

ಇತ್ತೀಚೆಗೆ ಗರ್ಭಿಣಿಯರು ಬೇಬಿ ಬಂಪ್ ಫೋಟೋ ಶೂಟ್ ಮಾಡಿಸುವುದು ತೀರ ಸಾಮಾನ್ಯ. ತಮ್ಮ ತುಂಬಿದ ಹೊಟ್ಟೆಯ ಮೇಲೆ ವಿವಿಧ ಚಿತ್ತಾರಗಳನ್ನು ಬಿಡಿಸಿಕೊಳ್ಳುವುದು, ಹೊಸತನದ ಪ್ರಯೋಗ ಮಾಡಿ ದಂಪತಿ ಒಟ್ಟಿಗೆ ಫೋಟೋ ತೆಗೆಸಿಕೊಳ್ಳುತ್ತಾರೆ. ಅಂದರೆ ಮಗುವನ್ನು ಭೂಮಿಗೆ ಸ್ವಾಗತಿಸುವುದಕ್ಕೂ ಮೊದಲು ಹೀಗೆ ಫೋಟೋ ಶೂಟ್ ಮಾಡಿಸಿಕೊಂಡು ಒಂದಷ್ಟು ಸವಿ ನೆನಪನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಅದರೊಂದಿಗೆ ದಂಪತಿ ತಮ್ಮ ಪೇರೆಂಟಿಂಗ್ ಸಂತೋಷವನ್ನು ಅನುಭವಿಸುತ್ತಾರೆ.
ಇದೀಗ ಮಹಿಳೆಯೋರ್ವರ ಬೇಬಿ ಬಂಪ್ ಫೋಟೋ ಶೂಟ್ ಸಖತ್ ಸುದ್ದಿಯಾಗಿದೆ. ಟೆಕ್ಸಾಸ್ನ ಗರ್ಭಿಣಿಯೋರ್ವರ ಮೆಟರ್ನಿಟಿ ಫೋಟೊ ಸಿಕ್ಕಾಪಟೆ ವೈರಲ್ ಆಗಿದೆ. ಅಷ್ಟಕ್ಕೂ ಅಂಥ ವಿಶೇಷ ಏನು ಎಂದು ಕೇಳಿದರೆ...ಈ ಫೋಟೋದಲ್ಲಿ ಜೇನುನೊಣಗಳೇ ಆಕರ್ಷಣೆ.
ಬೆಥನಿ ಕರುಲಾಕ್ ಬೇಕರ್ ಎಂಬ ಮಹಿಳೆ ಹೀಗೆ ಬೇಬಿ ಬಂಪ್ ಫೋಟೋ ಮೂಲಕ ಸುದ್ದಿಯಾದವರು. ಈಕೆ ಜೇನು ಸಾಕಣಿಕೆ ಮಾಡಿಕೊಂಡಿದ್ದಾರೆ. ಅದೇ ಜೇನುನೊಣಗಳನ್ನು ತನ್ನ ಉಬ್ಬಿದ ಹೊಟ್ಟೆಯ ಮೇಲೆ ಇಟ್ಟುಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಈ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇದನ್ನೂ ಓದಿ: ಅಧಿಕಾರ ಉಳಿಸಿಕೊಳ್ಳಲು ಪಕ್ಷ ಒಡೆಯುವುದೊಂದೇ ದಾರಿ ನೇಪಾಳ ಪ್ರಧಾನಿ ಓಲಿಗೆ…!
ಬೆಥನಿ ಒಂದು ಹೊಲದಲ್ಲಿ ನಿಂತಿದ್ದಾರೆ. ಅವರ ಸುತ್ತಲೂ ಜೇನು ನೊಣಗಳು ಹಾರುತ್ತಿವೆ. ಅಷ್ಟೇ ಅಲ್ಲ, ಆಕೆಯ ಹೊಟ್ಟೆಯ ಮೇಲೆ ಸಾವಿರಾರು ಜೇನು ನೊಣಗಳು ಮುತ್ತಿಕೊಂಡಿವೆ. ಇನ್ನೊಂದು ಫೋಟೋದಲ್ಲಿ ಆಕೆಯ ಪತಿ ತುಟಿಗೆ ಮುತ್ತಿಡುತ್ತಿದ್ದಾರೆ. ಜೇನು ನೊಣಗಳು ಹೊಟ್ಟೆಯ ಮೇಲೆ ಹಾಗೇ ಇವೆ.
