ಬಿಬಿಎಂಪಿ ಮಹಿಳಾ ಅಧಿಕಾರಿಗೆ ಜೀವ ಬೆದರಿಕೆ ಹಾಕಿದ್ದ ಆರೋಪಿ ಬಂಧನ

arrested
Published on

ಬೆಂಗಳೂರು : ಬಿಬಿಎಂಪಿ ಕಚೇರಿಗೆ ನುಗ್ಗಿ ಮಹಿಳಾ ಅಧಿಕಾರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗೋವಿಂದರಾಜನಗರ ನಿವಾಸಿ ಅರುಣ್‌ಕುಮಾರ್(೫೫) ಬಂಧಿತ.

ಮಲ್ಲೇಶ್ವರದ ಬಿಬಿಎಂಪಿ ಪಶ್ಚಿಮ ವಲಯದ ನಗರ ಯೋಜನೆ ವಿಭಾಗದ ಸಹಾಯಕ ಇಂಜಿನಿಯರ್ ಕೆ.ಜೆ.ಮೋನಿಕಾ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಮತೊಬ್ಬ ಆರೋಪಿ ಜಯಕುಮಾರ್ ಗೌಡ ಎಂಬಾತನ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಮೋನಿಕಾ ಅವರು ಅ.೧೮ರಂದು ಸಂಜೆ ೫.೩೦ರ ಸುಮಾರಿಗೆ ಕಚೇರಿಯಲ್ಲಿ ಇದ್ದರು. ಈ ವೇಳೆ ಆರ್ಕಿಟೆಕ್ಟ್(ವಾಸ್ತುಶಿಲ್ಪಿ)ಅರುಣ್ ಕುಮಾರ್ ಮತ್ತು ಆರ್‌ಟಿಐ ಕಾರ್ಯಕರ್ತ ಜಯಕುಮಾರ್ ಬಂದಿದ್ದಾರೆ. ಈ ವೇಳೆ ಅರುಣ್ ಕುಮಾರ್ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಕ್ಷೆ ಮಂಜೂರಾತಿಗೆ ಸಹಿ ಮಾಡುವಂತೆ ಕೂಗಾಡಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಈ ರೀತಿಯ ವರ್ತನೆ ಸರಿಯಲ್ಲ. ನಕ್ಷೆ ಮಂಜೂರಾತಿ ಸಂಬಂಧದ ಕಡತವನ್ನು ನಗರ ಯೋಜನೆ ವಿಭಾಗದ ಸಹಾಯಕ ನಿರ್ದೇಶಕರಿಗೆ ಕಳುಹಿಸಿ ಕೊಡಲಾಗಿದೆ. ನೀವು ಅಲ್ಲಿಗೆ ತೆರಳಿ ವಿಚಾರಿಸಿ ಎಂದು ಮೋನಿಕಾ ಹೇಳಿದ್ದಾರೆ. ಇದರಿಂದ ಕೋಪಗೊಂಡ ಅರುಣ್ ಮತ್ತು ಜಯಕುಮಾರ್ ಜೋರಾಗಿ ಕಿರುಚಾಡಿ ಮೋನಿಕಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮೋನಿಕಾ ಕಚೇರಿಯಿಂದ ಹೊರಗೆ ಬರಲು ಪ್ರಯತ್ನಿಸುವಾಗ ಅರುಣ್ ಆಕೆಯ ಕೈ ಹಿಡಿದು ಎಳೆದಾಡಿದ್ದಾರೆ ಎನ್ನಲಾಗಿದೆ. ಆಗ ಜಯಕುಮಾರ್ ತನ್ನ ಮೊಬೈಲ್‌ನಲ್ಲಿ ಈ ಗಲಾಟೆಯನ್ನು ಸೆರೆ ಹಿಡಿದಿದ್ದಾರೆ. ಕಚೇರಿಯ ಬಾಗಿಲು ಹಾಕಿಕೊಂಡು ಮೋನಿಕಾ ಹೊರಗೆ ಬರಲು ಅಡ್ಡಿಪಡಿಸಿದ್ದಾರೆ. ನಮ್ಮ ಕೆಲಸ ಮಾಡಿಕೊಡದಿದ್ದಲ್ಲಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಅರುಣ್ ಮತ್ತು ಜಯಕುಮಾರ್ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶೇಷಾದ್ರಿಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net