

ಕೋಲಾರ: ಟೆಂಡರ್ ಆಗಿಯೂ ಕಾಮಗಾರಿ ವಿಳಂಬಕ್ಕೆ ಕಾರಣರಾಗಿರುವ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವಿಣ್ ಪಿ.ಬಾಗೇವಾಡಿ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆ, ನಿರ್ಮಿತಿ ಕೇಂದ್ರ, ಕ್ರೆಡಿಲ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಇಲಾಖಾಧಿಕಾರಿಗಳಿಗೆ, ಸಿಬ್ಬಂದಿಗೆ ಮಾಡುವ ಕೆಲಸದಲ್ಲಿ ಆಸಕ್ತಿ, ಬದ್ಧತೆ ಇರಬೇಕು. ಪ್ರಗತಿಯಲ್ಲಿ ವಿಳಂಬವಾದರೆ ಸರ್ಕಾರಕ್ಕೆ ಉತ್ತರ ಕೊಡುವವರು ಯಾರು ಎಂದು ಪ್ರಶ್ನಿಸಿದರು.
ಸಭೆ ಮಾಡಿದಾಗೆಲ್ಲ ಎಚ್ಚರವಹಿಸಲಾಗುತ್ತಿದೆ, ಅದರೂ ಸಹ ಕೆಲವರು ಎಚ್ಚೆತ್ತುಕೊಳ್ಳುತ್ತಿಲ್ಲ. ಸ್ಥಳ ಪರಿಶೀಲನೆ ವೇಳೆ ಲೋಪಗಳು ಕಂಡು ಬಂದರೆ ಅಧಿಕಾರಿಗಳನ್ನು ಹೊಣೆ ಮಾಡಲಾಗುತ್ತದೆ. ಅಧಿಕಾರಿಗಳು ಗುತ್ತಿಗೆದಾರರ ಬೆನ್ನತ್ತಿ ಗುಣಮಟ್ಟದ ಕೆಲಸ ಮಾಡಿಸಬೇಕು, ಇಲ್ಲದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಟೆಂಡರ್ ಆಗಿಯೂ ಕೆಲಸ ಮಾಡುವಲ್ಲಿ ವಿಲಂಬ ಮಾಡಿದರೆ ಏನು ಪ್ರಯೋಜನ. ವರ್ಷದ ಕೊನೆಯಲ್ಲಿ ಒದ್ದಾಡುವುದರಿಂದ ಕೆಲಸ ಆಗುವುದಿಲ್ಲ. ಸರ್ಕಾರದಿಂದ ಬಂದಿರುವ ಹಣಕ್ಕೆ ನೆಪ ಮಾತ್ರ ಕೆಲಸ ಆಗಬಾರದು. ಶಾಶ್ವತವಾಗಿ ಉಳಿಯುವಂತಾಗಬೇಕು. ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ರ್ನಿಲಕ್ಷ$್ಯ ತೋರಿರುವ ಇಂಜಿನಿಯರ್ಗಳಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿ ಎಂದು ಜಿ.ಪಂ ಸಿಬ್ಬಂದಿಗೆ ಸೂಚಿಸಿದರು.
15 ದಿನದಲ್ಲಿ ಬಾಕಿ ಕೆಲಸಗಳನ್ನು ಶುರು ಮಾಡಬೇಕು, ಸಮಸ್ಯೆ ಇದ್ದರೆ ಸ್ಥಳಿಯ ಶಾಸಕರು, ಅಧಿಕಾರಿಗಳ ಗಮನಕ್ಕೆ ತನ್ನಿ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು. ಕ್ರಿಯಾ ಯೋಜನೆಯಂತೆ ಕೆಲಸ ಮಾಡಿದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಪಿಆರ್ಡಿಪಿಆರ್ನಿಂದ ಒಟ್ಟು 175 ಕೆಲಸ ಕೈಗೆತ್ತಿಕೊಂಡಿದ್ದು, ಒಂದು ಸಹ ಕಾಮಗಾರಿ ಶುರು ಆಗಿಲ್ಲ. ಕೋಲಾರ, ಮಾಲೂರು, ಶ್ರೀನಿವಾಸಪುರ ಭಾಗದಲ್ಲಿ ಅಭಿವೃದ್ಧಿ ಕೆಲಸಗಳು ಬಹಳ ತಡವಾಗಿ ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಂದೆ ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳಿಗೆ ಜೂನ್ಒಳಗೆ ಅನುಮೋದನೆ ಪಡೆಯಲು ಗುರಿ ನೀಡಲಾಗಿತ್ತು, ಆದರೂ ಸಹ ತಾಪಂ ಇಒಗಳು, ಇಂಜನಿಯರ್ಗಳು ವರದಿನೆ ತಯಾರಿಸಿಲ್ಲ. ಕ್ರಿಯಾ ಯೋಜನೆಯಲ್ಲಿ ಏನಾದರೂ ಬದಲಾವಣೆಗಳು ಇದ್ದರೆ ಆಗಸ್ಟ್ ಒಳಗೆ ಮಾಡಿಕೊಳ್ಳಬೇಕು. ಅದಕ್ಕೆ ಅನುಮೋದನೆ ಪಡೆದು ಟೆಂಡರ್ ಕರೆದು, ಕೆಲಸ ತೆಗೆದುಕೊಳ್ಳುವ ಗುತ್ತಿಗೆದಾರರ ಬೆನ್ನತ್ತಿ ಕೆಲಸ ಮಾಡಿಸಿ ಎಂದು ತಾಕೀತು ಮಾಡಿದರು.
