

ಶ್ರೀನಗರ: ಕಾಶ್ಮೀರದಲ್ಲಿನ ಹಿಮಪರ್ವತಗಳಲ್ಲಿ 3,880 ಮೀಟರ್ ಎತ್ತರದಲ್ಲಿರುವ ಅಮರನಾಥ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಯಾತ್ರೆಯು ಹಿಂದಿನ ವರ್ಷದ ದಾಖಲೆ ಮುರಿದು ಈ ಬಾರಿ ಹೊಸ ದಾಖಲೆ ನಿರ್ಮಿಸಿದೆ.
ಯಾತ್ರೆ ಪ್ರಾರಂಭವಾದ ಕೇವಲ 29 ದಿನಗಳಲ್ಲಿ 4.51 ಲಕ್ಷ ಭಕ್ತರು ಈ ಯಾತ್ರೆಯಲ್ಲಿ ಪಾಲ್ಗೊಂಡು ಅಮರನಾಥ ಗುಹೆಗಳಲ್ಲಿರುವ ಹಿಮ ಶಿವಲಿಂಗದ ದರ್ಶನ ಪಡೆದರು. ದೇವಸ್ಥಾನ ಮಂಡಳಿ ಜೂನ್ 29 ರಂದು ಯಾತ್ರೆ ಪ್ರಾರಂಭಿಸಿದ್ದು ಈ ದಾಖಲೆಯನ್ನು ಕೇವಲ 29 ದಿನಗಳಲ್ಲಿ ಸಾಧಿಸಲಾಗಿದೆ ಎಂದು ಘೋಷಿಸಿದೆ.
ಕಳೆದ ವರ್ಷ ಇಡೀ ಯಾತ್ರೆಯಲ್ಲಿ 4.45 ಲಕ್ಷ ಭಕ್ತರು ಅಮರನಾಥಕ್ಕೆ ಭೇಟಿ ನೀಡಿದ್ದರು. ಈ ನಡುವೆ ಶನಿವಾರ(ಜು.27) ಸುಮಾರು 8ಸಾವಿರ ಯಾತ್ರಿಕರು ಅಮರನಾಥಕ್ಕೆ ಭೇಟಿ ನೀಡಿದ್ದರು. 1,677 ಮಂದಿ ಭಕ್ತರ ಮತ್ತೊಂದು ಗುಂಪು ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದಿಂದ ಅಮರನಾಥ ಗುಹೆಯತ್ತ ಪ್ರಯಾಣ ಬೆಳೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 29 ರಂದು ಯಾತ್ರೆ ಪ್ರಾರಂಭವಾದ ನಂತರ ಇದು ಮೊದಲ ಯಾತ್ರಿಕರ ಗುಂಪಿನ ಮೊದಲ ನಿರ್ಗಮನವಾಗಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭದ್ರತಾಪಡೆಗಳ ವ್ಯಾಪಕ ಭದ್ರತಾ ವ್ಯವಸ್ಥೆಗಳಿಂದಾಗಿ ಈ ವರ್ಷದ ಯಾತ್ರೆಯು ಸುಗಮವಾಗಿ ನಡೆಯುತ್ತಿದೆ ಎಂದು ದೇವಾಲಯ ಸಮಿತಿ ಘೋಷಿಸಿದೆ. 52 ದಿನಗಳ ಯಾತ್ರೆ ಆ.29 ರಂದು ಕೊನೆಗೊಳ್ಳುತ್ತದೆ.