

ಇಸ್ಲಾಮಾಬಾದ್: ಉಗ್ರ ಸಂಘಟನೆ ಜೈಷ್ ಎ ಮೊಹಮದ್ ಮುಖ್ಯಸ್ಥ ಮಸೂದ್ ಅಜರ್ ನಾಪತ್ತೆಯಾಗಿದ್ದಾನೆ ಎಂದು ಪಾಕಿಸ್ತಾನ ಹೇಳಿದೆ. ಉಗ್ರರಿಗೆ ಆರ್ಥಿಕ ನೆರವು ತಡೆಯಲು ರಚಿಸಲಾದ ಜಾಗತಿಕ ವೇದಿಕೆ ‘ಹಣಕಾಸು ಕ್ರಿಯಾ ಪಡೆ’ಯ (ಎಫ್ಎಟಿಎಫ್) ಸಭೆಗೆ ಪಾಕಿಸ್ತಾನ ಈ ಮಾಹಿತಿ ನೀಡಿದ್ದು, ಈ ಕುರಿತು ಹಲವು ಅನುಮಾನಗಳು ಮೂಡಿವೆ. ಎಫ್ಎಟಿಎಫ್ ಸಭೆ ಪ್ಯಾರಿಸ್ನಲ್ಲಿ ಆರಂಭವಾಗಿದ್ದು ಶುಕ್ರವಾರ ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಚಾರ ಕೈಗೆತ್ತಿಕೊಳ್ಳಲಿದೆ.
ಅಜರ್ ನಾಪತ್ತೆಯಾಗಿರುವುದರಿಂದ ಆತನ ವಿರುದ್ಧ ಎಫ್ಐಆರ್ ದಾಖಲಿಸಲು ಆಗಿಲ್ಲ ಎಂದು ಪಾಕಿಸ್ತಾನ ತಿಳಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಜರ್ನನ್ನು ಭಯೋತ್ಪಾದಕ ಎಂದು ಘೋಷಿಸಿದ್ದರೂ ಆತನಿಗೆ ನೀಡಬೇಕಾದ ಜೀವನ ಭತ್ಯೆಗಾಗಿ ಪಾಕಿಸ್ತಾನ ಇನ್ನೂ ಅರ್ಜಿ ಸಲ್ಲಿಸಿಲ್ಲ. 2019ರಲ್ಲಿ ಅಜರ್ ಮೇಲೆ ನಿಷೇಧ ಹೇರಲಾಗಿತ್ತು.
ಉಗ್ರರಿಗೆ ಆರ್ಥಿಕ ನೆರವು ಒದಗಿಸುವುದನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗಿರುವ ಪಾಕಿಸ್ತಾನವನ್ನು ಎಫ್ಎಟಿಎಫ್ ‘ಬೂದು ಪಟ್ಟಿ’ಗೆ ಸೇರಿಸಿದೆ. ಬೂದು ಪಟ್ಟಿಯಿಂದ ಹೊರ ಬರಬೇಕಾದರೆ 27 ಅಂಶಗಳ ಕ್ರಿಯಾ ಯೋಜನೆಯನ್ನು ಪಾಕಿಸ್ತಾನ ಅನುಷ್ಠಾನಗೊಳಿಸಬೇಕೆಂದು ವೇದಿಕೆ ಅದಕ್ಕೆ ಸೂಚಿಸಿತ್ತು. 2020ರ ಫೆಬ್ರವರಿಯೊಳಗೆ ಪೂರ್ಣವಾಗಿ ಪಾಲಿಸುವಂತೆ ಅದು ಕಳೆದ ಅಕ್ಟೋಬರ್ನಲ್ಲಿ ಪಾಕ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿತ್ತು.
ಭಾರತದ ಪ್ರಶ್ನೆ: ಮಸೂದ್ ಕಾಣೆಯಾಗಿದ್ದಾನೆಂದು ಪಾಕಿಸ್ತಾನ ಹೇಳಿರುವುದನ್ನು ಭಾರತ ಎಫ್ಎಟಿಎಫ್ ಸಭೆಯಲ್ಲಿ ಪ್ರಶ್ನಿಸಲಿದೆ. ಈ ಹಿಂದೆಯೂ ಅನೇಕ ಸಭೆಗಳಲ್ಲಿ ಪಾಕ್ ಇದೇ ಸಬೂಬು ನೀಡಿರುವುದನ್ನು ಭಾರತ ಎಫ್ಎಟಿಎಫ್ ಗಮನಕ್ಕೆ ತರಲಿದೆ. ಅಜರ್ ಪಾಕ್ ಸರ್ಕಾರದ ರಕ್ಷಣೆಯಲ್ಲೇ ಇದ್ದಾನೆಂದು ಹೇಳಲಾಗುತ್ತಿದೆ. ಸರ್ಕಾರ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೆ, ಪುಲ್ವಾಮಾ ದಾಳಿಯ ಕೆಲ ವಾರಗಳ ನಂತರ ನೀಡಿದ ಸಂದರ್ಶನವೊಂದರಲ್ಲಿ, ಅಜರ್ ಪಾಕ್ನಲ್ಲೇ ಇದ್ದು ತೀವ್ರ ಅನಾರೋಗ್ಯಪೀಡಿತನಾಗಿದ್ದಾನೆ ಎಂದು ವಿದೇಶಾಂಗ ಸಚಿವ ಷಾ ಮಹಮದ್ ಖುರೇಷಿ ಹೇಳಿದ್ದರು. ಭಾರತ ‘ಸಾಕ್ಷ್ಯ’ ಒದಗಿಸಿದರೆ ಮಾತ್ರವೇ ಆತನ ವಿರುದ್ಧ ಕ್ರಮಕೈಗೊಳ್ಳುವುದಾಗಿ ಆ ಸಂದರ್ಭದಲ್ಲಿ ಪಾಕ್ ಹೇಳಿತ್ತು.