ಕೃಷಿ ಸಮಸ್ಯೆಗೆ ಪರಿಹಾರ ಅಗತ್ಯ

klr kvk
ಕೋಲಾರ ಐಸಿಎಆರ್​-ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಸ್ತರಣಾ ಸೇವೆಗಳಲ್ಲಿ ಡಿಪ್ಲೋಮಾ ಕೋರ್ಸ್​ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಸೋಮವಾರ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಂ.ಆರ್​.ಸುಮಾ ಉದ್ಘಾಟಿಸಿದರು. ಕೆ.ತುಳಸಿರಾಮ್​, ಡಾ.ಕೆ.ಎಸ್​.ನಾಗರಾಜ್​, ಡಾ.ವೆಂಕಟೇಶಲು ಇದ್ದರು.
Published on

ಕೋಲಾರ: ಕೃಷಿ ಪರಿಕರ ಮಾರಾಟಗಾರರಿಂದ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಆಗಬೇಕಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಆರ್​.ಸುಮಾ ಹೇಳಿದರು.

ಕೋಲಾರ ಐಸಿಎಆರ್​ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಗಳಲ್ಲಿ ಡಿಪ್ಲೋಮಾ ಕೋರ್ಸ್​ ತರಬೇತಿ ಅಭ್ಯರ್ಥಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಿಕರ ಮಾರಾಟಗಾರರ ಕೃಷಿ ಮಾಹಿತಿ ವಿಸ್ತರಣೆ ಸಾಮರ್ಥ್ಯ ಮತ್ತು ನಿರ್ವಹಣೆಯನ್ನು ಉನ್ನತಿಕರಿಸುವುದು. ಕೃಷಿಗೆ ಸಂಬಂದಿಸಿದಂತೆ ಕಾನೂನುಗಳ ಬಗ್ಗೆ ಮಾಹಿತಿ ಒದಗಿಸುವುದು ಹಾಗೂ ಗ್ರಾಮಿಣಮಟ್ಟದಲ್ಲಿ ಕೃಷಿಕರಿಗೆ ಒಂದೇ ಸೂರಿನಡಿ ಮಾಹಿತಿ ದೊರೆಯುವಂತೆ ಮಾಡುವುದು ಕೋರ್ಸ್​ನ ಉದ್ದೇಶವಾಗಿದೆ. ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ರೈತರಿಗೆ ಕೃಷಿ ಮಾಹಿತಿ ತಲುಪಿಸುವ ಪ್ರಾಥಮಿಕ ಮೂಲ ಕೃಷಿ ಪರಿಕರ ಮಾರಾಟಗಾರರು, ಇತ್ತೀಚಿನ ದಿನಗಳಲ್ಲಿ ಮಾರಾಟಗಾರರಿಗೆ ದೇಸಿ ಕೋರ್ಸ್​ ತರಬೇತಿ ಅತ್ಯವಶ್ಯಕವಾಗಿದೆ. ರೈತರು ಕೆಲವೊಮ್ಮೆ ಕೃಷಿಯಲ್ಲಿ ಸಮಸ್ಯೆ ಕಂಡುಬಂದಲ್ಲಿ ವಿಜ್ಞಾನಿಗಳನ್ನು ಸಂಪರ್ಕಿಸದೆ ನೇರವಾಗಿ ಕೃಷಿ ಪರಿಕರ ಮಾರಾಟಗಾರರ ಅಂಗಡಿಗೆ ಭೇಟಿಕೊಟ್ಟು ಪರಿಕರಗಳನ್ನು ಖರೀದಿಸುತ್ತಾರೆ. ಈ ನಿಟ್ಟಿನಲ್ಲಿ ಕೃಷಿ ಪರಿಕರ ಮಾರಾಟಗಾರರು ಕೃಷಿಯ ತಾಂತ್ರಿಕ ಮಾಹಿತಿಯ ಬಗ್ಗೆ ತಿಳಿಸಬೇಕು ಎಂದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಶಿವಾನಂದ ಹೊಂಗಲ ಮಾತನಾಡಿ, ದೇಸಿ, ಡಿಪ್ಲೋಮಾ ಕಾರ್ಯಕ್ರಮವು ಕೃಷಿ ಪರಿಕರ ವಿತರಕರಿಗೆ ಒಂದು ವರ್ಷದ ಅವಧಿಯ ಡಿಪ್ಲೋಮಾ ಕೋರ್ಸ್​ ಆಗಿದ್ದು, ಪರಿಕರ ವಿತರಕರ ಕೃಷಿ ಜ್ಞಾನವನ್ನು ನವೀಕರಿಸುವ ಮತ್ತು ಕೃಷಿ ತಾಂತ್ರಿಕತೆಗಳನ್ನು ವರ್ಗಾಯಿಸುವ ಕಾರ್ಯದಲ್ಲಿ ಪರಿಕರ ವಿತರಕರನ್ನು ಪೂರಕ ವಿಸ್ತರಣಾ ಕಾರ್ಯಕರ್ತರಾಗಿ ಬಳಸಿಕೊಳ್ಳುವ ಉದ್ದೇಶ ಎಂದು ಮಾಹಿತಿ ನೀಡಿದರು.

ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಮಾಹಿತಿ ನೀಡಲು ವರದಾನವಾಗಿದೆ. ಪದವಿಯಲ್ಲಿ ಕೃಷಿ ವಿಸ್ತರಣೆ, ಬೆಳೆ ನಿರ್ವಹಣೆ, ಮಣ್ಣು ವಿಜ್ಞಾನ, ಹವಾಮಾನ ಶಾಸ್ತ್ರ, ರಾಸಾಯನಿಕಗಳ ಬಳಕೆ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.

ತೋಟಗಾರಿಕೆ ಮಹಾವಿದ್ಯಾಲಯದ ಹಣ್ಣು ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎಸ್​.ನಾಗರಾಜ್​, ಕೃಷಿ ವಿಜ್ಞಾನ ಕೇಂದ್ರದ ರೇಷ್ಮೆ ಕೃಷಿ ವಿಜ್ಞಾನಿ ಡಾ.ಕೆ.ಆರ್​.ಶಶಿಧರ್​, ಹವಾಮಾನ ಶಾಸ್ತ್ರದ ವಿಷಯ ತಜ್ಞೆ ಜಿ.ಆರ್​.ಸ್ವಾತಿ, ದೇಸಿ ಕೋರ್ಸ್​ ಅನುವುಗಾರ ಶಶಿಕುಮಾರ್​ ಇತರರಿದ್ದರು.

* ರೈತರ ಸಮೃದ್ಧಿಗೆ ಕೊಡುಗೆ

ಕೃಷಿ ವಿಸ್ತರಣಾ ಸೇವೆಗಳಲ್ಲಿ ಡಿಪ್ಲೊಮಾ ವಿತರಕರನ್ನು ಸಬಲೀಕರಣಗೊಳಿಸಲು ತರಬೇತಿ ಉಪಕ್ರಮವಾಗಿದೆ. ಸುಧಾರಿತ ಕೃಷಿ ಉತ್ಪಾದಕತೆ ಮತ್ತು ರೈತರ ಸಮೃದ್ಧಿಗೆ ಕೊಡುಗೆ ನೀಡಿದಂತಾಗುತ್ತದೆ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್​ ಡಾ.ವೆಂಕಟೇಶಲು ಹೇಳಿದರು. ಡಿಪ್ಲೊಮಾ ಕೋರ್ಸ್​ನಲ್ಲಿ ಪಡೆದ ತರಬೇತಿಯನ್ನು ರೈತರಿಗೆ ತಲುಪಿಸುವ ಕೆಲಸ ಮಾಡಬೇಕು. ರೈತರ ಶ್ರೇಯೋಭಿವೃದ್ಧಿಗಾಗಿ ಕರ್ತವ್ಯ ನಿರ್ವಹಿಸಿ, ಪರಿಕರ ವ್ಯವಹಾರಕ್ಕೆ ಸಿಮೀತಗೊಳ್ಳದೆ ಉಪಯೋಗವಾಗುವ ಪರಿಕರ ಮಾರಾಟ ಮಾಡಬೇಕು ಎಂದು ಸಲಹೆ ನೀಡಿದರು.

* ರೈತರ ಅಭಿವೃದ್ಧಿಗೆ ಒಳಿತಾಗಲಿ

ನಿವೃತ್ತ ಸಂಶೋಧನಾ ನಿರ್ದೇಶಕ ಡಾ.ವಿ.ನಾಚೇಗೌಡ ಮಾತನಾಡಿ, ಸುಸ್ಥಿರ ಬೆಳವಣಿಗೆ, ರೈತರ ಅಭಿವೃದ್ಧಿ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಮರ್ಥ್ಯ ವೃದ್ಧಿಯನ್ನು ಹೆಚ್ಚಿಸುತ್ತದೆ. ಕೃಷಿ ವಿಜ್ಞಾನ ಕೇಂದ್ರದಲ್ಲಿ ಡಿಪ್ಲೊಮಾ ಪದವಿಯು ಕೇವಲ ಪ್ರಮಾಣ ಪತ್ರಕ್ಕೆ ಸೀಮಿತವಾಗದೆ ರೈತರ ಅಭಿವೃದ್ಧಿಗೆ ಒಳಿತಾಗಲಿ ಎಂದರು.

* ಹೊಸ ಪದ್ಧತಿ ಅಳವಡಿಕೆ ಪೂರಕ

ಕೃಷಿ ಪರಿಕರ ಮಾರಾಟಗಾರರಿಗೆ ಡಿಪ್ಲೊಮಾ ಕೊರ್ಸ್​ ಮಾಡುತ್ತಿರುವುದು ಹೆಮ್ಮೆಯ ಸಂಗತಿ, ಕೃಷಿಕರಿಗೆ ಅಗತ್ಯವಾಗಿ ಬೇಕಾಗಿರುವ ವಸ್ತು ಖರೀದಿ ಮಾಡುತ್ತಾರೆ ಎಂದರೆ ಅದರ ಸಂಪೂರ್ಣ ಮಾಹಿತಿ ಒದಗಿಸಬೇಕು. ಇದರಿಂದಾಗಿ ಹೊಸ ಹೊಸ ಪದ್ಧತಿಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತೋಟಗಾರಿಕೆ ಮಹಾವಿದ್ಯಾಲಯ ಕೀಟಶಾಸ್ತ್ರದ ಸಹ ಪ್ರಾಧ್ಯಾಪಕ ಕೆ.ತುಳಸಿರಾಮ್​ ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net