ಮುರಿಡ್ಕೆಯಲ್ಲಿ ಮತ್ತೆ ಉಗ್ರ ಚಟುವಟಿಕೆ ಶುರು

modi
Published on

ಎಲ್​ಇಟಿ ಭಯೋತ್ಪಾದಕರು ಪುನಃ ಸಕ್ರಿಯ | ಧ್ವಂಸಗೊಂಡ ಸಭಾಂಗಣದಲ್ಲೇ ಪ್ರಾರ್ಥನೆ

ನವದೆಹಲಿ: ಆಪರೇಷನ್ ಸಿಂಧೂರದಲ್ಲಿ ಭಾರತೀಯ ಸೇನಾ ಪಡೆ ಪಾಕಿಸ್ತಾನದ ಮುರಿಡ್ಕೆಯಲ್ಲಿದ್ದ ಉಗ್ರರ ಕ್ಯಾಂಪ್ ಧ್ವಂಸಗೊಳಿಸಿದ್ದವು. ಭಾರತದ ಕಾರ್ಯಾಚರಣೆ ನಡೆದ ಕೆಲವೇ ವಾರಗಳಲ್ಲಿ ಲಷ್ಕರ್ ಎ ತೋಯ್ಬಾ ಉಗ್ರರು ಆ ಕ್ಯಾಂಪ್​ನಲ್ಲಿ ಮತ್ತೆ ಸಕ್ರಿಯರಾಗಿದ್ದು ಚಟುವಟಿಕೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

ಮುರಿಡ್ಕೆಯಲ್ಲಿನ ಉಗ್ರರ ಕ್ಯಾಂಪ್​ನಲ್ಲಿ ಲಷ್ಕರ್ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್ ಮತ್ತು ಆತನ ಸಂಬಂಧಿ ಅಬ್ದುಲ್ ರೆಹಮಾನ್ ಮಕ್ಕಿ ಹಾಗೂ ಮಗ ತಲ್ಲಾ ಸಯೀದ್ ಧಮೋಪದೇಶ ಮತ್ತು ಜಿಹಾದಿ ಪ್ರವಚನ ನೀಡುತ್ತಿದ್ದ ಸಭಾಂಗಣ ಸೇರಿದಂತೆ ಹಲವು ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ. ಈಗ ಅದೇ ಸಭಾಂಗಣದಲ್ಲಿ ಉಗ್ರರು ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋ ದೊರೆತಿದೆ. ಭಾರತ ನಡೆಸಿದ ದಾಳಿಗೆ ಸಭಾಂಗಣ ಬಹುತೇಕ ಧ್ವಂಸಗೊಂಡಿರುವುದು ಈ ವಿಡಿಯೋದಲ್ಲಿ ಕಂಡು ಬರುತ್ತಿದೆ.

