ಕುವೆಂಪು ವಿವಿಯಲ್ಲಿ ಮೇಳೈಸಿದ ಕಲೆ

vc
ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರೊ.ಶರತ್ ಅನಂತಮೂರ್ತಿ ಸಹ್ಯಾದ್ರಿ ಉತ್ಸವಕ್ಕೆ ಚಾಲನೆ ನೀಡಿದರು. ಎ.ಎಲ್.ಮಂಜುನಾಥ್
Published on

ಶಿವಮೊಗ್ಗ: ಕುವೆಂಪು ವಿವಿ ಆವರಣದಲ್ಲಿ ಸೋಮವಾರ ನವದುರ್ಗೆಯರು ಹೆಜ್ಜೆ ಹಾಕಿದರು. ಜನಪದ ಕಲೆಗಳು ಮೇಳೈಸಿದ್ದವು. ಯಕ್ಷಗಾನ, ಡೊಳ್ಳು ಕುಣಿತ, ಪೂಜಾ ಕುಣಿತ, ಭೂತದ ಕೋಲ, ಕಂಸಾಳೆ ಹೀಗೆ ಸಾಲು ಸಾಲು ಕಲೆಗಳ ಅನಾವರಣಕ್ಕೆ ವಿವಿಯ ಕ್ಯಾಂಪಸ್ ವೇದಿಕೆ ಒದಗಿಸಿತ್ತು.

ಕುವೆಂಪು ವಿವಿ ವ್ಯಾಪ್ತಿಯ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ವಿವಿಧ ಕಾಲೇಜುಗಳ ಸುಮಾರು ಎರಡು ಸಾವಿರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಏಕಕಾಲಕ್ಕೆ ಸಾಂಸ್ಕೃತಿಕ ಪಥಸಂಚಲನದಲ್ಲಿ ಭಾಗವಹಿಸಿ ಸಹ್ಯಾದ್ರಿ ಉತ್ಸವದ ಆರಂಭಕ್ಕೆ ನಾಂದಿ ಹಾಡಿದರು.

ಕುವೆಂಪು ವಿವಿಯ ಬ್ರಾೃಂಡ್ ಎಂದೇ ಕರೆಯಲಾಗುವ ಸಹ್ಯಾದ್ರಿ ಉತ್ಸವ ಐದು ವರ್ಷಗಳಿಂದ ನಿಂತಿತ್ತು. ಈ ಬಾರಿ ಮತ್ತೊಮ್ಮೆ ಅದ್ದೂರಿ ಹಾಗೂ ವರ್ಣರಂಜಿತ ಸಹ್ಯಾದ್ರಿ ಉತ್ಸವಕ್ಕೆ ಚಾಲನೆ ಸಿಕ್ಕಿದೆ. ಸಾಂಸ್ಕೃತಿಕ ಪಥಸಂಚಲನದಲ್ಲಿ ಭಾಗವಹಿಸಿದ್ದ ಯುವಕರು ನಾವು ಓದಿಗೆ ಮಾತ್ರವಲ್ಲ ಕಲೆಗೂ ಸೈ ಎಂಬ ಸಂದೇಶ ರವಾನಿಸಿದರು.

ಮಾಲಾರ್ಪಣೆಯೊಂದಿಗೆ ಚಾಲನೆ: ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಕ್ಯಾಂಪಸ್‌ನಲ್ಲಿರುವ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಹ್ಯಾದ್ರಿ ಉತ್ಸವದ ಸಾಂಸ್ಕೃತಿಕ ಪಥಸಂಚಲನಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ರಾಜ್ಯದ ವಿವಿಧ ಬಗೆಯ ಸಾಂಸ್ಕೃತಿಕ ವೈವಿಧ್ಯವನ್ನು ಪ್ರತಿನಿಧಿಸುವುದು ಸಹ್ಯಾದ್ರಿ ಉತ್ಸವದ ಮುಖ್ಯ ಗುರಿಯಾಗಿದೆ ಎಂದರು. ವಿವಿಧ ಜಿಲ್ಲೆಗಳಿಂದ ಆಗಮಿಸಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ವೈವಿಧ್ಯವನ್ನು ಪರಿಚಯಿಸಲು ಇದು ಸಹಕಾರಿಯಾಗಿದೆ. ವಿವಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು ಅತ್ಯಂತ ಸಂಭ್ರಮದಿಂದ ಸಹ್ಯಾದ್ರಿ ಉತ್ಸವದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.

ಅಂತರ ಕಾಲೇಜು ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಭಾಂದವ್ಯ ಮೂಡಿಸುವ ವೇದಿಕೆಯಾಗಿವೆ. ಮಕ್ಕಳಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸಲು ಉತ್ಸವ ಸಹಕಾರಿಯಾಗಿದೆ. ಈ ಉತ್ಸವದಿಂದ ವಿವಿಯ ಹೆಸರು ಇನ್ನೂ ಹೆಚ್ಚು ಪ್ರಜ್ವಲಿಸಲಿದ್ದು, ಹಲವಾರು ವರ್ಷಗಳಿಂದ ಸಹ್ಯಾದ್ರಿ ಉತ್ಸವ ಸ್ಥಗಿತಗೊಂಡಿತ್ತು. ವಿವಿಯ ಎಲ್ಲ ಸಿಬ್ಬಂದಿ ಶ್ರಮದಿಂದ ಮತ್ತೆ ಇದು ಆರಂಭವಾಗಿದೆ ಎಂದು ತಿಳಿಸಿದರು.

ವಿವಿ ಕುಲಸಚಿವ ಎ.ಎಲ್.ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಎಸ್.ಎಂ.ಗೋಪಿನಾಥ್, ಸಹ್ಯಾದ್ರಿ ಉತ್ಸವದ ಸಂಚಾಲಕ ನೆಲ್ಲಿಕಟ್ಟೆ ಸಿದ್ದೇಶ್, ಎಂ.ಆರ್.ಸತ್ಯಪ್ರಕಾಶ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net