ಕರೊನಾ ಅವಧಿಯಲ್ಲೂ ಈ ಕಾರು ಕಂಪನಿ ಅತಿಮೌಲ್ಯಯುತ ಕಂಪನಿ ಎನಿಸಿದೆ!

tesla
Published on

ನವದೆಹಲಿ: ವಿಶ್ವಾದ್ಯಂತ ಕರೊನಾ ಪಿಡುಗು ಹಬ್ಬಿದ್ದು, ಜನರು ಕಾರು ಸೇರಿ ಯಾವುದೇ ವಾಹನ ಖರೀದಿಗೂ ಅಷ್ಟೇನು ಆಸಕ್ತಿ ತೋರುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲೂ ಈ ಕಾರು ಕಂಪನಿಯ ಷೇರು ಮೌಲ್ಯ ಹೆಚ್ಚಾಗಿದ್ದು, ವಿಶ್ವದಲ್ಲೇ ಅತಿಮೌಲ್ಯಯುತ ಕಂಪನಿ ಎಂಬ ಹೆಗ್ಗಳಿಕೆಯೊಂದಿಗೆ ಟಯೋಟಾ ಕಂಪನಿಯನ್ನು ಹಿಂದಿಕ್ಕಿದೆ.

ಎಲಾನ್​ ಮಸ್ಕ್​ ನೇತೃತ್ವದ ವಿದ್ಯುತ್​ಕಾರು ತಯಾರಿಸುವ ಟೆಸ್ಲಾ ಕಂಪನಿ ಈ ಸಾಧನೆ ಮಾಡಿದ ಕಂಪನಿಯಾಗಿದೆ. ಜೂನ್​ 10ರ ವಹಿವಾಟಿನಲ್ಲಿ ಟೆಸ್ಲಾ ಕಂಪನಿಯ ಷೇರುಗಳ ಬೆಲೆ ಸಾರ್ವಕಾಲಿಕ ಏರಿಕೆ ದಾಖಲಿಸಿದ್ದು, ಆ ಕಂಪನಿಯ ಈ ಸಾಧನೆಗೆ ಕಾರಣವಾಗಿದೆ.

ಮೂಲಗಳ ಪ್ರಕಾರ ಬುಧವಾರದ ವಹಿವಾಟಿನಲ್ಲಿ ಟೆಸ್ಲಾ ಕಂಪನಿಯ ಷೇರುಗಳ ಬೆಲೆ ಶೇ.7.6 ದಾಖಲೆಯೊಂದಿಗೆ 76,688 ರೂಪಾಯಿ ತಲುಪಿದೆ. ಇದರಿಂದಾಗಿ ಕಂಪನಿಗೆ ಒಟ್ಟಾರೆ 14,32,667.25 ಕೋಟಿ ರೂ. ಬಂಡವಾಳ ಕ್ರೋಢಿಕರಣಕ್ಕೆ ಅನುಕೂಲವಾಗಿದೆ. ಇತ್ತೀಚಿನ ದಿನಗಳಲ್ಲಿ ಕಂಪನಿಯು ಉತ್ತಮ ಸಾಧನೆ ತೋರುತ್ತಿರುವುದರಿಂದ, ಅದರ ಷೇರುಗಳ ಬೆಲೆ ಸಾರ್ವಕಾಲಿಕ ಎತ್ತರ ತಲುಪುವ ನಿರೀಕ್ಷೆ ಎಲ್ಲರಲ್ಲೂ ಇತ್ತು ಎಂದು ಹೇಳಲಾಗಿದೆ.

ವಿದ್ಯುತ್​ಚಾಲಿತ ಟ್ರಕ್​: ಟೆಸ್ಲಾ ಕಂಪನಿಯು ವಿದ್ಯುತ್​ಚಾಲಿತ ಟೆಸ್ಲಾ ಸೆಮಿ ಎಂಬ ವಿದ್ಯುತ್​ಚಾಲಿತ ಸರಕುಸಾಗಣೆ ಟ್ರಕ್​ ತಯಾರಿಕೆಯನ್ನು ಆರಂಭಿಸಲಿದೆ ಎಂದು ಎಲಾನ್​ ಮಸ್ಕ್​ ಇಮೇಲ್​ ಮೂಲಕ ತಮ್ಮ ಸಿಬ್ಬಂದಿಗೆ ತಿಳಿಸಿದ್ದರು. ಅವರ ಈ ಘೋಷಣೆಯಿಂದಾಗಿ ಟೆಸ್ಲಾ ಕಂಪನಿಗಳ ಷೇರುಗಳ ಬೆಲೆ ಸಾರ್ವಕಾಲಿಕ ದಾಖಲೆಯ ಎತ್ತರಕ್ಕೇರಲು ಕಾರಣ ಎಂದು ಹೇಳಲಾಗಿದೆ.

