ದೆಹಲಿಯಲ್ಲಿ 30 ಅಡಿಯ ಬೃಹತ್ ಜಿರಳೆ ಪ್ರತಿಕೃತಿ ದಹನ: 'ಫ್ರೀ ಪ್ರಚಾರಕ್ಕಾಗಿ ಥ್ಯಾಂಕ್ಸ್' ಎಂದ ಅಭಿಜಿತ್ ದೀಪ್ಕೆ.. Cockroach Effigy

ದೆಹಲಿಯಲ್ಲಿ 30 ಅಡಿಯ ಬೃಹತ್ ಜಿರಳೆ ಪ್ರತಿಕೃತಿ ದಹನ: 'ಫ್ರೀ ಪ್ರಚಾರಕ್ಕಾಗಿ  ಥ್ಯಾಂಕ್ಸ್' ಎಂದ ಅಭಿಜಿತ್ ದೀಪ್ಕೆ..  Cockroach Effigy
Published on: 
  • ದೆಹಲಿಯಲ್ಲಿ ರಾವಣ, ಕುಂಭಕರ್ಣನ ಜೊತೆಗೆ 30 ಅಡಿಯ ಬೃಹತ್ ಜಿರಳೆ ಪ್ರತಿಕೃತಿ ದಹನ.

  • ಜಿರಳೆ ಕೊಳಕಿನ ಸಂಕೇತ ಹೀಗಾಗಿ, ದೆಹಲಿ ಸ್ವಚ್ಛತಾ ಅಭಿಯಾನದ ಭಾಗವಾಗಿ ಜಿರಳೆ ಪ್ರತಿಕೃತಿ ಮಾಡಲಾಗಿದೆ ಎಂದ ಸಮಿತಿ.

  • ಪುಕ್ಸಟ್ಟೆಯಾಗಿ ಪ್ರಚಾರ ಮಾಡಿದ್ದಾಕ್ಕಾಗಿ ಬಹಳ ಧನ್ಯವಾದ ಎಂದ ಸಿಜೆಪಿ ಮುಖ್ಯಸ್ಥ ಅಭಿಜಿತ್ ದೀಪ್ಕೆ

ನವ ದೆಹಲಿ: ಇಲ್ಲಿನ ಪಿತ್ರಾಪುರದಲ್ಲಿ ನಡೆದ ದಸರಾ ಮಹೋತ್ಸವದಲ್ಲಿ ರಾವಣ, ಕುಂಭಕರ್ಣನ ಬೃಹತ್​ ಪ್ರತಿಕೃತಿ ಜೊತೆಗೆ 30 ಅಡಿಯ ಜಿರಳೆ ಪ್ರತಿಕೃತಿಯನ್ನು ದಹನ ಮಾಡಿರುವ ದೃಶ್ಯಗಳು ಸೋಶಿಯಲ್​​​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಪೋಸ್ಟ್​ ಹಂಚಿಕೊಂಡ ಸಿಜೆಪಿ ಮುಖ್ಯಸ್ಥ ಅಭಿಜಿತ್​ ದೀಪ್ಕೆ ಉಚಿತ ಪ್ರಚಾರಕ್ಕೆ ಧನ್ಯವಾದಗಳು ಎಂದು ವ್ಯಂಗ್ಯವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ವಿಜಯದಶಮಿಯಂದು ದೆಹಲಿಯ ನೇತಾಜಿ ಸುಭಾಷ್ ಪ್ಲೇಸ್‌ನಲ್ಲಿರುವ ಡಿಡಿಎ ಮೈದಾನದಲ್ಲಿ ಶ್ರೀ ಕೇಶವ್ ರಾಮಲೀಲಾ ಸಮಿತಿಯು ಕಾರ್ಯಕ್ರಮ ಆಯೋಜಿಸಿತ್ತು. ರಾವಣ, ಕುಂಭಕರ್ಣನ ಬೃಹತ್ ಪ್ರತಿಕೃತಿಗಳನ್ನು ನಿರ್ಮಿಸಿ ದಹಿಸುವ ವಾಡಿಕೆಯ ಜೊತೆಗೆ, ಈ ಬಾರಿ ವಿಶೇಷವಾಗಿ 30 ಅಡಿ ಎತ್ತರದ ಜಿರಳೆ ಪ್ರತಿಕೃತಿಯನ್ನು ಸಹ ದಹಿಸಲಾಯಿತು.

