ಸಣ್ಣ ನೀರಾವರಿ ಯೋಜನೆಗಳಿಗೆ ಭೂ ಪರಿಹಾರ ಮೊತ್ತವೇ ದೊಡ್ಡದು !

Minor irrigation
Published on

ಬೆಂಗಳೂರು: ಸಣ್ಣ ನೀರಾವರಿ ಯೋಜನೆಗಳಿಗೆ ಸ್ವಾಧೀನಪಡಿಸಿಕೊಂಡ ಭೂಮಿ ಪರಿಹಾರ ಮೊತ್ತ ದೊಡ್ಡದು. ನ್ಯಾಯಾಲಯದ ತೀರ್ಪಿನಂತೆ ಭೂ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರವನ್ನು ಸಣ್ಣ ನೀರಾವರಿ ಇಲಾಖೆ ಪಾವತಿಸಿದೆ.

ಸರ್ಕಾರದ ಯೋಜನೆಗಳಿಗೆ ಬೇಕಾದ ಭೂಮಿ ಲಭ್ಯತೆ, ಸ್ವಾಧೀನ ದೊಡ್ಡ ಸವಾಲು. ಅದರಲ್ಲೂ ನಿಗದಿತ ಪರಿಹಾರ ಮೊತ್ತಕ್ಕೆ ಭೂ ಮಾಲೀಕರನ್ನು ಒಪ್ಪಿಸುವುದು ಇತ್ತೀಚಿನ ವರ್ಷಗಳಲ್ಲಿ ಜಟಿಲ, ಕ್ಲಿಷ್ಟಕರವಾಗಿ ಸಾಕಷ್ಟು ಯೋಜನೆಗಳು ತೆವಳುತ್ತಾ ಸಾಗಲು ಕಾರಣವಾಗಿವೆ.

ಇಲಾಖೆಯ ದಕ್ಷಿಣ ಮತ್ತು ಉತ್ತರ ವಲಯದ ತಲಾ 12 ಜಿಲ್ಲೆಗಳ ಸಣ್ಣ ನೀರಾವರಿ ಯೋಜನೆಗಳಿಗೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ಸರ್ಕಾರ ಪರಿಹಾರ ಮೊತ್ತ ನಿಗದಿಪಡಿಸಿದೆ.

ಆದರೆ ಜಮೀನು ಕಳೆದುಕೊಂಡ ಮಾಲೀಕರು ಈ ಮೊತ್ತವನ್ನು ಒಪ್ಪಿಕೊಳ್ಳದೆ ಮೇಲ್ಮನವಿ ಪ್ರಾಧಿಕಾರ ಹಾಗೂ ನ್ಯಾಯಾಲಯಗಳಿಗೆ ಮೊರೆ ಹೋಗಿ ಹೆಚ್ಚುವರಿ ಪರಿಹಾರ ಪಡೆದುಕೊಂಡ ಪ್ರಕರಣಗಳು ಸಿಂಹಪಾಲಿವೆ.

ಮೂರು ಪ್ರಕರಣಗಳಲ್ಲಿ ಸರಿ ಎಂದ ಕೋರ್ಟ್

ಇಲಾಖೆಯು ದಕ್ಷಿಣ ವಲಯದಲ್ಲಿ ಸಣ್ಣ ನೀರಾವರಿ ಯೋಜನೆಗಳಿಗೆ ಸ್ವಾಧೀನಪಡಿಸಿಕೊಂಡ ಜಮೀನು 359.19 ಎಕರೆ, ಪ್ರಕರಣಗಳ ಸಂಖ್ಯೆ 103. ಸರ್ಕಾರ ನಿಗದಿಪಡಿಸಿದ ಮೊತ್ತಕ್ಕೆ 27 ಪ್ರಕರಣಗಳ 85 ಜನರು 11.80 ಕೋಟಿ ರೂ. ಪರಿಹಾರವನ್ನು ಸ್ವೀಕರಿಸಿದ್ದಾರೆ.

ಉಳಿದ 96 ಪ್ರಕರಣಗಳಲ್ಲಿ ಭೂಸಂತ್ರಸ್ತರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಈ ಪೈಕಿ 57 ಪ್ರಕರಣಗಳ 144 ಜನರು ಹೆಚ್ಚುವರಿಯಾಗಿ ಐದು ಕೋಟಿ ರೂ. ಪರಿಹಾರ ಪಡೆದಿದ್ದಾರೆ.

