

ಶ್ರೀಲಂಕಾದ ಎಲ್ಟಿಟಿಇ ಉಗ್ರ ಸಂಘಟನೆಯಲ್ಲಿ ಮಹಿಳೆಯರು ಭಾರಿ ಸಂಖ್ಯೆಯಲ್ಲಿ ಇದ್ದದ್ದು ಜಗತ್ತಿಗೆ ತಿಳಿದೇ ಇದೆ. ಆದರೆ, ಎಲ್ಟಿಟಿಇ ಮುಖ್ಯಸ್ಥ ಪ್ರಭಾಕರನ್ ಹತನಾದ ನಂತರ, ಆ ಸಂಘಟನೆಯೂ ಅಸ್ತಿತ್ವ ಕಳೆದು ಕೊಂಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳು ಮಹಿಳೆಯರನ್ನು ನೇಮಿಸಿಕೊಳ್ಳುತ್ತಿದ್ದು, ತರಬೇತಿ ನೀಡಿ, ದುಷ್ಕೃತ್ಯಗಳಿಗೆ ನಿಯೋ ಜಿಸುತ್ತಿವೆ. ಈ ಮೂಲಕ ಭಯೋತ್ಪಾದನೆ ಮತ್ತೊಂದು ಅಪಾಯದ ತಿರುವು ಪಡೆದು ಕೊಂಡಿದ್ದು, ಈ ಕುರಿತಾದ ವಿವರ ಇಲ್ಲಿದೆ.
ಇದು ಭಯೋತ್ಪಾದಕ ಸಂಘಟನೆಗಳ ತಂತ್ರದ ಹೊಸ ಸ್ವರೂಪ. ಮೊದಲಿಗೆ, ಇನ್ನೂ ಮೀಸೆ ಚಿಗುರದ ತರುಣರನ್ನು ಇಲ್ಲವೆ ಹದಿಹರೆಯದವರನ್ನು ತಮ್ಮ ಸಂಘಟನೆಗಳಿಗೆ ನೇಮಿಸಿಕೊಂಡು ಬ್ರೖೆನ್ ವಾಶ್ ಮಾಡುತ್ತಿದ್ದ ಭಯೋತ್ಪಾದಕ ಸಂಘಟನೆಗಳು ಈಗ ಮಹಿಳೆಯರ ನೇಮ ಕಾತಿಗೆ ವೇಗ ನೀಡಿವೆ. ಜೈಶ್-ಎ- ಮೊಹಮ್ಮದ್, ಲಷ್ಕರ್-ಎ-ತೊಯ್ಬಾ ಮತ್ತು ಐಸಿಸ್ನಂಥ ಸಂಘಟನೆಗಳು ಮಹಿಳೆಯರ ವಿಭಾಗವನ್ನೇ ರೂಪಿಸುತ್ತಿರುವುದು ಆತಂಕದ ವಿದ್ಯಮಾನ.
ಜಮ್ಮು, ಕಾಶ್ಮೀರದ ಪೊಲೀಸರು ಸೋಮವಾರ ಮಹತ್ವದ ಕಾರ್ಯಾಚರಣೆ ನಡೆಸಿ, ನಿಷೇಧಿತ ಜೈಷ್-ಎ-ಮೊಹಮ್ಮದ್ (ಜೆಇಎಂ), ಅನ್ಸಾರ್ ಗಜ್ವತ್-ಉಲ್-ಹಿಂದ್ ಸಂಘಟನೆ ಗಳೊಂದಿಗೆ ನಂಟು ಹೊಂದಿದ್ದ ಅಂತರ ರಾಜ್ಯ ಮತ್ತು ಅಂತಾರಾಷ್ಟ್ರೀಯ ಉಗ್ರಜಾಲವನ್ನು ಭೇದಿಸಿದ್ದಾರೆ. ಈ ಜಾಲದ 8 ಮಂದಿಯನ್ನು ಬಂಧಿಸಿದ್ದು, ಈ ಪೈಕಿ ಮೂವರು ವೈದ್ಯರು. ಅಲ್ಲದೆ, ಡಾ.ಶಾಹೀನ್ ಎಂಬ ಮಹಿಳಾ ಭಯೋತ್ಪಾದಕಿಯ ಬಂಧನವಾಗಿದ್ದು, ಈಕೆ ಲಾಕರ್ನಲ್ಲಿ ಎ.ಕೆ.47 ಪತ್ತೆಯಾಗಿದೆ. ಈಕೆ ಜೈಷ್-ಎ-ಮೊಹಮ್ಮದ್ನ ಭಾರತೀಯ ಮಹಿಳಾ ಘಟಕದ ಮುಖ್ಯಸ್ಥೆಯಾಗಿ ಇತ್ತೀಚೆಗಷ್ಟೇ ನೇಮಕವಾಗಿದ್ದಳು.
