

ಥೈಲ್ಯಾಂಡ್: ಕೊರೊನಾ ವೈರಸ್ ಸೋಂಕಿತ 71 ವರ್ಷದ ಚೀನಾದ ಮಹಿಳೆಗೆ ಥೈಲ್ಯಾಂಡ್ ವೈದ್ಯರು ಒಂದು ವಿಶೇಷ ರೀತಿಯ ಔಷಧ ಕೊಟ್ಟ ಪರಿಣಾಮ ಅವರು ಆಶ್ಚರ್ಯರೀತಿಯಲ್ಲಿ ವೈರಸ್ನಿಂದ ಸಂಪೂರ್ಣ ಮುಕ್ತರಾಗಿದ್ದಾರೆ.
ಈ ಬಗ್ಗೆ ಥೈಲ್ಯಾಂಡ್ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ವುಹಾನ್ನಿಂದ ಬಂದಿದ್ದ ಮಹಿಳೆಯನ್ನು ತಪಾಸಣೆಗೆ ಒಳಪಡಿಸಿದಾಗ ಕೊರೊನಾವೈರಸ್ ಪಾಸಿಟಿವ್ ಎಂದು ಬಂದಿತ್ತು. ಅವರನ್ನು ಆಸ್ಪತ್ರೆಯೊಂದಕ್ಕೆ ಅಡ್ಮಿಟ್ ಮಾಡಲಾಗಿತ್ತು. ಅಲ್ಲಿಯ ವೈದ್ಯರು ಆಕೆಗೆ ಮೂರು ರೀತಿಯ ಆ್ಯಂಟಿವೈರಸ್ ಔಷಧವನ್ನು ಮಿಶ್ರಣ ಮಾಡಿ ಚಿಕಿತ್ಸೆ ನೀಡಿದ್ದಾರೆ.
ಶೀತಜ್ವರ ಬಂದಾಗ ನೀಡಲಾಗುವ ಆ್ಯಂಟಿ ವೈರಸ್ ಒಸೆಲ್ಟಮಿವಿರ್ (oseltamivir ) ಮತ್ತು ಎಚ್ಐವಿ ಪಾಸಿಟಿವ್ ಇರುವವರಿಗೆ ಚಿಕಿತ್ಸೆ ನೀಡಲು ಉಪಯೋಗಿಸುವ ಲೋಪಿನವೀರ್ (lopinavir)ಹಾಗೂ ರಿಟೋನವೀರ್ (ritonavir) ಆ್ಯಂಟಿ ವೈರಲ್ ಔಷಧಗಳನ್ನು ಸಂಯೋಜಿಸಿ ಕೊರೊನಾ ಸೋಂಕಿತ ಮಹಿಳೆಗೆ ಚಿಕಿತ್ಸೆ ನೀಡಲಾಗಿತ್ತು. ಅದಾದ ಬಳಿಕ ಕೇವಲ 48ಗಂಟೆಗಳಲ್ಲಿ ಅವರಲ್ಲಿ ವೈರಸ್ ನೆಗೆಟಿವ್ ಆಗಿತ್ತು. ಸದ್ಯ ಅವರು ದಣಿದಿದ್ದರಿಂದ ಇನ್ನು 12 ತಾಸುಗಳ ಬಳಿಕ ಎದ್ದು ಕುಳಿತುಕೊಳ್ಳಬಹುದು ಎಂದು ವೈದ್ಯ ಕ್ರಿಂಗ್ ಸಾಕ್ ಎಂಬುವರು ತಿಳಿಸಿದ್ದಾರೆ.
ಈ ಬಗ್ಗೆ ಸ್ಪಷ್ಟ ಸಂಶೋಧನಾ ವರದಿಗಾಗಿ ಥೈಲ್ಯಾಂಡ್ ಆರೋಗ್ಯ ಇಲಾಖೆ ಕಾಯುತ್ತಿದೆ. ಅದಾದ ನಂತರ ಸರಿಯಾದ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಥೈಲ್ಯಾಂಡ್ನಲ್ಲಿ ಒಟ್ಟು 19 ಜನರಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಅವರಲ್ಲಿ ಎಂಟು ಮಂದಿ ಈಗಾಗಲೇ ಗುಣಮುಖರಾಗಿದ್ದು ಇನ್ನು 11 ಜನರು ಆಸ್ಪತ್ರೆಯಲ್ಲಿಯೇ ಇದ್ದಾರೆ. (ಏಜೆನ್ಸೀಸ್)