ಆಪರೇಷನ್ ಸಿಂಧೂರದಲ್ಲಿ ಉಗ್ರರ ಕ್ಯಾಂಪ್​ಗಳಿಗೆ ಭಾರಿ ಪ್ರಮಾಣದ ಹಾನಿಯುಂಟಾಗಿದೆ. ಇದರ ಹೊರತಾಗಿಯೂ ಅವರು ಚಟುವಟಿಕೆಗಳನ್ನು ಮತ್ತೆ ಮುಂದುವರಿಸಿದ್ದಾರೆ. ಅವರು ಪಾಕಿಸ್ತಾನ ಸೇನೆಯ ನೆರವಿನೊಂದಿಗೆ ತಮ್ಮ ಕ್ಯಾಂಪ್​ಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದ್ದಾರೆ. ಈ ದಾಳಿಯನ್ನೇ ನೆಪವಾಗಿಸಿಕೊಂಡು ಲಷ್ಕರ್ ಮತ್ತು ಜೈಷ್ ಎ ಮೊಹಮ್ಮದ್ ಉಗ್ರರು ಸೌದಿ ಅರೇಬಿಯಾ, ಮಧ್ಯಪ್ರಾಚ್ಯದ ರಾಷ್ಟ್ರಗಳು ಸೇರಿದಂತೆ ಇತರ ಮುಸ್ಲಿಂ ರಾಷ್ಟ್ರಗಳಲ್ಲಿರುವ ತಮ್ಮ ಬೆಂಬಲಿಗರಿಂದ ದೊಡ್ಡಮಟ್ಟದ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಇದು ಸಹ ಅವರು ಮತ್ತೆ ನೆಲೆ ಕಂಡುಕೊಳ್ಳಲು ನೆರವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಆಪರೇಷನ್ ಸಿಂಧೂರ ದಾಳಿ ವೇಳೆ ಹಾನಿಗೊಳಗಾಗಿರುವ ಮಸೀದಿಗಳು, ಮುರಿಡ್ಕೆಯಲ್ಲಿರುವ ಜಮಾತ್ ಉದ್ ದವಾದ ಪ್ರಧಾನ ಕಚೇರಿಯನ್ನು ಪಾಕಿಸ್ತಾನ ಸರ್ಕಾರ ಮರು ನಿರ್ಮಾಣ ಮಾಡುವ ಭರವಸೆ ನೀಡಿರುವುದಾಗಿ ಜಮಾತ್ ಉದ್ ದವಾ ಮತ್ತು ಲಷ್ಕರ್ ಸಂಘಟನೆಗಳ ರಾಜಕೀಯ ಘಟಕವಾದ ಪಾಕಿಸ್ತಾನ ಮರ್ಕೆಜ್ ಮುಸ್ಲಿಂ ಲೀಗ್ ತಿಳಿಸಿತ್ತು. ಇದಕ್ಕೂ ಮುನ್ನ ಪಾಕಿಸ್ತಾನದ ಸರ್ಕಾರದ ಸಚಿವ ರಾಣಾ ತಹವ್ವುರ್ ಹುಸೇನ್ ಮುರಿಡ್ಕೆಗೆ ಭೇಟಿ ನೀಡಿ, ಹಾನಿಗೊಳಗಾದ ಕಟ್ಟಡಗಳ ಮರುನಿರ್ವಣದ ವೆಚ್ಚ ಪಾಕ್ ಸರ್ಕಾರ ಭರಿಸುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಸೇನೆ ಉಗ್ರರಿಗೆ ಮತ್ತೆ ತಮ್ಮ ನೆರವನ್ನು ಮುಂದುವರಿಸಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರತ ಮತ್ತೆ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಸುವ ಸಾಧ್ಯತೆಗಳಿವೆ.

ಭಯೋತ್ಪಾದನೆ ವಿರುದ್ಧ ಭಾರತ-ಪೆರುಗ್ವೆ ಒಗ್ಗಟ್ಟು

ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಪೆರುಗ್ವೆ ಒಗ್ಗಟ್ಟಾಗಿವೆ. ಸೈಬರ್ ಅಪರಾಧ ಮತ್ತು ಮಾದಕ ವಸ್ತು ಕಳ್ಳಸಾಗಣೆ ಸೇರಿದಂತೆ ಹಲವು ಸವಾಲುಗಳನ್ನು ಒಗ್ಗಟ್ಟಿನಿಂದ ಎದುರಿಸಲು ಕೆಲಸ ಮಾಡಲಿವೆ. ಡಿಜಿಟಲ್ ತಂತ್ರಜ್ಞಾನ, ಖನಿಜಗಳು, ಕೃಷಿ, ಇಂಧನ, ಆರೋಗ್ಯ, ರಕ್ಷಣೆ, ರೈಲ್ವೆ, ಬಾಹ್ಯಾಕಾಶ ಮತ್ತು ಆರ್ಥಿಕ ಪಾಲುದಾರಿಕೆಯ ಕ್ಷೇತ್ರದಲ್ಲಿ ಉಭಯ ದೇಶಗಳು ಒಟ್ಟಿಗೆ ಕಾರ್ಯನಿರ್ವಹಿಸಲಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಭಾರತ ಪ್ರವಾಸದಲ್ಲಿರುವ ಪೆರುಗ್ವೆಯ ಅಧ್ಯಕ್ಷ ಸ್ಯಾಂಟಿಯಾಗೊ ಪೆನಾ ಪಲಾಸಿಯೊಸ್​ರೊಂದಿಗೆ ಮೋದಿ ಮಾತುಕತೆ ನಡೆಸಿದರು.

