

ಬೆಂಗಳೂರು: ಕದ್ದ ಮೊಬೈಲ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹದೇವಪುರದ ಸಾಗರ್(೨೧) ಬಂಧಿತ. ಆರೋಪಿಯಿಂದ ೨ ಲಕ್ಷ ರೂ. ಮೌಲ್ಯದ ೧೮ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಕಗ್ಗದಾಸನಪುರ ಬಾಲಾಜಿ ಲೇಔಟ್‌ನ ನಿರ್ಮಾಣ ಹಂತದ ಕಟ್ಟಡವೊಂದರ ಕಾರ್ಮಿಕರ ಶೆಡ್‌ನಲ್ಲಿ ಕಾರ್ಮಿಕನೊಬ್ಬನ ಮೊಬೈಲ್ ಕಳುವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ನೇಪಾಳ ಮೂಲದ ಸಾಗರ್ ಕೆಲ ವರ್ಷಗಳ ಹಿಂದೆ ಉದ್ಯೋಗ ಅರಸಿ ತಂದೆ ಜತೆಗೆ ನಗರಕ್ಕೆ ಬಂದಿದ್ದು, ಮಹದೇವಪುರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸೆಕ್ಯೂರಿಗಾರ್ಡ್ ಕೆಲಸ ಮಾಡುತ್ತಿದ್ದ. ಆರೋಪಿಯು ಮಹದೇವಪುರ, ಬೈಯಪ್ಪನಹಳ್ಳಿ ವ್ಯಾಪ್ತಿಯಲ್ಲಿ ಓಡಾಡಿಕೊಂಡು ಕಿಟಕಿ ತೆರೆದಿರುವ ಮನೆಗಳು ಹಾಗೂ ಜನಜಂಗುಳಿ ಇರುವ ಪ್ರದೇಶಗಳಲ್ಲಿ ಸಾರ್ವಜನಿಕರ ಮೊಬೈಲ್ ಕಳುವು ಮಾಡುತ್ತಿದ್ದ. ಇತ್ತೀಚೆಗೆ ಕಾರ್ಮಿಕರ ಶೆಡ್‌ನಲ್ಲಿ ಕಳವು ಮಾಡಿದ್ದ ಮೊಬೈಲ್ ಫೋನ್ ಅನ್ನು ಬೆನ್ನಿಗಾನಹಳ್ಳಿಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ೧೮ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಯ ಬಂಧನದಿಂದ ಬೈಯಪ್ಪನಹಳ್ಳಿ ಮತ್ತು ಎಚ್‌ಎಎಲ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಮೊಬೈಲ್ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.