ಸಿಜೆಪಿ ಗುರಿ

ಆದರೆ, ಈ ಬೆಳವಣಿಗೆಯೂ ಸೋಶಿಯಲ್​ ಮೀಡಿಯಾದಲ್ಲಿ ನಾನಾ ಚರ್ಚೆಗೆ ಕಾರಣವಾಗಿದೆ. 'ಕಾಕ್ರೋಚ್ ಜನತಾ ಪಾರ್ಟಿ'ಯನ್ನು ಗುರಿಯಾಗಿಸಿಕೊಂಡು ಹಾಗೂ ಜಿರಳೆ ಪಕ್ಷದ ನಾಶದ ಬಗ್ಗೆ ಪರೋಕ್ಷವಾಗಿ ನೀಡುತ್ತಿರುವ ಎಚ್ಚರಿಕೆ ಎಂದು ಕಾಮೆಂಟ್​ಗಳನ್ನು ಮಾಡಲಾಗುತ್ತಿದೆ. ವಿಡಿಯೋಗಳು ವೈರಲ್ ಆಗುತ್ತಿರುವ ಬೆನ್ನಲ್ಲೇ ಅಭಿಜಿತ್​ ದೀಪ್ಕೆ ಅವರು ಸಹ ಈ ವಿಚಾರಕ್ಕೆ ಎಕ್ಸ್​ ಪೋಸ್ಟ್ ಹಂಚಿಕೊಂಡಿದ್ದಾರೆ.

ಅಭಿಜಿತ್ ದೀಪ್ಕೆ ಟಾಂಗ್

ಕಾಕ್ರೋಚ್​​ ಜನತಾ ಪಾರ್ಟಿಯನ್ನು ಗುರಿಯಾಗಿಸಿ ಈ ರೀತಿ ಜಿರಳೆ ಪ್ರತಿಕೃತಿ ದಹನ ಮಾಡಲಾಗಿದೆ ಎಂದು ವಿಡಿಯೋಗಳು ವೈರಲ್​ ಆಗುತ್ತಲೇ ಜಿರಳೆ ಪ್ರತಿಕೃತಿಯ ದಹನ ವಿಡಿಯೋ ಹಂಚಿಕೊಳ್ಳುವ ಮೂಲಕ "ಉಚಿತ ಪ್ರಚಾರಕ್ಕೆ ಧನ್ಯವಾದಗಳು" ಎಂದು ವ್ಯಂಗ್ಯವಾಡಿದ್ದಾರೆ.

ಅಲ್ಲದೆ, ಸಿಜೆಪಿ ಕಾನೂನು ಮುಖ್ಯಸ್ಥೆ ರತ್ನ ಸಿಂಗ್ ಪ್ರತಿಕ್ರಿಯಿಸಿ, 'ದಸರಾ ಹಬ್ಬದಂದು ಜಿರಳೆ ಪ್ರತಿಕೃತಿ ದಹನ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ ಎಂದರೆ, ನಿಜಕ್ಕೂ ಆಡಳಿತಾರೂಢ ಪಕ್ಷ ಎಷ್ಟು ನಡುಗಿದೆ ಎಂಬುದು ಸ್ಪಷ್ಟವಾಗುತ್ತದೆ. ನಾವೀಗ ಅವರಿಗೆ ಸ್ಪರ್ಧಿಗಳು ಎಂದು ಅವರು ಭಾವಿಸಿರುವುದು ಒಳ್ಳೆಯ ಬೆಳವಣಿಗೆ' ಎಂದು ಲೇವಡಿ ಮಾಡಿದ್ದಾರೆ

ಸಮಿತಿ ಹೇಳಿದ್ದೇನು?

ಬಿಜೆಪಿ ಶಾಸಕ ಹಾಗೂ ಸಮಿತಿಯ ಅಧ್ಯಕ್ಷ ಅಶೋಕ್ ಗೋಯಲ್ ದೇವ್ರಾಹಾ, 'ಜಿರಳೆಯು ಕೊಳಕು ಮತ್ತು ಅಸ್ವಚ್ಛತೆಯ ಸಂಕೇತವಾಗಿದೆ. 'ಸ್ವಚ್ಛ ಭಾರತ' ಮತ್ತು 'ಸ್ವಚ್ಛ ದೆಹಲಿ' ಅಭಿಯಾನದಡಿ ಜನರಲ್ಲಿ ಜಾಗೃತಿ ಮೂಡಿಸಲು ಇದನ್ನು ಮಾಡಲಾಗಿದೆ' ಎಂದಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net