

ಬೆಂಗಳೂರು: ಆಸಕ್ತ, ಅರ್ಹ ಸಂಸ್ಥೆಗೆ ಹೊರ ಗುತ್ತಿಗೆಗೆ ನೀಡುವ ಮುನ್ನ ಪ್ರಾಯೋಗಿಕ ಪರೀಕ್ಷಾರ್ಥ ಸ್ವಚ್ಛತಾ ಕಾರ್ಯದಿಂದ ಶಾಸಕರ ಭವನಕ್ಕೆ ಹೊಸ ಹೊಳಪು ಮೂಡಿದೆ. ಒಳಾಂಗಣ, ಹೊರಾಂಗಣ, ಶಾಸಕರ ಕೊಠಡಿಗಳ ಕಳೆ ಹೆಚ್ಚಿಸಿದೆ.
ಬೇರೆ ಇಲಾಖೆಗಳಲ್ಲಿ ಡಿ ಗ್ರೂಪ್ ನೌಕರರನ್ನು ಹೊರ ಗುತ್ತಿಗೆಯಡಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಶಾಸಕರ ಭವನಕ್ಕೆ ಅಂತಹ ಅವಕಾಶವಿಲ್ಲದ್ದರಿಂದ ವಿಧಾನಸಭೆ ಸಚಿವಾಲಯದ ಅಲ್ಪ ಪ್ರಮಾಣದ ಸಿಬ್ಬಂದಿಯನ್ನು ಸ್ವಚ್ಛತಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿತ್ತು.
ಆದರೆ ಕೊಠಡಿಗಳು, ಮೊಗಸಾಲೆ ಇನ್ನಿತರ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಸರಿಯಾಗಿಲ್ಲ. ಮಲಿನತೆ ಎದ್ದು ಕಾಣುತ್ತಿದ್ದು, ಕಸ ವಿಲೇವಾರಿಯೂ ಸರಿಯಾಗಿಲ್ಲವೆಂಬ ದೂರುಗಳು ವಿಧಾನಸಭಾಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸಲ್ಲಿಕೆಯಾಗಿದ್ದವು.
ಈ ಹಿನ್ನೆಲೆಯಲ್ಲಿ ಶಾಸಕರ ಭವನದ ಸ್ವಚ್ಛತಾ ಕೆಲಸವನ್ನು ಹೊರ ಗುತ್ತಿಗೆ ನೀಡಲು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತೀರ್ಮಾನಿಸಿ, ಪ್ರಾಯೋಗಿಕವಾಗಿ ಖಾಸಗಿ ಸಂಸ್ಥೆಗೆ ಆಳವಾದ ಸ್ವಚ್ಛತಾ ಕಾರ್ಯ ಒಪ್ಪಿಸಿದ್ದು, ಸದ್ಯಕ್ಕೆ ಪ್ರಗತಿಯಲ್ಲಿದೆ.
ಶಾಸಕರ ಭವನದ ಕಟ್ಟಡಗಳಲ್ಲಿ ದೈನಂದಿನ ಸ್ವಚ್ಛತೆ, ಕಸ ವಿಲೇವಾರಿ, ಶಾಸಕರ ಕೊಠಡಿಗಳಲ್ಲಿ ಶುಚಿತ್ವ ಕಾಪಾಡುವುದಕ್ಕೆ ಕ್ರಮವಹಿಸಲಾಗುತ್ತೆ. ನುರಿತ, ಪ್ರತಿಷ್ಠಿತ ಸಂಸ್ಥೆಗೆ ಈ ಕೆಲಸ ಗುತ್ತಿಗೆ ನೀಡುವುದಕ್ಕಾಗಿ ಕೋರಿಕೆ ಪ್ರಸ್ತಾವನೆ (ಆರ್‌ಎ್ಪಿ) ಕರೆಯಲು ತೀರ್ಮಾನಿಸಲಾಗಿದೆ.
ಶಾಸಕರ ಭವನದ ಕಟ್ಟಡಗಳ ಹೊರಾಂಗಣ ಸ್ವಚ್ಛತೆ, ಸುಣ್ಣಬಣ್ಣ ಬಳಿಯುವುದು, ಕಟ್ಟಡಗಳ ಸಣ್ಣಪುಟ್ಟ ದುರಸ್ತಿ, ನಿರ್ವಹಣೆ ಕಾರ್ಯ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ವಿಧಾನಸಭಾಧ್ಯಕ್ಷರ ಕಚೇರಿ ಪ್ರಕಟಣೆ ತಿಳಿಸಿದೆ.