ಹರಿಯಾಣದ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿದ್ದ ಡಾ.ಮುಜಮ್ಮಿಲ್ ಅಹ್ಮದ್ ನಿವಾಸದಲ್ಲಿ 360 ಕೆ.ಜಿ. ಸ್ಪೋಟಕ ಮತ್ತು ಶಸ್ತ್ರಾಸ್ತ್ರ. ಮದ್ದುಗುಂಡುಗಳು, 5 ಲೀಟರ್ ರಾಸಾಯನಿಕ, 20 ಟೈಮರ್ಗಳು ಪತ್ತೆಯಾಗಿವೆ. ಬಂಧಿತೆ ಶಾಹೀನ್ ಮುಜಮ್ಮಿಲ್ನ ಸ್ನೇಹಿತೆಯಾಗಿದ್ದು, ಉಗ್ರ ಕೃತ್ಯಗಳಿಗೆ ಮತ್ತು ಉಗ್ರರ ನೇಮಕಾತಿಗೆ ಸಹಕರಿಸುತ್ತಿದ್ದಳು ಎಂಬ ಸಂಗತಿ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಹೊರಗಡೆ ವೈದ್ಯ ವೃತ್ತಿಯಲ್ಲಿ ತೊಡಗಿದ್ದರಿಂದ ಯಾರಿಗೂ ಅನುಮಾನ ಬಾರದು ಎಂದುಕೊಂಡು ಶಾಹೀನ್ ಉಗ್ರ ಕೃತ್ಯಗಳಿಗೆ ಬೆಂಬಲವಾಗಿದ್ದಳು. ಹಾಗಾಗಿ, ಇವಳ ಕಾರಿನಲ್ಲೇ ಶಸ್ತ್ರಾಸ್ತ್ರಗಳ ಸಾಗಾಟ ನಡೆಯುತ್ತಿತ್ತು ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಈ ಉಗ್ರಜಾಲವನ್ನು ಭೇದಿಸಿ, ಒಟ್ಟು 2,900 ಕೆಜಿ ಸ್ಪೋಟಕ ವಶಪಡಿಸಿಕೊಳ್ಳುವ ಮೂಲಕ ಪೊಲೀಸರು, ಭದ್ರತಾ ಪಡೆಗಳು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮಹತ್ವದ ಹೆಜ್ಜೆ ಇರಿಸಿರುವುದು ಹೌದು.
ಕರಾಚಿ, ಬಹಾವಲಪುರ್, ಮುಜಫರಾಬಾದ್, ಕೋಟಲಿ, ಹರಿಪುರ ಹಾಗೂ ಮಂಸೇಹರಾ ಮದರಸಾಗಳಲ್ಲಿ ಓದುತ್ತಿರುವ ಬಡ ಕುಟುಂಬಗಳ ಯುವತಿಯರು, ಮಹಿಳೆಯರನ್ನೇ ಜೈಷ್-ಎ-ಮೊಹಮ್ಮದ್ ತನ್ನ ಮಹಿಳಾ ಘಟಕಕ್ಕೆ ಭರ್ತಿ ಮಾಡಿದೆ. ಗಮನಾರ್ಹವೆಂದರೆ, ಜೈಷ್-ಎ-ಮೊಹಮ್ಮದ್ ಈ ಮೊದಲು ಹೋರಾಟದಲ್ಲಿ ಮಹಿಳೆಯರನ್ನು ತೊಡಗಿಸುತ್ತಿರ ಲಿಲ್ಲ. ಆದರೆ, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ಈ ಉಗ್ರ ಸಂಘಟನೆ ತನ್ನ ನಿಯಮಗಳನ್ನೇ ಬದಲು ಮಾಡಿದೆ.
