ಆತಂಕ ಸೃಷ್ಟಿಸಿದ ಬಾಂಬ್ ಎಂಬ ಬರಹ

bomb
Published on

ಬೆಂಗಳೂರು: ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದ ಶೌಚಗೃಹದಲ್ಲಿ ಅನಾಮಿಕ ಪ್ರಯಾಣಿಕನೊಬ್ಬ ಬಾಂಬ್ ಎಂದು ಬರೆದಿದ್ದ ಬರಹ ವಿಮಾನದಲ್ಲಿ ಕೆಲ ಕಾಲ ಆತಂಕವನ್ನು ಸೃಷ್ಟಿಸಿತ್ತು.

ಶನಿವಾರ ಮಧ್ಯರಾತ್ರಿ ಪ್ರಯಾಣಿಕನೊಬ್ಬ ವಿಮಾನದ ಬಾತ್ ರೂಮ್‌ನಲ್ಲಿ ಬಾಂಬ್ ಎಂದು ಪೆನ್‌ನಿಂದ ಬರೆದಿದ್ದಾನೆ. ಈ ಬರಹವನ್ನು ನೋಡಿದ ಇತರ ವಿಮಾನ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಪರಿಶೀಲನೆ ಬಳಿಕ ಆತಂಕ ಪಡುವ ಸಂಗತಿಯಿಲ್ಲವೆಂದು ತಿಳಿದ ಪ್ರಯಾಣಿಕರು ಮತ್ತು ಸಿಬ್ಬಂದಿ ನಿಟ್ಟುಸಿರು ಬಿಟ್ಟರು.

ಇಂಡಿಗೋ ವಿಮಾನ ( ೬ಇ೧೪೬೮) ದುಬೈನಿಂದ ಬೆಳಗ್ಗೆ ೧೧.೫ ಕ್ಕೆ ನಿರ್ಗಮನವಾಗಿತ್ತು. ಸಂಜೆ ೬.೪೨ ಕ್ಕೆ ಮಂಗಳೂರು ತಲುಪಬೇಕಿತ್ತು. ಆದರೆ ಈ ಮಧ್ಯೆ ಈ ಘಟನೆ ನಡೆದಿದೆ.

ಸುರಕ್ಷತೆಯ ದೃಷ್ಟಿಯಿಂದ ಹಾಗೂ ಹವಾಮಾನ ವೈಪರಿತ್ಯದಿಂದಾಗಿ ವಿಮಾನವನ್ನು ಮಂಗಳೂರಿನ ಬದಲಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ಮಧ್ಯರಾತ್ರಿ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದ್ದು, ಏರ್‌ಪೋರ್ಟ್ ಸುರಕ್ಷತಾ ಸಿಬ್ಬಂದಿ ತಕ್ಷಣ ಕ್ರಮ ಕೈಗೊಂಡಿದ್ದಾರೆ.

ಯಾವುದೇ ಸ್ಫೊಟಕ ವಸ್ತು ಪತ್ತೆಯಾಗಿಲ್ಲ:

೧೬೯ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ ಬಳಿಕ ಸಂಪೂರ್ಣ ವಿಮಾನ ಮತ್ತು ಪ್ರಯಾಣಿಕರ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ಸ್ಫೊಟಕ ವಸ್ತು ಪತ್ತೆಯಾಗಿಲ್ಲ. ಯಾವುದೇ ಅಪಾವಿಲ್ಲವೆಂದು ತಿಳಿದ ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

ಅನಾಮಿಕನ ಹುಚ್ಚಾಟದಿಂದ ಪ್ರಯಾಣಿಕರಲ್ಲಿ ಆತಂಕ ಉಂಟಾಗಿತ್ತು. ಬೆಂಗಳೂರಿನಲ್ಲಿ ತುರ್ತು ಶೌಚಗೃಹದಲ್ಲಿ ಬಾಂಬ್ ಎಂದು ಬರೆದ ವ್ಯಕ್ತಿ ಯಾರೆಂದು ಸದ್ಯಕ್ಕೆ ತಿಳಿದು ಬಂದಿಲ್ಲ. ವ್ಯಕ್ತಿಯ ಕುರಿತು ಮಾಹಿತಿ ಸಿಕ್ಕಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net