

ಬೆಂಗಳೂರು: ರಾಜ್ಯದ ಹಾಸ್ಟೆಲ್‌ಗಳಲ್ಲಿ ಡ್ರಗ್ಸ್ ಟೆಸ್ಟಿಂಗ್ ಕಿಟ್ ಬಳಸಿಕೊಂಡು ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸಿ ರಕ್ಷಿಸಬೇಕು. ಪಾಸಿಟಿವ್ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೂಚನೆ ನೀಡಿದ್ದಾರೆ.
ವಿಧಾನಸೌಧ ಸಭಾಂಗಣದಲ್ಲಿ ನಡೆದ 6ನೇ ರಾಜ್ಯ ಮಟ್ಟದ ನಾರ್ಕೋ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಪೊಲೀಸ್ ಠಾಣೆಗಳು ಮತ್ತು ಸಂಬಂಧಿಸಿದ ಇಲಾಖೆಗಳಿಗೆ ಮ್ಯಾಪ್-ಡ್ರಗ್ಸ್ ಆ್ಯಪ್ ಬಳಕೆ ಕುರಿತು ತರಬೇತಿ ನೀಡಬೇಕು. ಪ್ರತಿ ಜಿಲ್ಲೆಗೂ ಡ್ರಗ್ಸ್ ನಿಯಂತ್ರಣಕ್ಕೆ ಗುರಿ ನಿಗದಿ ಮಾಡಿ ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂದು ಸೂಚಿಸಿದರು.
ಮಾದಕ ದ್ರವ್ಯ ತಡೆ ಸಂಬಂಧಿಸಿದ ವೆಬ್‌ಸೈಟ್‌ಗಳನ್ನು ಕನ್ನಡಕ್ಕೂ ನವೀಕರಿಸಬೇಕು. ಬೆಳಗಾವಿ ಜಿಲ್ಲಾ ಪೊಲೀಸರ ಮಾದರಿಯನ್ನು ಇತರೆ ಜಿಲ್ಲೆಗಳು ಅನುಸರಿಸಬೇಕು. ಡ್ರಗ್ಸ್ ಸಾಗಾಣಿಕೆ ತಡೆಯಲು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಚುರುಕುಗೊಳಿಸಬೇಕು, ಕಸ್ಟಮ್ಸ್ ಅಧಿಕಾರಿಗಳನ್ನು ಸಮಿತಿಗೆ ಆಹ್ವಾನಿಸಬೇಕೆಂದು ನಿರ್ದೇಶನ ನೀಡಿದರು.
ನೋಂದಾಯಿತವಲ್ಲದ ಔಷಧ ಕಂಪನಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ಮೆಡಿಕಲ್ ಶಾಪ್ ಮುಂದೆ ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ ನಿಷೇಧ ಎಂಬ ಫಲಕವನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮ ಜರುಗಿಸಬೇಕು. ಜತೆಗೆ ಕೆಂಪು ಪಟ್ಟಿಯಲ್ಲಿರುವ ಔಷಧಗಳ ಮಾರಾಟ ನಿಯಂತ್ರಿಸಲು ಮೇಲ್ವಿಚಾರಣೆ ಕಾರ್ಯ ಬಲಗೊಳಿಸಬೇಕು ಮತ್ತು ವ್ಯಸನ ಮುಕ್ತ ಕೇಂದ್ರಗಳ ನಿರ್ವಹಣೆಗೆ ಮಾರ್ಗಸೂಚಿ ರೂಪಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಒಂದು ಕೇಂದ್ರಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಮುಖ್ಯಕಾರ್ಯದರ್ಶಿ ಕಟ್ಟಾಜ್ಞೆ ಮಾಡಿದರು. ಸೈಬರ್ ಕಮಾಂಡ್ ಘಟಕದ ಎಸ್‌ಪಿ ಎಸ್. ಸವಿತಾ ಮತ್ತಿತರರು ಇದ್ದರು.