ಮಹಿಳಾ ಉಗ್ರ ಜಾಲಗಳು ವ್ಯಾಪಕವಾಗಿ ಬೇರೂರುತ್ತಿವೆ ಎಂಬುದು ಆತಂಕದ ಸಂಗತಿ. ಹಲವು ಉಗ್ರ ಸಂಘಟನೆಗಳು ಮಹಿಳೆಯರಿಗೆ ಭಯೋತ್ಪಾದಕ ತರಬೇತಿ ನೀಡುತ್ತಿವೆ. ಜೈಷ್-ಎ-ಮೊಹಮ್ಮದ್ ಸಂಘಟನೆಯಂತೂ ಪಾಕಿಸ್ತಾನದ ಪ್ರತಿ ಜಿಲ್ಲೆಯಲ್ಲೂ ಮಹಿಳಾ ಉಗ್ರರಿಗೆ ತರಬೇತಿ ಕೇಂದ್ರ ತೆರೆಯುತ್ತಿದ್ದು, ಅಲ್ಲಿ 15 ದಿನಗಳ ತರಬೇತಿ ನೀಡಲಾಗುತ್ತಿದೆ. ಅಂದರೆ, ಪಾಕಿಸ್ತಾನದ ಪ್ರತಿ ಜಿಲ್ಲೆಯಲ್ಲೂ ಮಹಿಳಾ ಭಯೋತ್ಪಾದಕರನ್ನು ತಯಾರು ಮಾಡಿ, ಭಾರತವಿರೋಧಿ ಚಟುವಟಿಕೆಗಳಿಗೆ ವೇಗ ನೀಡುವ ದುರುದ್ದೇಶ ಉಗ್ರ ಸಂಘಟನೆಗಳದ್ದು. ಪ್ರತಿ ಜಿಲ್ಲೆಯ ಮುಖ್ಯಸ್ಥೆಯನ್ನು ‘ಡಿಸ್ಟ್ರಿಕ್ಟ್ ಮುಂತೇಜಿಮಾ’ ಎಂದು ಕರೆಯಲಾಗುತ್ತದೆ. ಈ ಮುಖ್ಯಸ್ಥೆ ಆಯಾ ಜಿಲ್ಲೆಯಲ್ಲಿ ಸ್ಥಳೀಯ ಮಹಿಳೆಯರನ್ನು ಉಗ್ರ ಸಂಘಟನೆಗೆ ನೇಮಿಸಿಕೊಳ್ಳುತ್ತಾಳೆ. ಜೈಷ್-ಎ-ಮೊಹಮ್ಮದ್ ತನ್ನ ಸಂಘಟನೆಗೆ ಸೇರುವ ಮಹಿಳೆಯರಿಗೆ ಕಠಿಣ ನಿರ್ಬಂಧಗಳನ್ನು ಹೇರುತ್ತದೆ. ಉಗ್ರ ಸಂಘಟನೆಯಲ್ಲಿ ಸೇರಿದ ಮೇಲೆ ಮಹಿಳೆಯು ಮೊಬೈಲ್ ಫೋನ್ ಅಥವಾ ವಾಟ್ಸ್ಆಪ್ ಮೂಲಕ ಯಾವುದೇ ಅಪರಿಚಿತ ಪುರುಷನೊಂದಿಗೆ ಮಾತನಾಡುವಂತಿಲ್ಲ. ಉಗ್ರ ಚಟುವಟಿಕೆಯ ವೇಳೆ ಹತರಾದರೆ ಅವರಿಗೆ ‘ಜನ್ನತ್’ (ಸ್ವರ್ಗ) ಸಿಗುತ್ತದೆ ಎಂದು ಆರಂಭಿಕ ತರಬೇತಿಯ ವೇಳೆಯೇ ಹೇಳಿಕೊಡಲಾಗುತ್ತದೆ. ‘ಪುರುಷ ಭಯೋತ್ಪಾದಕರು ಮಹಿಳೆಯರೊಂದಿಗೆ ಸೇರಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ. ಮತ್ತು ಜಗತ್ತಿನಾದ್ಯಂತ ಇಸ್ಲಾಂನ್ನು ಪಸರಿಸುತ್ತಾರೆ’ ಎಂದು ಮಸೂದ್ ಅಜರ್ ಆಡಿಯೋ ಸಂದೇಶದಲ್ಲಿ
ತನ್ನ 21 ನಿಮಿಷಗಳ ಆಡಿಯೋ ಸಂದೇಶದಲ್ಲಿ ಮಸೂದ್ ಅಜರ್, ಮಹಿಳೆಯರನ್ನು ಭರ್ತಿ ಮಾಡುವ ಅಗತ್ಯ, ಆ ಕುರಿತಾದ ಪ್ರಕ್ರಿಯೆ, ತರಬೇತಿ ನೀಡುವುದು ಆ ಮೂಲಕ ಜಾಗತಿಕ ಮಟ್ಟದಲ್ಲಿ ಜಿಹಾದ್ ಕೈಗೊಳ್ಳಬೇಕೆಂದು ಹೇಳಿದ್ದಾನೆ.
ಹಂತ-1: ಜೈಷ್-ಎ-ಮೊಹಮ್ಮದ್ ಪುರುಷ ಭಯೋತ್ಪಾದಕರಿಗೆ ‘ದೌರಾ-ಎ-ತರ್ಬಿಯತ್’ ಕೋರ್ಸ್ ನಡೆಸುತ್ತಿದ್ದರೆ, ಮಹಿಳೆಯರಿಗೆ ‘ದೌರಿಯಾ-ಎ-ತಸ್ಕಿಯಾ’ ಕೋರ್ಸ್ ನಡೆಸುತ್ತಿದೆ. ಪಾಕ್ನ ಬಹಾವಲಪುರ್ ಕೇಂದ್ರದಲ್ಲಿ ಈ ತರಬೇತಿ ನಡೆಯುತ್ತದೆ. ‘ದೌರಿಯಾ-ಎ-ತಸ್ಕಿಯಾ’ದಲ್ಲಿ ಪ್ರಾಥಮಿತ ಹಂತದ ತರಬೇತಿ. ದೈಹಿಕ, ಮಾನಸಿಕ ಸದೃಢತೆ ಹೇಳಿಕೊಡಲಾಗುತ್ತದೆ.
ಹಂತ-2: ‘ದೌರಾ-ಆಯಾತ್-ಉಲ್-ನಿಸಾಹ್’-ಇದು ಎರಡನೇ ಹಂತದ ತರಬೇತಿ. ಇದರಲ್ಲಿ ಇಸ್ಲಾಮಿಕ್ ಪುಸ್ತಕಗಳ ಮೂಲಕ ಮಹಿಳೆಯರಿಗೆ ಜಿಹಾದ್ ಹೇಗೆ ನಡೆಸಬೇಕು ಎಂಬುದನ್ನು ಹೇಳಿಕೊಡಲಾಗುತ್ತದೆ. ಈ ಕೋರ್ಸ್ ಕಳೆದ 20 ವರ್ಷಗಳಿಂದ ಪುರುಷ ಜಿಹಾದಿ ಗಳನ್ನು ತಯಾರು ಮಾಡುತ್ತಿದ್ದು, ಈಗ ಮಹಿಳಾ ಜಿಹಾದಿಗಳ ಕೈಗೆ ಬಂದೂಕು ನೀಡುತ್ತಿದೆ.