ಸರ್ವಪಕ್ಷ ನಿಯೋಗಗಳೊಂದಿಗೆ ಮೋದಿ ಸಭೆ

ಆಪರೇಷನ್ ಸಿಂಧೂರ ಮತ್ತು ಭಯೋತ್ಪಾದನೆ ಕುರಿತ ಭಾರತದ ನಿಲುವನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ತಿಳಿಸಲು ಹಲವು ದೇಶಗಳಿಗೆ ಭೇಟಿ ನೀಡಿರುವ ಸರ್ವಪಕ್ಷಗಳ ನಿಯೋಗಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಲಿದ್ದಾರೆ. ಕಾಂಗ್ರೆಸ್ ಸಂಸದ ಶಶಿ ತರೂರ್, ಬಿಜೆಪಿ ಸಂಸದರಾದ ರವಿಶಂಕರ್ ಪ್ರಸಾದ್, ಭೈಜಯಂತ್ ಪಾಂಡಾ, ಜೆಡಿಯು ಸಂಸದ ಸಂಜಯ್ ಕುಮಾರ್ ಝಾ, ಡಿಎಂಕೆ ಸಂಸದೆ ಕಳಿಮೋಳಿ, ಎನ್​ಸಿಪಿ ನಾಯಕಿ ಸುಪ್ರಿಯಾ ಸುಳೆ, ಶಿವಸೇನೆ ಸಂಸದ ಶ್ರೀಕಾಂತ್ ಏಕನಾಥ್ ಶಿಂಧೆ ನೇತೃತ್ವದಲ್ಲಿ 33 ದೇಶಗಳಿಗೆ 7 ನಿಯೋಗಗಳು ತೆರಳಿವೆ. ನಿಯೋಗಗಳು ದೆಹಲಿಗೆ ವಾಪಸಾದ ಬಳಿಕ ಜೂನ್ 9 ಅಥವಾ 10ರಂದು ಮೋದಿ ನಿಯೋಗದ ಸದಸ್ಯರೊಂದಿಗೆ ಸಭೆ ನಡೆಸಲಿದ್ದು, ಅಂತಾರಾಷ್ಟ್ರೀಯ ಸಮುದಾಯದ ಪ್ರತಿಕ್ರಿಯೆ ಕುರಿತು ನಿಯೋಗಗಳಿಂದ ಮಾಹಿತಿ ಪಡೆಯಲಿದ್ದಾರೆ. ಆಪರೇಷನ್ ಸಿಂಧೂರದ ಬಳಿಕ ಜೂನ್ 4ರಂದು ಪ್ರಧಾನಿ ಅಧ್ಯಕ್ಷತೆಯಲ್ಲಿ ಮೊದಲ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಆಪರೇಷನ್ ಸಿಂಧೂರ ಕುರಿತು ಸಚಿವರಿಗೆ ಪೂರ್ಣ ಮಾಹಿತಿ ಒದಗಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಚೀನಾ-ಪಾಕ್ ಹೆದ್ದಾರಿ ಬಂದ್

ಪಾಕಿಸ್ತಾನ ಮತ್ತು ಚೀನಾ ವಿರುದ್ಧ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಕ್ರೋಶ ಭುಗಿಲೆದ್ದಿದೆ. ಪ್ರತಿಭಟನಾಕಾರರು ಪಾಕ್ ಆಕ್ರಮಿತ ಕಾಶ್ಮೀರ ದಲ್ಲಿರುವ ಗಿಲ್ಗಿಟ್ ಬಾಲ್ಟಿಸ್ತಾನದಲ್ಲಿ ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್​ನ ಭಾಗವಾಗಿ ನಿರ್ವಣವಾಗಿರುವ ಕಾರಕೋರಂ ಹೆದ್ದಾರಿಯನ್ನು 3 ದಿನಗಳಿಂದ ಬಂದ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದೆ.

