ಸಮಸ್ಯೆಗಳ ಸರಮಾಲೆಯನ್ನೇ ಮುಂದಿಟ್ಟ ಆದಿಜಾಂಬವ ಸಮುದಾಯದವರು

HUN-FEB-20-2(ADIJAMBHAVA MEETING)
ಹುಣಸೂರು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಬಿ.ಶಿವಣ್ಣ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಶಾಸಕ ಜಿ.ಡಿ.ಹರೀಶ್‌ಗೌಡ, ವಿಧಾನಪರಿಷತ್ ಸದಸ್ಯ ಡಿ.ತಿಮ್ಮಯ್ಯ, ಇಒ ಕೆ.ಹೊಂಗಯ್ಯ, ಎಡಿ ಅಶೋಕ್‌ಕುಮಾರ್ ಇದ್ದಾರೆ.
Published on

ಹುಣಸೂರು: ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಆದಿಜಾಂಬವ ಸಮುದಾಯ(ಪರಿಶಿಷ್ಟ ಜಾತಿ)ದ ಕುಂದುಕೊರತೆ ಸಭೆಯಲ್ಲಿ ತಾಲೂಕಿನಾದ್ಯಂತ ಸ್ಮಶಾನಗಳ ಸಮಸ್ಯೆ, ಸಮುದಾಯ ಭವನಗಳ ಕೊರತೆ, ಸಾಗುವಳಿ ಪತ್ರ ಮುಂತಾದ ಸಮಸ್ಯೆಗಳ ಸರಮಾಲೆಯನ್ನು ಅಧಿಕಾರಿಗಳ ಮುಂದೆ ಮುಖಂಡರು ಮಂಡಿಸಿದರು.

ಗುರುವಾರ ಶಾಸಕ ಜಿ.ಡಿ.ಹರೀಶ್‌ಗೌಡ ಮತ್ತು ವಿಧಾನ ಪರಿಷತ್ ಸದಸ್ಯ ಡಿ.ತಿಮ್ಮಯ್ಯ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತಾಲೂಕಿನ ಸಿದ್ದಲಿಂಗಪುರ, ಬಿಳಿಗೆರೆ, ಬನ್ನಿಕುಪ್ಪೆ, ಹಳೇವಾರಂಚಿ ಮುಂತಾದ ಗ್ರಾಮಗಳಲ್ಲಿ ಸ್ಮಶಾನದ ಅಭಿವೃದ್ಧಿಯಲ್ಲಿ ಕೊರತೆ, ಒತ್ತುವರಿ ತೆರವು ಮುಂತಾದ ಸಮಸ್ಯೆಗಳನ್ನು ಗ್ರಾಮದ ಮುಖಂಡರು ತಿಳಿಸಿದರು. ಹಳೆವಾರಂಚಿಯಲ್ಲಿ ಇಂದಿಗೂ ಸ್ಮಶಾನವಿಲ್ಲ, ಜನರು ರಸ್ತೆಬದಿ ಹೂಳುತ್ತಿದ್ದಾರೆ ಎಂದು ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಬಿ.ಶಿವಣ್ಣ ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳ ಗೈರಿಗೆ ಶಾಸಕ ಗರಂ: ಸಭೆಯಲ್ಲಿ ಮಾತನಾಡಿದ ಶಾಸಕ ಜಿ.ಡಿ.ಹರೀಶ್‌ಗೌಡ, ತಿಂಗಳ ಹಿಂದೆ ಆಯೋಜನೆಗೊಂಡಿದ್ದ ಎಸ್‌ಸಿ, ಎಸ್ಟಿ ಕುಂದುಕೊರತೆ ಸಭೆಯಲ್ಲಿ ಆದಿಜಾಂಬವ ಸಂಘದ ಸದಸ್ಯರು ತಮ್ಮ ಅಹವಾಲುಗಳನ್ನು ಮುಕ್ತವಾಗಿ ಚರ್ಚಿಸಲು ಪ್ರತ್ಯೇಕ ಸಭೆ ನಡೆಸಲು ಕೋರಿದ್ದರು. ಅದರಂತೆ ಇದೀಗ ಮೊದಲ ಸಭೆ ಆಯೋಜಿಸಲಾಗಿದೆ. ಇನ್ನು ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ತಿಂಗಳ ಮೊದಲ ಮಂಗಳವಾರ ಸಭೆ ಆಯೋಜಿಸಲಿದ್ದೇನೆ. ಇಂದಿನ ಈ ಸಭೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದಾರೆ. ಕಾರಣವನ್ನೂ ತಿಳಿಸಿಲ್ಲ ಅಥವಾ ತಮ್ಮ ಅಧೀನ ಅಧಿಕಾರಿಯನ್ನು ಕಳುಹಿಸಿಲ್ಲ. ಇದೀಗ ರಾಜ್ಯ ಸರ್ಕಾರದ ಎಸ್ಸಿ ಎಸ್ಟಿ ಲೆಜಿಸ್ಲೇಚರ್ ಸಮಿತಿಯ ಸದಸ್ಯರಾಗಿ ವಿಧಾನಪರಿಷತ್ ಸದಸ್ಯ ಡಿ.ತಿಮ್ಮಯ್ಯ ನೇಮಕಗೊಂಡಿದ್ದು, ಇನ್ನು ಮುಂದೆ ಸರ್ಕಾರ ಆಯೋಜಿಸುವ ಸಭೆಗಳಿಗೆ ಗೈರಾಗುವ ಅಧಿಕಾರಿಗಳ ಮಾಹಿತಿಯನ್ನು ನಿರ್ಣಯ ಕೈಗೊಂಡು ಡಿ.ತಿಮ್ಮಯ್ಯರಿಗೆ ಕಳುಹಿಸುತ್ತೇವೆ. ನಿಮ್ಮ ಸಮಿತಿ ಸಭೆಯಲ್ಲಿ ನೀವು ಸೂಕ್ತ ಶಿಸ್ತು ಕ್ರಮ ಕೈಗೊಳ್ಳಿರೆಂದು ಡಿ.ತಿಮ್ಮಯರಿಗೆ ಕೋರಿದರು. ಇದಕ್ಕೆ ಶಾಸಕ ಡಿ.ತಿಮ್ಮಯ್ಯ ಸಹಮತ ಸೂಚಿಸಿದರು. ಜನರು ಅಹವಾಲು ನೀಡಿ ಹಾಗೆ ತೆರಳಬೇಡಿ. ಅಧಿಕಾರಿಗಳಿಂದ ಹಿಂಬರಹ ಪಡೆದು ಮುಂದಿನ ಸಭೆಗೆ ಬನ್ನಿ. ಕೆಲಸ ಆಗಿಲ್ಲವೆಂದರೆ ಆಗ ಅಧಿಕಾರಿಗೆ ನಾವು ಮಾತನಾಡುತ್ತೇವೆ ಎಂದರು.