ಜೇನು ನೊಣಗಳು ದಾಳಿಯಿಟ್ಟು, ಕಚ್ಚಿದರೆ ಅದೆಷ್ಟು ನೋವು ಎಂಬುದು ಗೊತ್ತು. ಪ್ರಾಣವೇ ಹೋಗುವ ಸಾಧ್ಯತೆಯೂ ಇರುತ್ತದೆ. ಅಂಥದ್ದರಲ್ಲಿ ಬೆಥನಿ ತನ್ನ ತುಂಬಿದ ಹೊಟ್ಟೆಯ ಮೇಲೆ ಸಾವಿರಕ್ಕೂ ಹೆಚ್ಚು ಜೇನುನೊಣಗಳನ್ನು ಕೂರಿಸಿಕೊಂಡು ಫೋಟೋ ತೆಗೆಸಿಕೊಂಡಿದ್ದು ತೀರ ವಿಶೇಷ ಮತ್ತು ಅಸಹಜ ಎನ್ನಿಸದೆ ಇರದು. ಇದನ್ನೂ ಓದಿ: ಕೇಳಿದಷ್ಟು ಬೆಡ್ಗಳನ್ನು ಕೊಟ್ಟಿಲ್ಲ ಖಾಸಗಿ ಆಸ್ಪತ್ರೆಗಳು; ಚಿಕಿತ್ಸೆ ಕೊಡದಿದ್ರೆ ಕ್ರಿಮಿನಲ್ ಕೇಸ್ ಎಂದ್ರು ಸಚಿವ ಸುಧಾಕರ್
ಆಕೆ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡಿಕೊಂಡು, ಇದು ತುಂಬ ಅಪಾಯಕಾರಿ. ಜೇನುನೊಣಗಳ ಬಗ್ಗೆ ಸರಿಯಾದ ತಿಳಿವಳಿಕೆ, ಅನುಭವ ಇಲ್ಲದವರು ಈ ಪ್ರಯೋಗ ಮಾಡಬೇಡಿ ಎಂದು ಕ್ಯಾಪ್ಷನ್ ಬರೆದಿದ್ದಾರೆ.
ರಾಣಿ ಜೇನು ಹುಳವನ್ನು ಸಣ್ಣ ಪಂಜರದಲ್ಲಿಟ್ಟು ನನ್ನ ಹೊಟ್ಟೆಗೆ ಕಟ್ಟಲಾಯಿತು. ನಂತರ ಉಳಿದ ಜೇನುಗಳೂ ಹೀಗೆ ಸಹಜವಾಗಿ ಬಂದು ಮುತ್ತಿಗೆ ಹಾಕಿವೆ. ಇವೆಲ್ಲವನ್ನೂ ಸರಿಯಾದ ಕ್ರಮ, ನಿಯಮಗಳನ್ನು ಅಳವಡಿಸಿ ಮಾಡಲಾಗಿದೆ. ನನ್ನ ಹೊಟ್ಟೆಯ ಮೇಲೆ ಸುಮಾರು 10 ಸಾವಿರ ಜೇನುನೊಣಗಳು ಇವೆ. ಆದರೆ ಯಾರೂ ದಯವಿಟ್ಟು ಈ ಪ್ರಯೋಗಕ್ಕೆ ಮುಂದಾಗಬೇಡಿ ಎಂದಿದ್ದಾರೆ.
ಹಾಗೇ ಈ ಫೋಟೊಗಳು ನೆಟ್ಟಿಗರ ಗಮನವನ್ನು ಸೆಳೆದಿವೆ. ನೀವ್ಯಾಕೆ ಜೇನು ನೊಣಗಳ ಬದಲಿಗೆ ಬಟರ್ಫ್ಲೈ(ಪಾತರಗಿತ್ತಿ)ಗಳನ್ನು ಹೀಗೆ ಹೊಟ್ಟೆಯ ಮೇಲಿಟ್ಟುಕೊಂಡು ಫೋಟೋ ತೆಗೆಸಿಕೊಳ್ಳಲಿಲ್ಲ. ಜೇನು ನೊಣಗಳು ಅಪಾಯವಲ್ಲವೇ ಎಂಬಂಥ ಪ್ರಶ್ನೆಗಳನ್ನೂ ಹಲವರು ಕೇಳಿದ್ದಾರೆ. (ಏಜೆನ್ಸೀಸ್)