

ಶ್ರೀನಗರ: ಜಮ್ಮು-ಕಾಶ್ಮೀರ ಪ್ರಸಿದ್ಧ ಅಮರನಾಥ ಯಾತ್ರೆಗೆ ಸಜ್ಜಾಗುತ್ತಿದೆ. ಇದೇ ಶುಕ್ರವಾರದಿಂದ ಅಮರನಾಥ ಯಾತ್ರೆ ಆರಂಭವಾಗುತ್ತಿದ್ದು ಆಗಸ್ಟ್ 3ರ ತನಕ ನಡೆಯಲಿದೆ. ಈ ಯಾತ್ರೆ ಮೇಲೆ ದಾಳಿ ನಡೆಸುವುದಕ್ಕೆ ಈ ಬಾರಿಯೂ ಉಗ್ರರು ಯೋಜನೆ ರೂಪಿಸುತ್ತಿದ್ದಾರೆ. ವಾರ್ಷಿಕ ಯಾತ್ರೆಗೆ ಯಾವುದೇ ಅಡ್ಡಿ ಉಂಟಾಗದಂತೆ ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಕ್ಷಣಾ ಪಡೆಗಳು ಮೂವರು ಉಗ್ರರನ್ನು ಸೋಮವಾರ ಹೊಡೆದುರುಳಿಸಿವೆ. ಈ ಪೈಕಿ ಜೈಷ್ ಏ ಮೊಹಮ್ಮದ್ ನ ಸ್ವಘೋಷಿತ ಕಮಾಂಡರ್ ಒಬ್ಬ ಕೂಡ ಇದ್ದ. ಈ ಘಟನೆ ಯಾತ್ರೆ ಆರಂಭಕ್ಕೆ ನಾಲ್ಕು ದಿನ ಮೊದಲು ನಡೆದಿದ್ದು, ಕರಿಛಾಯೆ ಬೀರುವ ಸಾಧ್ಯತೆ ಇದೆ ಎಂಬ ಮಾತು ಕೂಡ ಜಮ್ಮು-ಕಾಶ್ಮೀರದಲ್ಲಿ ಕೇಳಿಬಂದಿದೆ.
ಇದನ್ನೂ ಓದಿ: ಮಕ್ಕಳಲ್ಲಿ ನಾಯಕತ್ವ ಲಕ್ಷಣಗಳನ್ನು ಬೆಳೆಸುವ ಬಗೆ
ಎರಡನೇ ಸೆಕ್ಟರ್ನ ಬ್ರಿಗೇಡಿಯರ್ ವಿವೇಕ್ ಸಿಂಗ್ ಠಾಕೂರ್ ದಕ್ಷಿಣ ಕಾಶ್ಮೀರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಉಗ್ರ ದಾಳಿ ನಡೆಯುವ ಸಾಧ್ಯತೆಯನ್ನು ಬಹಿರಂಗಪಡಿಸಿದ್ದಾರೆ. ಅವರು ಹೇಳಿದ್ದಿಷ್ಟು- ಅಮರನಾಥ ಯಾತ್ರೆ ಮೇಲೆ ಶತಾಯಗತಾಯ ದಾಳಿ ನಡೆಸುವುದಕ್ಕೆ ಉಗ್ರರು ಸಿದ್ಧತೆ ನಡೆಸಿದ್ದಾರೆ. ಈ ಕುರಿತು ಮಾಹಿತಿ ಲಭ್ಯವಾಗಿದೆ. ನಾವು ನಮ್ಮ ಎಲ್ಲ ವ್ಯವಸ್ಥೆಗಳನ್ನೂ ಜಾಗೃತಾವಸ್ಥೆಯಲ್ಲಿ ಇರಿಸಿದ್ದು, ಎಲ್ಲ ಸಂಪನ್ಮೂಲಗಳೂ ಕೆಲಸಕ್ಕೆ ಲಭ್ಯವಾಗುವಂತೆ ನೋಡಿಕೊಳ್ಳುತ್ತಿದ್ದೇವೆ. ಯಾತ್ರೆ ಶಾಂತಿಯುತವಾಗಿ ಸಂಪನ್ನಗೊಳ್ಳುವುದಕ್ಕೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ರಾಷ್ಟ್ರೀಯ ಹೆದ್ದಾರಿ 44ರಲ್ಲೇ ಯಾತ್ರಾರ್ಥಿಗಳು ತೆರಳುವ ಕಾರಣ ಆ ಭಾಗ ಸ್ವಲ್ಪ ಸೂಕ್ಷ್ಮವಾದುದು ಎಂದು ಗುರುತಿಸಲಾಗಿದೆ. ಇದು ಸೋನಾಮಾರ್ಗ್(ಗಂದೇರ್ಬಾಲ್)ತನಕ ಇದೆ. ಇದೇ ರೀತಿ ಅಮರನಾಥ ಗುಹೆ ತಲುಪುವುದಕ್ಕೆ ಇರುವ ಏಕೈಕ ಮಾರ್ಗ(ಬಾಲ್ಟಾಲ್) ಇದುವೇ ಆಗಿದೆ. ಹೀಗಾಗಿ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಠಾಕೂರ್ ತಿಳಿಸಿದ್ದಾರೆ. (ಏಜೆನ್ಸೀಸ್)