108 ಅಡಿ ಎತ್ತರದ ರಾಜಗೋಪುರ ಉದ್ಘಾಟನೆ 12ಕ್ಕೆ

temple
ಸುರೇಶ್ ಬಾಳೆಗುಂಡಿ
Published on

ಶಿವಮೊಗ್ಗ: ನಗರದ ಸೋಮಿನಕೊಪ್ಪ ಮುಖ್ಯರಸ್ತೆಯಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ, ಬನಶಂಕರಿ ದೇವಾಲಯದ ದಶಮಾನೋತ್ಸವ ಹಾಗೂ 108 ಅಡಿ ಎತ್ತರದ ರಾಜಗೋಪುರ ಶಿಖರ ಕಲಶ ಪ್ರತಿಷ್ಠಾಪನೆ ಅಂಗವಾಗಿ ಮಾ.10ರಿಂದ 12ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನ ಸಮಿತಿ ಸಲಹೆಗಾರ ಸುರೇಶ್ ಕೆ. ಬಾಳೆಗುಂಡಿ ತಿಳಿಸಿದ್ದಾರೆ.

ಮಾರುತಿ ಪ್ರತಿಷ್ಠಾನಂನಿಂದ ವಿಗ್ರಹ ಪ್ರತಿಷ್ಠಾಪನೆಯಾಗಿ 10 ವರ್ಷ ಸಂದಿದೆ. ಇದೀಗ ದೇವಸ್ಥಾನಕ್ಕೆ 108 ಅಡಿ ಎತ್ತರದ ಅತ್ಯಂತ ಸುಂದರವಾದ ರಾಜಗೋಪುರ ನಿರ್ಮಾಣವಾಗಿದೆ. ಇದರ ಉದ್ಘಾಟನೆಗೆ ಎಲ್ಲ ಸಿದ್ಧತೆಗಳು ನಡೆದಿವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾ.10ರ ಬೆಳಗ್ಗೆ 7ಕ್ಕೆ ಗಣಪತಿ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಗಳು ಆರಂಭವಾಗಲಿವೆ. ಸಂಜೆ 5.30ಕ್ಕೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಶಕಟಪುರಂ ಸಂಸ್ಥಾನದ ಶ್ರೀ ವಿದ್ಯಾಭಿನವ ಕೃಷ್ಣಾನಂದತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ ಪಾಲ್ಗೊಳ್ಳುವರು ಎಂದರು.

ಮಾ.11ರ ಬೆಳಗ್ಗೆ 8ರಿಂದ ಬನಶಂಕರಿ ಅಮ್ಮನವರು ಹಾಗೂ ಪಂಚಮುಖಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ಕುಂಭಾಭಿಷೇಕ ನಡೆಯಲಿದೆ. ಬಳಿಕ ಕೃಷ್ಣಾನಂದತೀರ್ಥ ಶ್ರೀಗಳು ಆಶೀರ್ವಚನ ನೀಡುವರು. ಸಂಜೆ 6ಕ್ಕೆ ಭಕ್ತಿಸಂಗೀತ ಆಯೋಜನೆಯಾಗಿದೆ.

ಮಾ.12ರ ಬೆಳಗ್ಗೆ 8ರಿಂದ ರಾಜಗೋಪುರ ಶಿಖರ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕುಂಭಾಭಿಷೇಕ ನಡೆಯಲಿದೆ. 11ಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಶಿಖರ ಕಲಶ ಉದ್ಘಾಟಿಸುವರು. ಶಾಶ್ವತ ಶಿಲಾಫಲಕವನ್ನು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹಾಗೂ ತೇಜಸ್ವಿನಿ ರಾಘವೇಂದ್ರ ಉದ್ಘಾಟಿಸುವರು ಎಂದು ತಿಳಿಸಿದರು.

ದೇವಾಲಯ ಧರ್ಮದರ್ಶಿ ರವೀಂದ್ರ ಭಟ್, ಆಡಳಿತಾಧಿಕಾರಿ ದಿವ್ಯಾ, ಪ್ರಮುಖರಾದ ಸುಬ್ರಹ್ಮಣ್ಯ ಭಟ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net