

ಶ್ರೀನಗರ: ಜಮ್ಮು ಮತ್ತುಕಾಶ್ಮೀರದ(Jammu and Kashmir) ರಾಜೌರಿಯಲ್ಲಿ ಸೇನಾ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ರಾಜೌರಿಯ ಸುಂದರ್ಬನಿ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ದಾಳಿಯ ನಂತರ ಸೇನೆಯು ಜಾಗರೂಕವಾಗಿದ್ದು ಭಯೋತ್ಪಾದಕರನ್ನು ಹುಡುಕಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ರಾಜೌರಿಯ ನಿಯಂತ್ರಣ ರೇಖೆಯ ಬಳಿ ಈ ದಾಳಿ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನಿಯಂತ್ರಣ ರೇಖೆಯ ಬಳಿಯ ಹಳ್ಳಿಯೊಂದರಲ್ಲಿ ಬುಧವಾರ(ಫೆಬ್ರವರಿ 26) ಶಂಕಿತ ಉಗ್ರರು ಸೇನಾ ವಾಹನದ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಂದರ್ಬನಿ ಸೆಕ್ಟರ್ನ ಫಲ್ ಗ್ರಾಮದ ಬಳಿ ನಡೆದ ಅಲ್ಪಾವಧಿ ಗುಂಡಿನ ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿದ ಬಗ್ಗೆ ತಕ್ಷಣದ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಗ್ಗೆ ವಿವರಗಳನ್ನು ನೀಡಿದ ಅಧಿಕಾರಿಗಳು ಕಾಡಿನಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರು ಆ ಪ್ರದೇಶದಲ್ಲಿ ಹಾದುಹೋಗುತ್ತಿದ್ದ ಸೇನಾ ವಾಹನದ ಮೇಲೆ ಕೆಲವು ಸುತ್ತು ಗುಂಡು ಹಾರಿಸಿದರು. ಈ ಮಾರ್ಗವನ್ನು ಭಯೋತ್ಪಾದಕರಿಗೆ ಸಾಂಪ್ರದಾಯಿಕ ಒಳನುಸುಳುವಿಕೆ ಮಾರ್ಗವೆಂದು ಪರಿಗಣಿಸಲಾಗಿದೆ. ಭಯೋತ್ಪಾದಕರು ದಾಳಿ ಮಾಡಿದಾಗ, ಸೇನೆಯು ಎಚ್ಚರಗೊಂಡು ಪ್ರತೀಕಾರವಾಗಿ ಗುಂಡು ಹಾರಿಸಿತು. ಭಯೋತ್ಪಾದಕರನ್ನು ನಿಗ್ರಹಿಸಲು ಹೆಚ್ಚುವರಿ ಪಡೆಗಳನ್ನು ಕಳುಹಿಸಲಾಗಿದೆ. ಪ್ರಸ್ತುತ ಸೇನೆಯು ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಹೇಳಿದರು.(ಏಜೆನ್ಸೀಸ್)