

ಬೆಂಗಳೂರು: ರಾಜ್ಯದಲ್ಲಿ ಮುಂಬರುವ ಬಿಬಿಎಂಪಿ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೈತ್ರಿ ಇನ್ನಷ್ಟು ಗಟ್ಟಿ ಮಾಡಲು ಬಿಜೆಪಿ ಹಾಗೂ ಜೆಡಿಎಸ್ ಹೊಸ ಹೊಸ ಪ್ರಯೋಗ ನಡೆಸುತ್ತಿವೆ.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿಗೆ ಒಳ್ಳೆಯ ಸಲು ತಂದುಕೊಟ್ಟ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಡಳಿತ ಕಾಂಗ್ರೆಸ್ ಮಣಿಸಲು ಮೈತ್ರಿ ಮತ್ತಷ್ಟು ಬಲಗೊಳ್ಳುವುದು ಅನಿವಾರ್ಯ ಎಂಬುದು ಎರಡೂ ಪಕ್ಷಗಳ ನಾಯಕರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಅಲ್ಲದೆ, ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಕೇಂದ್ರದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದು, ಅವರ ಮೂಲಕ ರಾಜ್ಯವನ್ನು ಹಿಡಿತಕ್ಕೆ ತೆಗೆದುಕೊಳ್ಳಬೇಕೆಂಬುದು ಬಿಜೆಪಿ ದೆಹಲಿ ಹೈಕಮಾಂಡ್ ಲೆಕ್ಕಾಚಾರ. ಹಾಗಾಗಿ ಕುಮಾರಸ್ವಾಮಿಗೆ ಬಿಜೆಪಿಯಲ್ಲಿ ಎಲ್ಲಿಲ್ಲದ ಪ್ರಾಧಾನ್ಯತೆ ದೊರೆಯುತ್ತಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಪ್ರತಿ ಹಂತದಲ್ಲೂ ಕುಮಾರಸ್ವಾಮಿ ಕೈಜೋಡಿಸುತ್ತಿದ್ದಾರೆ. ವಿಧಾನ ಮಂಡಲದ ಒಳಗೆ ಹಾಗೂ ಹೊರಗೆ ನಡೆಸುವ ಹೋರಾಟಕ್ಕೆ ಸಾಥ್ ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿ ನಾಯಕರ ಜತೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಎಲ್ಲ ಸಂದರ್ಭಗಳನ್ನೂ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಒಂದು ರೀತಿಯಲ್ಲಿ ಕುಮಾರಸ್ವಾಮಿಯೇ ರಾಜ್ಯದ ಪ್ರತಿಪಕ್ಷದ ನಾಯಕರಂತೆ ಬಿಂಬಿತವಾಗುತ್ತಿದ್ದಾರೆ.
ಈವರೆಗೆ ಬರೀ ಸುದ್ದಿಗೋಷ್ಠಿ, ಬಹಿರಂಗ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದ ಕುಮಾರಸ್ವಾಮಿ ಮಳೆ ಹಾನಿ ಪ್ರದೇಶಗಳಿಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಜತೆ ಭೇಟಿ ನೀಡುವ ಮೂಲಕ ಮೈತ್ರಿ ಮತ್ತಷ್ಟು ಬಲಪಡಿಸುವ ಬಗ್ಗೆ ಜೆಡಿಎಸ್ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ರವಾನಿಸುತ್ತಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಜಂಟಿ ಹೋರಾಟ ಮುಂದುವರಿಸಲು ಭಿನ್ನಾಭಿಪ್ರಾಯ ಬದಿಗಿಟ್ಟು ಬಿಜೆಪಿ ಬೆಂಬಲಿಸಲು ಪಕ್ಷದ ನಾಯಕರು/ಕಾರ್ಯಕರ್ತರಿಗೆ ಮಹತ್ವದ ಸುಳಿವು ನೀಡಿದ್ದಾರೆ. ಇದು ಉಭಯ ಪಕ್ಷಗಳಲ್ಲಿ ಹೊಸ ಉತ್ಸಾಹ ಉಂಟು ಮಾಡಿದೆ. ಜತೆಗೆ ಹೋರಾಟಕ್ಕೆ ಹುರುಪು ತುಂಬಿದೆ.
ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯಾದ ಬಳಿಕ ಜೆಡಿಎಸ್‌ನಲ್ಲಿ ಒಂದು ಬಗೆಯ ನಿರ್ವಾತ ಸೃಷ್ಟಿಯಾಗಿದೆ. ಇದನ್ನು ತೆಗೆದುಹಾಕಲು ಕುಮಾರಸ್ವಾಮಿ ವಾರದಲ್ಲಿ ಎರಡು ದಿನ ರಾಜ್ಯಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ಕರ್ನಾಟಕದಲ್ಲೇ ಠಿಕಾಣಿ ಹೂಡಿ ರಾಜಕೀಯ ಕಾರ್ಯತಂತ್ರ ರೂಪಿಸಲು ಯೋಚಿಸಿದ್ದಾರೆ. ಬಿಜೆಪಿ ರಾಜ್ಯ ನಾಯಕರಿಗೂ ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಕುಮಾರಸ್ವಾಮಿ ಮಾರ್ಗದರ್ಶನ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ಭುಗಿಲೇಳಲಿದೆ. ಬಳಿಕ ಸರ್ಕಾರ ಪತನವಾಗಲಿದೆ ಎಂದು ಈ ಹಿಂದೆಯೇ ಹೇಳಿದ್ದರು. ಅದಕ್ಕೆ ಪೂರಕವೆಂಬಂತೆ ಮತ್ತೊಬ್ಬ ಕೇಂದ್ರ ಸಚಿವ ವಿ.ಸೋಮಣ್ಣ, ಈ ಸರ್ಕಾರ ಆರು ತಿಂಗಳು ನಡೆಯುತ್ತೋ ಇಲ್ಲವೋ ನನಗೆ ಯಾವುದೇ ಸುಳಿವು ಇಲ್ಲ. ಆದರೆ, ಕುಮಾರಸ್ವಾಮಿ ಅವರಿಗೆ ಅದರ ಬಗ್ಗೆ ಮಾಹಿತಿ ಇರಬಹುದು ಎಂದು ಮಾರ್ಮಿಕವಾಗಿ ಹೇಳಿದ್ದರು.
ಜತೆಗೆ ಕಾಂಗ್ರೆಸ್ ಸರ್ಕಾರದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ, ಮುಡಾ ಹಗರಣಗಳು ಸೇರಿದಂತೆ ಒಂದರ ಮೇಲೊಂದು ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಸಂದರ್ಭಗಳನ್ನು ಮೈತ್ರಿ ಪಕ್ಷಗಳು ಸಮರ್ಥವಾಗಿ ಬಳಸಿಕೊಂಡು ಸರ್ಕಾರದ ವಿರುದ್ಧ ಸಮರ ಸಾರಿವೆ. ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ರಾಜ್ಯದಲ್ಲಿ ಮೈತ್ರಿ ಪಕ್ಷಗಳು ನಡೆಸಿದ ಹೋರಾಟಕ್ಕೆ ಬಿಜೆಪಿ ದೆಹಲಿ ಹೈಕಮಾಂಡ್ ರಾಜ್ಯ ನಾಯಕರ ಬೆನ್ನು ಚಪ್ಪರಿಸಿದೆ. ಮುಡಾ ಹಗರಣದ ವಿರುದ್ಧವೂ ದೊಡ್ಡ ಮಟ್ಟದ ಹೋರಾಟ ಮಾಡುವಂತೆ ಸ್ಪಷ್ಟ ಸೂಚನೆ ನೀಡಿದೆ. ಹಾಗಾಗಿ ಈ ಹೋರಾಟಕ್ಕೆ ಕುಮಾರಸ್ವಾಮಿ ಕೂಡ ಕೈಜೋಡಿಸಿದ್ದಾರೆ. ಇವೆಲ್ಲ ಸರ್ಕಾರ ಅಸ್ಥಿರಗೊಳಿಸಲು ಇಡುತ್ತಿರುವ ಹೆಜ್ಜೆಗಳಾಗಿ ಮೈತ್ರಿ ಪಕ್ಷದಲ್ಲಿ ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ಹೋರಾಟ ದಿನೇ ದಿನೆ ಹುಮ್ಮಸ್ಸು ಪಡೆಯುತ್ತಿದೆ. ಆಡಳಿತ ಕಾಂಗ್ರೆಸ್‌ಗೆ ಕುತ್ತು ತಂದಿದೆ.