ಉತ್ತರ ವಲಯದಲ್ಲಿ ಸಣ್ಣ ನೀರಾವರಿ ಯೋಜನೆಗಳಿಗೆ ಸ್ವಾಧೀನಪಡಿಸಿಕೊಂಡ ಜಮೀನು 15,884.315 ಎಕರೆ. ಒಟ್ಟು ಪ್ರಕರಣಗಳ ಸಂಖ್ಯೆ 3,051. ಈ ಪೈಕಿ 487 ಪ್ರಕರಣಗಳ 487 ಜನರು ಸರ್ಕಾರ ನಿಗದಿಪಡಿಸಿದ ಮೊತ್ತವನ್ನು ಒಪ್ಪಿಕೊಂಡು 64.09 ಲಕ್ಷ ರೂ.ಪರಿಹಾರ ಸ್ವೀಕರಿಸಿದ್ದಾರೆ.

ಭೂ ಪರಿಹಾರದ ಮೊತ್ತ ಪ್ರಶ್ನಿಸಿ 2564 ಪ್ರಕರಣಗಳ 9,673 ಜನರು ನ್ಯಾಯಾಲಯಗಳಿಗೆ ಹೋಗಿದ್ದಾರೆ. ಇದರಲ್ಲಿ 1238 ಪ್ರಕರಣಗಳ 4679 ಜನರು ಹೆಚ್ಚುವರಿಯಾಗಿ 4.56 ಕೋಟಿ ರೂ. ಪರಿಹಾರ ಪಡೆದುಕೊಂಡಿದ್ದಾರೆ.

ಜತೆಗೆ ಮೂರು ಪ್ರಕರಣಗಳಲ್ಲಿನ ಮೂವರು ಭೂಮಾಲೀಕರಿಗೆ ಸರ್ಕಾರ ನಿಗದಿಪಡಿಸಿದ ಮೊತ್ತ ಸಮರ್ಪಕವಾಗಿದೆ ಎಂದು ಕೋರ್ಟ್ ತೀರ್ಪು ನೀಡಿದ್ದು, ಈ ಪ್ರಕರಣಗಳ ಒಟ್ಟು ಮೊತ್ತ 15.40 ಲಕ್ಷ ರೂ.ಗಳಾಗಿದೆ ಎಂದು ಅಧಿಕೃತ ಅಂಕಿ-ಅಂಶಗಳು ಸಾರುತ್ತವೆ.

ಬೇಡಿಕೆಗೆ ಹೋಲಿಸಿದರೆ ಅನುದಾನ ಅಲ್ಪ

ಅಂತರ್ಜಲ ವೃದ್ಧಿ, ಜಲಕಾಯಗಳ ಸಂರಕ್ಷಣೆ, ಕೆರೆಗಳ ಭರ್ತಿ, ಕಿರು, ಮಧ್ಯಮಗಾತ್ರದ ಏತ ನೀರಾವರಿ ಯೋಜನೆಗಳ ಅನುಷ್ಠಾನ ಸಣ್ಣ ನೀರಾವರಿ ಇಲಾಖೆಯದಾಗಿದೆ. ಬೇಡಿಕೆಗಳ ಪಟ್ಟಿಗೆ ಹೋಲಿಸಿದರೆ ಇಲಾಖೆಗೆ ವಾರ್ಷಿಕ ಬಜೆಟ್‌ನಲ್ಲಿ ಲಭಿಸುವುದು ಅನುದಾನ ಅಲ್ಪವೆನಿಸುತ್ತದೆ.

ಮಂಜೂರಾದ ಅನುದಾನದಲ್ಲಿ ಹಳೇ ಬಿಲ್ ಪಾವತಿ, ಚಾಲ್ತಿ ಕಾಮಗಾರಿಗಳನ್ನು ಸರಿದೂಗಿಸಿ, ಹೊಸ ಯೋಜನೆಗಳಿಗೆ ಚಾಲನೆ ನೀಡಿ ಜನರ ನಿರೀಕ್ಷೆಗೆ ಸ್ಪಂದಿಸಲು ಪ್ರತಿ ಇಲಾಖೆ ಹೆಣಗಾಡುವುದು ಹೊಸದೇನಲ್ಲ ಎಂದು ಇಲಾಖೆ ಮೂಲಗಳು ಹೇಳುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net