* ಲೋಪ ಪತ್ತೆ ಹಚ್ಚಿ ಸರಿಪಡಿಸಿ
ಉಪ ಕಾರ್ಯದರ್ಶಿ ರಮೇಶ್ ಮಾತನಾಡಿ, ಅಧಿಕಾರಿಗಳು ಸಕಾಲಕ್ಕೆ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ಲೋಪಗಳು ಕಂಡು ಬಂದರೆ ತಕ್ಷಣವೆ ಸರಿಪಡಿಸಲು ಸೂಚಿಸಬೇಕು. ಈ ಬಗ್ಗೆ ಪ್ರತಿ ತಿಂಗಳು ವರದಿ ನೀಡಬೇಕು ಎಂದು ಹೇಳಿದರು.
* ಜೆಜೆಎಂ ವಿರುದ್ಧ ವ್ಯಾಪಕ ದೂರುಗಳು
ಗ್ರಾಮೀಣ ಭಾಗದಲ್ಲಿ ಮನೆಮನೆಗೆ ನಲ್ಲಿ ಮೂಲಕ ನೀರು ಸಬರಾಜು ಮಾಡಿ ಜೆಜೆಎಂ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ದುರಸ್ತಿ ಕುರಿತು ವ್ಯಾಪಕ ದೂರುಗಳು ಸಲ್ಲಿಕೆಯಾಗಿವೆ. ಈ ಸಂಬಂಧ ಕೆಲ ಹಳ್ಳಿಗಳಿಗೆ ಭೇಟಿ ಪರಿಶೀಲಿಸಿದಾಗ ಲೋಪಗಳು ಕಂಡು ಬಂದಿವೆ, ಅವರನ್ನು ಅಮಾನತುಪಡಿಸಿ ಕ್ರಮವಹಿಸಲಾಗಿದೆ. ಆದರೂ ಸಹ ಇತರರು ಸುಧಾರಣೆಯಾಗಿಲ್ಲ ಎಂದು ಸಿಇಒ ಪ್ರವಿಣ್ ಪಿ.ಬಾಗೇವಾಡಿ ತರಾಟೆಗೆ ತೆಗೆದುಕೊಂಡರು.
ದುರಸ್ತಿ ಅಂದರೆ ತೇಪೆ ಹಾಕೊದಲ್ಲ, ಗುಣಮಟ್ಟ ಆಗಬೇಕು. ತೋರಿಕೆ ಗೋಸ್ಕರ ಕೆಲಸ ಮಾಡಿದರೆ ಆಗಲ್ಲ, ಕೆಲಸ ಪ್ರಗತಿಯಲ್ಲಿ ಇದ್ದಾಗ ಪರಿಶೀಲನೆ ಮಾಡಿದರೆ ತಪ್ಪುಗಳನ್ನು ಸರಿಪಡಿಸಬಹುದು. ಈ ವಿಚಾರವು ರಾಜ್ಯ ಮಟ್ಟದ ತನಕ ಚರ್ಚೆ ಆಗುತ್ತಿದೆ, ಪರಿಶೀಲನೆ ಮಾಡುವುದು ಇಂಜಿನಿಯರ್ ಗಳ ಕೆಲಸ. ಇಲಾಖೆಯ ಕಾರ್ಯದರ್ಶಿಗಳಿಂದ ಈಗಾಗಲೇ ಮಾರ್ಗಸೂಚಿ ಬಂದಿದ್ದು, ಪಾಲನೆ ಆಗಬೇಕು. ಒತ್ತಾಯ ಮಾಡಿ ಶಿಕ್ಷೆಗೆ ಒಳಗಾಗಬೇಡಿ ಎಂದು ಎಚ್ಚರಿಕೆ ನೀಡಿದರು.