ಅಕ್ಕಸಾಲಿಗನ ಹತ್ಯೆಗೈದಿದ್ದ ಇಬ್ಬರ ಬಂಧನ

arrest
Published on

ಬೆಂಗಳೂರು: ದುಷ್ಕರ್ಮಿಗಳು ನಗರ್ತಪೇಟೆಯ ಅಕ್ಕಸಾಲಿಗನೊಬ್ಬನನ್ನು ಕೊಲೆ ಮಾಡಿದ್ದು, ಘಟನೆ ನಡೆದ ೨೪ ಗಂಟೆಯೊಳಗೆ ಹಲಸೂರು ಗೇಟ್ ಠಾಣೆ ಪೊಲೀಸರು ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ನಗರ್ತಪೇಟೆಯ ಕೆ.ಎಸ್.ಲೇನ್ ನಿವಾಸಿ ಮೊಹಮ್ಮದ್ ಅಖ್ತರ್ ಅಲಿ (೪೮) ಕೊಲೆಯಾದವರು. ಪಶ್ಚಿಮ ಬಂಗಾಳ ಮೂಲದ ಅವರು ಕುಟುಂಬ ಸದಸ್ಯರೊಂದಿಗೆ ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ಅಕ್ಕಸಾಲಿಗರಾಗಿದ್ದ ಅವರು ಮನೆ ಸಮೀಪವೇ ಚಿನ್ನಾಭರಣ ಅಂಗಡಿ ಇಟ್ಟುಕೊಂಡಿದ್ದರು. ಮೊಹಮ್ಮದ್ ಅಖ್ತರ್ ಅಲಿ ತಮ್ಮ ಮನೆ ಬಳಿಯ ಯುವತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಈ ಸಂಗತಿ ತಿಳಿದು ಕೋಪಗೊಂಡಿದ್ದ ಯುವತಿಯ ಅಕ್ಕನ ಗಂಡ, ಮೊಹಮ್ಮದ್ ಅಖ್ತರ್ ಅಲಿಯ ಕೊಲೆಗೆ ಸಹಚರನ ಜತೆ ಸೇರಿ ಸಂಚು ರೂಪಿಸಿದ್ದ. ಕಳೆದೊಂದು ತಿಂಗಳಿನಿಂದ ಕೊಲೆ ಮಾಡಲು ಹೊಂಚು ಹಾಕುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿನ್ನದಗಟ್ಟಿ ಕೊಡಿಸುವುದಾಗಿ ಕರೆದೊಯ್ದು ಹತ್ಯೆ:
ಪೂರ್ವಯೋಜಿತ ಸಂಚಿನಂತೆ ಸೋಮವಾರ ಸಂಜೆ ಮೊಹಮ್ಮದ್ ಅಖ್ತರ್ ಅಲಿ ಅವರಿಗೆ ಕರೆ ಮಾಡಿದ್ದ ಆರೋಪಿ, ಕಡಿಮೆ ಬೆಲೆಗೆ ಚಿನ್ನದ ಗಟ್ಟಿ ಕೊಡಿಸುವುದಾಗಿ ಸುಳ್ಳು ಹೇಳಿ ಕಬ್ಬನ್‌ಪೇಟೆ ಮುಖ್ಯರಸ್ತೆಗೆ ಕರೆಸಿಕೊಂಡಿದ್ದ. ನಂತರ, ಚಿನ್ನದ ಗಟ್ಟಿ ಕೊಡುವ ವ್ಯಕ್ತಿ ವರ್ತೂರು ಬಳಿ ಕಾಯುತ್ತಿರುವುದಾಗಿ ನಂಬಿಸಿ ಕಾರಿನಲ್ಲಿ ಕರೆದೊಯ್ದಿದ್ದ. ವರ್ತೂರು ಸಮೀಪದ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿದ ಆರೋಪಿ ಮತ್ತು ಆತನ ಸಹಚರ ಒಟ್ಟಾಗಿ ಮೊಹಮ್ಮದ್ ಅಖ್ತರ್ ಅಲಿ ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿದ್ದಾರೆ. ನಂತರ ಹೊಟ್ಟೆಗೆ ಮೂರ್ನಾಲ್ಕು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು ಕೊಲೆ ಬಳಿಕ ಕಾರಿನಲ್ಲೇ ಶವ ಸಾಗಿಸಿಕೊಂಡು ಹೋಗಿ ಪಿನಾಕಿನಿ ಕಾಲುವೆ ಬಳಿ ಎಸೆದು ಪರಾರಿಯಾಗಿದ್ದರು. ಮೊಹಮ್ಮದ್ ಅಖ್ತರ್ ಅಲಿ, ರಾತ್ರಿಯಾದರೂ ಮನೆಗೆ ಬಾರದಿದ್ದರಿಂದ ಆತಂಕಗೊಂಡ ಕುಟುಂಬ ಸದಸ್ಯರು ಠಾಣೆಗೆ ದೂರು ಕೊಟ್ಟರು. ಮೊಹಮ್ಮದ್ ಅಖ್ತರ್ ಅಲಿ ಅವರ ಮೊಬೈಲ್‌ಗೆ ಬಂದಿದ್ದ ಕರೆಗಳ ಸುಳಿವು ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅನೈತಿಕ ಸಂಬಂಧವೇ ಕಾರಣ?
ಮೃತ ಮೊಹಮ್ಮದ್ ಅಖ್ತರ್ ಅಲಿ ಅವರು ಪ್ರಕರಣದ ಪ್ರಮುಖ ಆರೋಪಿ ಪತ್ನಿಯ ತಂಗಿ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದೇ ಕೊಲೆಗೆ ಪ್ರಮುಖ ಕಾರಣ ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿಗಳು ಮೊಹಮ್ಮದ್ ಅಖ್ತರ್ ಅಲಿ ಅವರಿಂದ ಚಿನ್ನಾಭರಣ ದೋಚಲು ಸಹ ಹೊಂಚು ಹಾಕಿದ್ದರು. ಪ್ರಕರಣದಲ್ಲಿ ಪ್ರಮುಖ ಆರೋಪಿಯ ನಾದಿನಿಯ ಪಾತ್ರವಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net