

ಜೆರುಸಲೇಮ್: ಯುದ್ಧದಿಂದ ಭಾರಿ ಹಾನಿಗೊಳಗಾಗಿರುವ ಗಾಜಾ ಪಟ್ಟಿಯ ಭಯಾನಕ ಪರಿಸ್ಥಿತಿಗಳ ನಡುವೆ ಜನಿಸಿದ ನವಜಾತ ಶಿಶುವಿಗೆ ಪ್ಯಾಲೆಸ್ಟೀನಿಯನ್ ದಂಪತಿ 'ಸಿಂಗಾಪೂರ್' ( Singapore ) ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ತಮ್ಮ ಕಷ್ಟದ ಸಮಯದಲ್ಲಿ ಸಹಾಯ ಮಾಡಿದ ದೇಶಕ್ಕೆ ದಂಪತಿ ಕೃತಜ್ಞತೆ ಸಲ್ಲಿಸಿದ್ದಾರೆ.
ಯುದ್ಧಪೀಡಿತ ದೇಶದಲ್ಲಿ ಆಹಾರದ ಕೊರತೆ ಮತ್ತು ಭೀಕರ ಭಯದ ಸಮಯದಲ್ಲಿ ತಮ್ಮ ಕುಟುಂಬಕ್ಕೆ ಆಹಾರವನ್ನು ಒದಗಿಸಿದ್ದಕ್ಕಾಗಿ ಸಿಂಗಾಪೂರ್ಗೆ ಕೃತಜ್ಞತೆಯ ಸಂಕೇತವಾಗಿ ತಮ್ಮ ಮಗುವಿಗೆ 'ಸಿಂಗಾಪೂರ್' ಎಂದು ಹೆಸರಿಟ್ಟಿದ್ದೇವೆ ಎಂದು ದಂಪತಿ ಹೇಳಿದ್ದಾರೆ.
ಮಗುವಿನ ತಂದೆ ಹಮ್ದಾನ್ ಹಡ್ಡಾದ್ ಅವರು ಗಾಜಾದಲ್ಲಿ ಸಿಂಗಾಪೂರ್ ಮೂಲದ "ಚಾರಿಟಿ ಲವ್ ಏಯ್ಡ್ ಸಿಂಗಾಪೂರ್" ನಡೆಸುತ್ತಿರುವ ಅಡುಗೆಮನೆಯಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಗಾಜಾದಲ್ಲಿ ತೀವ್ರ ಆಹಾರದ ಕೊರತೆಯ ಸಮಯದಲ್ಲೇ ಅವರ ಪತ್ನಿ ಗರ್ಭಿಣಿಯಾಗಿದ್ದರು. ಈ ವೇಳೆ ಇದೇ ಅಡುಗೆಮನೆಯಿಂದ ಹಡ್ಡಾದ್ ಅವರು ಆಹಾರವನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ಒಂದು ಸಹಾಯವು ಅವರ ಕುಟುಂಬಕ್ಕೆ ಜೀವನೋಪಾಯದ ಮೂಲವನ್ನೇ ಒದಗಿಸಿತು. ಹೀಗಾಗಿ, ಆ ದೇಶದ ಮೇಲಿನ ಪ್ರೀತಿ ಮತ್ತು ಕೃತಜ್ಞತೆಯನ್ನು ತೋರಿಸಲು ತಮ್ಮ ಮಗಳಿಗೆ 'ಸಿಂಗಾಪೂರ್' ಎಂದು ಹೆಸರಿಟ್ಟಿದ್ದಾಗಿ ಹಮ್ದಾನ್ ಹಡ್ಡಾದ್ ಹೇಳಿದ್ದಾರೆ.
ಮಗು ಜನಿಸಿದ ನಂತರ, ಲವ್ ಏಯ್ಡ್ ಸಿಂಗಾಪೂರ್ ಇನ್ಸ್ಟಾಗ್ರಾಮ್ನಲ್ಲಿ ಮಗುವಿನ ಜನನ ಪ್ರಮಾಣಪತ್ರವನ್ನು ಹಂಚಿಕೊಳ್ಳಲಾಗಿದೆ. ಗಾಜಾದಲ್ಲಿ 'ಸಿಂಗಾಪೂರ್' ಎಂದು ಹೆಸರಿಸಲಾದ ಮೊದಲ ಪ್ಯಾಲೆಸ್ಟೀನಿಯನ್ ಮಗು ಇದಾಗಿರಬಹುದು ಎಂದು ಅಡಿಬರಹ ಬರೆಯಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವ್ಯಾಪಕ ಪ್ರಶಂಸೆಗೆ ಗುರಿಯಾಗಿದೆ.
ಯುದ್ಧ ಮತ್ತು ಕ್ಷಾಮದ ಮಧ್ಯೆ ಗಡಿಗಳನ್ನು ಮೀರಿ ಭರವಸೆ ಮತ್ತು ದಯೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಈ ಘಟನೆ ತೋರಿಸಿದೆ. ಸಿಂಗಾಪೂರ್ ಸಂಘಟನೆಯೊಂದು ನೀಡಿದ ಸಣ್ಣ ದೇಣಿಗೆಯು ಒಂದು ಕುಟುಂಬದ ಜೀವವನ್ನೇ ಉಳಿಸಿತು ಮತ್ತು ಅಂತಿಮವಾಗಿ ಮಗುವಿನ ಹೆಸರಿನ ಮೂಲಕ ದೇಶದೊಂದಿಗೆ ಅಳಿಸಲಾಗದ ಬಂಧವನ್ನು ಸೃಷ್ಟಿಸಿದೆ. (ಏಜೆನ್ಸೀಸ್)