ಭಾರತದ ವಿರುದ್ಧ ನಿರಂತರ ಹೋರಾಡಿದರೆ ಜನ್ನತ್ (ಸ್ವರ್ಗ) ಪ್ರಾಪ್ತಿಯಾಗುತ್ತದೆ ಎಂಬ ಸಂಗತಿಯನ್ನು ಪುರುಷ ಜಿಹಾದಿಗಳಿಗೆ ಹೇಳಿಕೊಡಲಾಗುತ್ತಿತ್ತು. ಈಗ ಮಹಿಳಾ ಜಿಹಾದಿಗಳಿಗೂ ಇದನ್ನೇ ಹೇಳಿಕೊಡಲಾಗುತ್ತಿದೆ. ಜತೆಗೆ, ಭಾವನಾತ್ಮಕ ಸಂಗತಿಗಳನ್ನು ತಿಳಿಸಿ ಮಹಿಳೆಯರು ಉಗ್ರ ಸಂಘಟನೆಗಳಿಂದ ದೂರವಾಗದಂತೆ ನೋಡಿಕೊಳ್ಳಲಾಗುತ್ತಿದೆ.
ಮಹಿಳಾ ಘಟಕವನ್ನು ರೂಪಿಸಿರುವುದರ ಕಾರಣವನ್ನೂ ಮಸೂದ್ ಅಜರ್ ತನ್ನ ಆಡಿಯೋ ಸಂದೇಶದಲ್ಲಿ ವಿವರಿಸಿದ್ದಾನೆ-‘ಭಾರತದಲ್ಲಿ ಹಿಂದೂ ಮಹಿಳೆಯರನ್ನು ನಮ್ಮ ವಿರುದ್ಧ ಸೇನೆಗೆ ಭರ್ತಿ ಮಾಡಲಾಗಿದೆ. ಮಹಿಳಾ ಪತ್ರಕರ್ತರು ನಮ್ಮ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ನಾನು ನಮ್ಮ ಮಹಿಳೆಯರನ್ನು ತಯಾರು ಮಾಡುತ್ತಿದ್ದೇನೆ. ಈ ಮಹಿಳೆಯರು ಅವರನ್ನು ಸಮರ್ಥವಾಗಿ ಎದುರಿಸಲಿದ್ದಾರೆ’ ಎಂದಿದ್ದಾನೆ.
ಜೈಷ್-ಎ-ಮೊಹಮ್ಮದ್ನ ಸಂಸ್ಥಾಪಕ ಹಾಗೂ ಕುಖ್ಯಾತ ಭಯೋತ್ಪಾದಕ, 2001ರಲ್ಲಿ ಭಾರತದ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್ವೆುೖಂಡ್ ಮಸೂದ್ ಅಜರ್ನ ಸಹೋದರಿ ಸಾದಿಯಾ ಅಜರ್ ಪಾಕ್ನಲ್ಲಿ ಮಹಿಳಾ ಘಟಕದ ಮುಖ್ಯಸ್ಥೆಯಾಗಿದ್ದಾಳೆ. ಕಂದಹಾರ ವಿಮಾನ ಅಪಹರಣ ಸಂಚಿನ ಪ್ರಮುಖ ಮಾಸ್ಟರ್ವೆುೖಂಡ್, ಕುಖ್ಯಾತ ಉಗ್ರ ಯೂಸೂಫ್ ಅಜರ್ ಸಾದಿಯಾಳ ಪತಿ. ಈ ಯೂಸೂಫ್ ಅಜರ್, ಇತ್ತೀಚೆಗೆ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ದಲ್ಲಿ ಹತನಾಗಿದ್ದಾನೆ. ಭಾರತದಲ್ಲಿ ಜೈಷ್-ಎ-ಮೊಹಮ್ಮದ್ನ ಮಹಿಳಾ ಘಟಕವನ್ನು ಮುನ್ನಡೆಸುವ ಹೊಣೆಯನ್ನು ಡಾ.ಶಾಹೀನ್ ಶಹೀದ್ಗೆ ವಹಿಸಿದ್ದು ಈ ಸಾದಿಯಾಳೇ. ಶಾಹೀನ್ಳ ಸಾಮಾಜಿಕ ಜಾಲತಾಣ ಸಂಪರ್ಕ ಮತ್ತು ಇತರ ನೆಟ್ವರ್ಕ್ ಗಳನ್ನು ಜಾಲಾಡಿದಾಗ ಪೊಲೀಸರಿಗೆ ಈ ಮಾಹಿತಿ ಲಭ್ಯವಾಗಿದೆ.