ಕೊಲೆಗೆ ಸುಪಾರಿ ನೀಡಿದ್ದ ಆರೋಪಿ ಸೇರಿ ಮೂವರ ಸೆರೆ

arrest
Published on

ಬೆಂಗಳೂರು: ವೃತ್ತಿ ವೈಷ್ಯಮಕ್ಕೆ ಹಾಗೂ ಯುವತಿ ವಿಚಾರಕ್ಕೆ ಸಹೋದ್ಯೋಗಿ ಕೊಲೆಗೆ ಸುಪಾರಿ ನೀಡಿದ್ದ ಕಿದ್ವಾಯಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿನ್ ಮುಖ್ಯಸ್ಥ ಸೇರಿ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್.ಪುರ ನಿವಾಸಿ ಶ್ರೀಧರ್ (೪೮) ಆತನ ಸಹಚರರಾದ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಸಿದ್ದೇಶ್(೨೫) ಮತ್ತು ಶಿವಮೊಗ್ಗ ಜಿಲ್ಲೆಯ ಅಶೋಕನಗರದ ಜನತಾ ಕಾಲೋನಿ ನಿವಾಸಿ ನಿತೇಶ್ (೨೪) ಬಂಧಿತರು. ಆರೋಪಿಗಳು ಏ.೩ರಂದು ಕಿದ್ವಾಯಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಚಂದ್ರಕಾಂತ್(೩೦) ಎಂಬಾತನ ಕೊಲೆಗೆ ಯತ್ನಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಪೈಕಿ ಶ್ರೀಧರ್ ಕಿದ್ವಾಯಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಮುಖ್ಯಸ್ಥನಾಗಿದ್ದ. ಸಿದ್ದೇಶ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನಿತೇಶ್, ದ್ವಿಚಕ್ರ ವಾಹನಗಳ ವೃತ್ತಿಪರ ಕಳ್ಳನಾಗಿದ್ದಾನೆ. ಈತನ ವಿರುದ್ಧ ಶಿವಮೊಗ್ಗ ಪೊಲೀಸರು ವಾರೆಂಟ್ ಹೊರಡಿಸಿದ್ದರು. ಹೀಗಾಗಿ ಸುಂಕದಕಟ್ಟೆಯ ಹೋಟೆಲ್‌ವೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
೧ ಲಕ್ಷ ರೂ.ಗೆ ಸುಪಾರಿ:
ಆರೋಪಿ ಶ್ರೀಧರ್, ಕಿದ್ವಾಯಿ ಆಸ್ಪತ್ರೆಯಲ್ಲಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆ ಯುವತಿ ಜತೆ ಚಂದ್ರಕಾಂತ್ ಹೆಚ್ಚು ಮಾತನಾಡಿದ್ದ. ಹೀಗಾಗಿ ಈ ಹಿಂದೆ ಒಂದೆರಡು ಬಾರಿ ಚಂದ್ರಕಾಂತ್‌ಗೆ ಶ್ರೀಧರ್ ಎಚ್ಚರಿಕೆ ನೀಡಿದ್ದ. ಆದರೆ, ಚಂದ್ರಕಾಂತ್, ಸಹೋದ್ಯೋಗಿ ಮಾತಾಡಿಸುವುದರಲ್ಲಿ ತಪ್ಪೇನಿದೆ ಎಂದಿದ್ದ. ಜತೆಗೆ ಚಂದ್ರಕಾಂತ್ ಜತೆಗೆ ಶ್ರೀಧರ್‌ಗೆ ವೃತ್ತಿ ವೈಷಮ್ಯವಿತ್ತು. ಈ ಹಿನ್ನೆಲೆಯಲ್ಲಿ ಶ್ರೀಧರ್, ಚಂದ್ರಕಾಂತ್‌ನ ಕೊಲೆಗೆ ಸಂಚು ರೂಪಿಸುತ್ತಿದ್ದ. ಈ ಮಧ್ಯೆ ಪರಿಚಯಸ್ಥ ಸಿದ್ದೇಶ್‌ಗೆ ಘಟನೆಯನ್ನು ವಿವರಿಸಿ, ಚಂದ್ರಕಾಂತ್ ಕೊಲೆಗೈದರೆ, ಕಿದ್ವಾಯಿ ಆಸ್ಪತ್ರೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಆಮಿಷವೊಡ್ಡಿದ್ದ. ಹೀಗಾಗಿ ನಿತೇಶ್‌ನನ್ನು ಸಿದ್ದೇಶ್, ಶ್ರೀಧರ್‌ಗೆ ಪರಿಚಯಿಸಿದ್ದ. ಈ ವೇಳೆ ಒಂದು ಲಕ್ಷ ರೂ. ನೀಡುತ್ತೇನೆ. ಚಂದ್ರಕಾಂತ್ ಕೊಲೆಗೈಯಬೇಕು ಎಂದು ಸುಪಾರಿ ಕೊಟ್ಟಿದ್ದ. ಇನ್ನು ಸುಪಾರಿ ಪಡೆದುಕೊಂಡಿದ್ದ ನಿತೇಶ್, ಏ.೩ರಂದು ಸುಂಕದಕಟ್ಟೆ ವಿನೋದಪ್ಪ ಬೇಕರಿ ರಸ್ತೆಯಲ್ಲಿ ಚಂದ್ರಕಾಂತ್ ನಡೆದುಕೊಂಡು ಹೋಗುವಾಗ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net