ಪಾಕಿಸ್ತಾನ ಸರ್ಕಾರದ ವ್ಯಾಪಾರ ನೀತಿ ಗಳನ್ನು ವಿರೋಧಿಸಿ ಗಿಲ್ಗಿಟ್ ಬಾಲ್ಟಿಸ್ತಾನ ದಲ್ಲಿರುವ ಆಮದು ಮತ್ತು ರಫ್ತುದಾರರು ಪ್ರತಿಭಟಿಸುತ್ತಿದ್ದು, ಗುಲ್ಮತ್ ನಗರದಲ್ಲಿ ಸಾವಿರಾರು ಪ್ರತಿಭಟನಾಕಾರರು ಹೆದ್ದಾರಿಯಲ್ಲಿ ಕುಳಿತು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ನಮ್ಮನ್ನು ಆರ್ಥಿಕವಾಗಿ ಹತ್ಯೆ ಮಾಡಲು ಪಾಕ್ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸುತ್ತಿದ್ದಾರೆ. ಗಿಲ್ಗಿಟ್ ಮತ್ತು ಹುಂಜಾದ ವ್ಯಾಪಾರಿಗಳು, ವಿದ್ವಾಂಸರು ಮತ್ತು ಮುಖಂಡರುಗಳು ಪ್ರತಿಭಟನಾಕಾರರಿಗೆ ಬೆಂಬಲ ಘೋಷಿಸಿದ್ದಾರೆ.

ಪಾಕಿಸ್ತಾನ ಸೋಸ್ಟ್ ಡ್ರೖೆ ಬಂದರಿನಲ್ಲಿ ಚೀನಾದಿಂದ ಆಮದು ಮಾಡಿಕೊಳ್ಳಲಾದ ಸರಕುಗಳಿಗೆ ಕಸ್ಟಮ್್ಸ ಕ್ಲಿಯರೆನ್ಸ್ ಕೊಡು ವುದನ್ನು ನಿಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷದ ಡಿಸೆಂಬರ್​ನಿಂದ 257 ಸರಕುಗಳು ಬಂದರಿನಲ್ಲಿ ಸಿಲುಕಿಕೊಂಡಿವೆ. ಇದರಿಂದಾಗಿ ನಮಗೆ ಭಾರಿ ನಷ್ಟವಾಗುತ್ತಿದೆ ಎಂದು ಪ್ರತಿಭಟನಾ ನಿರತ ವ್ಯಾಪಾರಿಗಳು ಆರೋಪಿಸುತ್ತಿದ್ದಾರೆ.

ಪಾಕ್​ನ 2 ನಿಯೋಗಗಳ ರವಾನೆ : ಆಪರೇಷನ್ ಸಿಂಧೂರ ಬಳಿಕ ಭಾರತ ಸರ್ಕಾರ ಸರ್ವಪಕ್ಷಗಳ 7 ನಿಯೋಗವನ್ನು ರಚಿಸಿದ್ದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸಹ 2 ನಿಯೋಗಗಳನ್ನು ರಚಿಸಿದ್ದು, ಜಾಗತಿಕ ಮಟ್ಟದಲ್ಲಿ ತನಗೆ ಬೆಂಬಲ ಪಡೆಯಲು ರವಾನಿಸಿದೆ. ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಹಾಗೂ ಪ್ರಧಾನ ಮಂತ್ರಿ ವಿಶೇಷ ಸಹಾಯಕ ಸಯ್ಯದ್ ತಾರಿಖ್ ಫತೇಮಿ ನೇತೃತ್ವದಲ್ಲಿ 2 ನಿಯೋಗಗಳನ್ನು ರಚಿಸಲಾಗಿದೆ. ಈ ನಿಯೋಗಗಳು ನ್ಯೂಯಾರ್ಕ್, ವಾಷಿಂಗ್ಟನ್ ಡಿಸಿ, ಲಂಡನ್, ಬ್ರುಸ್ಸೆಲ್ಸ್, ಮಾಸ್ಕೋಗೆ ತೆರಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net