ಶಾಸಕ ಹರೀಶ್‌ಗೌಡ ಇತರರಿಗೆ ಮಾದರಿ:

ಎಂಎಲ್‌ಸಿ ಡಿ.ತಿಮ್ಮಯ್ಯ ಮಾತನಾಡಿ, ಜಿಲ್ಲೆಯಲ್ಲೇ ಇದೇ ಮೊದಲ ಬಾರಿಗೆ ಕ್ರಿಯಾಶೀಲ ಶಾಸಕ ಜಿ.ಡಿ.ಹರೀಶ್‌ಗೌಡ ಆದಿಜಾಂಬವ ಸಮಾಜದವರಿಗಾಗಿಯೇ ಪ್ರತ್ಯೇಕವಾಗಿ ಕುಂದುಕೊರತೆ ಸಭೆ ಆಯೋಜಿಸುವ ಮೂಲಕ ಮಾದರಿಯಾಗಿದ್ದಾರೆ. ಅವರ ಜನಪರ ಕಾಳಜಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಜಿಲ್ಲಾದ್ಯಂತ ಇದೇ ಮಾದರಿಯಲ್ಲಿ ಇತರ ತಾಲೂಕುಗಳಲ್ಲೂ ಸಭೆ ಆಯೋಜಿಸಲಿ. ಕಳೆದೆರಡು ವರ್ಷಗಳಲ್ಲಿ ನನ್ನ ಶಾಸಕ ಅನುದಾನದಡಿ ಒಟ್ಟು 75 ಲಕ್ಷ ರೂ.ಗಳನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನೀಡಿದ್ದೇನೆ. ನಗರದ ಬಾಬು ಜಗಜೀವನರಾಂ ಸಮುದಾಯ ಭವನಕ್ಕೆ 25 ಲಕ್ಷ ರೂ.ಗಳನ್ನು ನೀಡಿದ್ದೇನೆ. ಎಂದರು.

ಸಭೆಯಲ್ಲಿ ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ಬಿ.ಶಿವಣ್ಣ, ಜಿಲ್ಲಾ ಸಮಿತಿ ಸದಸ್ಯ ಡಿ.ಕುಮಾರ್, ಆಂಜನೇಯ, ಸರಸ್ವತಿಪುರಂ ನಾಗರಾಜು, ಸಿದ್ದಯ್ಯ, ಮಹದೇವಮ್ಮ, ಮೋಹನ್, ಮಹೇಶ್ ಕುಮಾರ್, ತಹಸೀಲ್ದಾರ್ ಜೆ.ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್‌ಕುಮಾರ್, ಇಒ ಕೆ.ಹೊಂಗಯ್ಯ ಸೇರಿದಂತೆ ಪಿಡಿಒಗಳು, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

15 ಲಕ್ಷ ಅನುದಾನ ನೀಡುತ್ತೇನೆ: 11 ವರ್ಷಗಳ ಹಿಂದೆ ನಗರದ ಬಾಬು ಜಗಜೀವನರಾಂ ಸಮುದಾಯ ಭವನ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದರೂ ಇಂದಿಗೂ ಸಂಪೂರ್ಣಗೊಂಡಿಲ್ಲ. ಇದೀಗ ವಿಧಾನಪರಿಷತ್ ಸದಸ್ಯ ಡಿ.ತಿಮ್ಮಯ್ಯ 25 ಲಕ್ಷ ರೂ.ಗಳ ಅನುದಾನ ನೀಡಿದ್ದಾರೆ. ನಾನು ನನ್ನ ಅನುದಾನದಡಿ 15 ಲಕ್ಷ ರೂ.ಗಳನ್ನು ನೀಡುತ್ತೇನೆ. ಸಮುದಾಯ ಭವನದ ಕಾಮಗಾರಿ ಪೂರ್ಣಗೊಳಿಸೋಣವೆಂದು ಶಾಸಕ ಜಿ.ಡಿ.ಹರೀಶ್‌ಗೌಡ ಘೋಷಿಸಿದಾಗ ಸಭೆ ಕರಾಡತನದೊಂದಿಗೆ ಹರ್ಷ ವ್ಯಕ್ತಪಡಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net