2017ರಲ್ಲೇ ಮಸ್ಕ್​ ಟೆಸ್ಲಾ ಸೆಮಿ ಸರಕು ಸಾಗಣೆ ಟ್ರಕ್​ನ ಪ್ರಾಯೋಗಿಕ ಮಾದರಿಯನ್ನು ಬಿಡುಗಡೆ ಮಾಡಿದ್ದರು. 2019ರಿಂದ ಇದರ ತಯಾರಿಕೆಯನ್ನು ಆರಂಭಿಸುವುದಾಗಿ ಹೇಳಿದ್ದರು. ಇದೀಗ ಅವರು 2020ರಲ್ಲಿ ಇದರ ತಯಾರಿಕೆ ಆರಂಭಿಸುವುದಾಗಿ ಘೋಷಿಸಿದ್ದಾರೆ.

ಟಯೋಟಾವನ್ನು ಹಿಂದಿಕ್ಕಿದ ಕಂಪನಿ: ಬುಧವಾರದ ವಹಿವಾಟಿನಲ್ಲಿ ಟೆಸ್ಲಾ ಕಂಪನಿಯ ಷೇರುಗಳ ಬೆಲೆ ಸಾರ್ವಕಾಲಿಕ ಎತ್ತರಕ್ಕೆ ಏರುವ ಮೂಲಕ ಒಟ್ಟಾರೆ ಮೌಲ್ಯದ ವಿಷಯದಲ್ಲಿ ಟಯೋಟಾ ಕಂಪನಿಯನ್ನು ಹಿಂದಿಕ್ಕಿದೆ. ಜಪಾನ್​ ಮೂಲದ ಟಯೋಟಾದ ಒಟ್ಟಾರೆ ಬಂಡವಾಳ 13,86,246.03 ಕೋಟಿ ರೂಪಾಯಿ ಇದೆ. ಈ ರೀತಿಯಾಗಿ ಟೆಸ್ಲಾ ಕಂಪನಿ ಟಯೋಟಾಗಿಂತ ಬಂಡವಾಳ ಕ್ರೋಢಿಕರಣದಲ್ಲಿ 46,421.22 ಕೋಟಿ ರೂಪಾಯಿಯಷ್ಟು ಮುನ್ನಡೆ ಸಾಧಿಸಿದೆ.

ವಾಸ್ತವದಲ್ಲಿ ಟಯೋಟಾ ಕಂಪನಿ 10 ವರ್ಷಗಳ ಹಿಂದೆ ಕ್ಯಾಲಿಫೋರ್ನಿಯಾದ ಪ್ರೆಮಾಂಟ್​ನಲ್ಲಿದ್ದ ತನ್ನ ತಯಾರಿಕಾ ಘಟಕವನ್ನು ಎಲಾನ್​ ಮಸ್ಕ್​ ಅವರ ಟೆಸ್ಲಾ ಕಂಪನಿಗೆ ಮಾರಾಟ ಮಾಡಿದಾಗ ಆ ಕಂಪನಿಯಲ್ಲಿ 379.02 ಕೋಟಿ ರೂಪಾಯಿ ಹೂಡಿಕೆ ಹೊಂದಿತ್ತು. ಬಳಿಕ ಟೆಸ್ಲಾದ ಷೇರುಗಳನ್ನು ಮಾರಾಟ ಮಾಡುವ ಮೂಲಕ ಟಯೋಟಾ ಕಂಪನಿ ಹೆಚ್ಚಿನ ಲಾಭ ಗಳಿಸಿಕೊಂಡಿತ್ತು.

vijayavani.net/dkshiswearing-ceremony-govt-gave-permission/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net