

ಪ್ರಧಾನಮಂತ್ರಿಯವರ ನಿವಾಸದಲ್ಲಿ ನಡೆಯುತ್ತಿರುವ ಮುಖಾಮುಖಿ ಸಭೆಗಳಲ್ಲಿ, ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದ ಪ್ರಸ್ತುತ ಪರಿಸ್ಥಿತಿಯ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ.
Modi meet| ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಸೋಮವಾರ (05) ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ನೌಕಾಪಡೆ ಮತ್ತು ಭಾರತೀಯ ವಾಯುಪಡೆಯ ಮುಖ್ಯಸ್ಥರನ್ನು ಭೇಟಿಯಾದ ನಂತರ ಪ್ರಧಾನಿ ಮೋದಿ ನಡೆಸಿದ ಮೂರನೇ ಉನ್ನತ ಮಟ್ಟದ ಖಾಸಗಿ ಸಭೆ ಇದಾಗಿದೆ. ದಾಳಿಯ ನಂತರ ಭಾರತ ದಾಳಿ ಮಾಡಿದಾಗ ಪಾಕಿಸ್ತಾನದ ನಿರೀಕ್ಷಿತ ಪ್ರತೀಕಾರದ ಬಗ್ಗೆ ಭಾರತದ ಸನ್ನದ್ಧತೆಯ ಬಗ್ಗೆ ಚರ್ಚೆ ನಡೆಸುತ್ತಿದೆ ಎಂದು ಹೇಳಲಾಗಿದೆ.
ಪ್ರಧಾನಿ ಮೋದಿಯನ್ನು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಭೇಟಿಯಾಗಿದ್ದರು. ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಎನ್ಎಸ್ಎ ಅಜಿತ್ ದೋವಲ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಇದರ ಬೆನ್ನಲ್ಲೇ ಮೇ 3 ರಂದು ಸಂಜೆ 6 ಗಂಟೆಗೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ತ್ರಿಪಾಠಿ ಅವರು ಮೋದಿ ಅವರನ್ನು ಭೇಟಿಯಾಗಿ, ಹಲವು ವಿಚಾರಗಳ ಚರ್ಚೆ ನಡೆಸಿದ್ದರು. ಭಾನುವಾರ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಅವರ ಜೊತೆ ಸುಮಾರು 40 ನಿಮಿಷ ಚರ್ಚೆ ನಡೆಸಿದ್ದಾರೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಜನ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿದೆ. ಈಗಾಗಲೇ ಸೇನೆಗೆ ಮೋದಿ ಸರ್ಕಾರ ಫ್ರೀ ಹ್ಯಾಂಡ್ ಅನ್ನು ನೀಡಿದ್ದು, ನೀವೇ ಸಮಯ, ದಾಳಿಯ ವಿಧ, ಪ್ರತೀಕಾರದ ರೀತಿಯನ್ನು, ಟಾರ್ಗೆಟ್‌ಗಳನ್ನು ನಿರ್ಧರಿಸಿ ಎಂದು ಸೂಚಿಸಿತ್ತು. ಇದರ ಬೆನ್ನಲ್ಲೇ ಗಡಿಯಲ್ಲಿ ಪಾಕಿಸ್ತಾನ ಉಪಟಳ ಹೆಚ್ಚಾಗಿದ್ದು, ಪಾಕ್ ಕಡೆಯಿಂದ ನ್ಯೂಕ್ಲಿಯರ್ ಬೆದರಿಕೆ ಬರುತ್ತಿದ್ದು, ಮಿಸೈಲ್ ಟೆಸ್ಟ್ ಅನ್ನು ಕೂಡ ಮಾಡಿದೆ. ಇದರಿಂದ ಎರಡು ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.
(ಏಜೆನ್ಸೀಸ್)