಗಂಗೆ ಬೆಟ್ಟದಲ್ಲಿ ಮುಖ್ಯದ್ವಾರವಿದೆ. ಬೆಂಗಳೂರಿನಿಂದ ಬರುವ ಬಹುತೇಕರು ತೆರಹಳ್ಳಿ ಕಡೆಗೆ ಹೋಗುತ್ತಾರೆ. ಅಲ್ಲಿ ಸ್ಥಳಿಯರು ಕಾದುಕೊಂಡು ಇದ್ದು, ಸ್ಥಳ ತೋರಿಸುವುದಾಗಿ ಹೇಳಿ ಹಣ ಪಿಕುತ್ತಾರೆ. ಅಲ್ಲದೆ ಕೆಲ ಜಾಗಗಳಲ್ಲಿ ಮಧ್ಯ ಸೇವನೆಗೆ ಅವಕಾಶ ನೀಡುತ್ತಿದ್ದಾರೆ ಎನ್ನಲಾಗಿದೆ.

ಅನಧಿಕೃತ ಅಂಗಡಿಗಳು

ಕೆಲವರು ಬೆಟ್ಟದ ತಪ್ಪಲು ಹಾಗೂ ಮಧ್ಯದಲ್ಲಿ ಅನಧಿಕೃತವಾಗಿ ಅಂಗಡಿ ನಿರ್ಮಿಸಿಕೊಂಡಿದ್ದಾರೆ. ಅಲ್ಲಿ ನಶೆ ಬರಿಸುವ ವಸ್ತುಗಳನ್ನೂ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಇದೆ. ಅವರನ್ನು ಸ್ಥಳದಿಂದ ಖಾಲಿ ಮಾಡಿಸಲು ಹೋದರೆ ಪ್ರಭಾವ ಬಳಸಿ ಮತ್ತೆ ಅಂಗಡಿ ಹಾಕಿಕೊಳ್ಳುತ್ತಾರೆ ಎನ್ನಲಾಗಿದೆ.

ಕೋಟ್​..

ಅಂತರಗಂಗೆ ಚಾರಣಕ್ಕೆ ಹೆಸರುವಾಸಿಯಾಗಿದೆ. ಅನುಮತಿ ನೀಡಿರುವ ದಾರಿ ಬಿಟ್ಟು, ಬೇರೆ ದಾರಿಗಳಲ್ಲಿ ಪ್ರವಾಸಿಗರು ಆಗಮಿಸದಂತೆ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು. ಅದಾಗ್ಯೂ ಉಲ್ಲಂನೆ ಮಾಡಿದರೆ ದೂರು ದಾಖಲಿಸಿ ಕ್ರಮಕೈಗೊಳ್ಳಲಾಗುವುದು. ಸೂಚನಾ ಫಲಕ ಅಳವಡಿಕೆಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು.

> ಏಡುಕೊಂಡಲು, ಡಿಸಿಎಫ್​, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net