

ಬೆಂಗಳೂರು: ಹಿಂದು ಮುಖಂಡರ ಹತ್ಯೆ ಮತ್ತು ದಕ್ಷಿಣ ಭಾರತದಲ್ಲಿ ಐಸಿಸ್ ಉಗ್ರ ಸಂಘಟನೆ ಬಲಪಡಿಸಲು ಶಂಕಿತ ಉಗ್ರರು ಡಾರ್ಕ್ ವೆಬ್ನಲ್ಲಿ ಗೌಪ್ಯ ಮಾಹಿತಿ ವಿನಿಮಯ ಮಾಡಿಕೊಂಡಿರುವ ಸ್ಪೋಟಕ ಮಾಹಿತಿ ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ತನಿಖೆ ವೇಳೆ ಹೊರಬಿದ್ದಿದೆ.
ತಮಿಳುನಾಡಿನಲ್ಲಿ ನಡೆದಿದ್ದ ಚೆನ್ನೈ ಕ್ಯೂ ಬ್ರಾಂಚ್ ಪೊಲೀಸರು ಹಾಗೂ ಹಿಂದು ಮುಖಂಡನ ಹತ್ಯೆ ಪ್ರಕರಣದಲ್ಲಿ ಫೆ.24ರಂದು ಬಂಧಿತರಾಗಿರುವ 10 ಶಂಕಿತ ಉಗ್ರರ ಎನ್ಐಎ ವಿಚಾರಣೆ ವೇಳೆ ಹಲವು ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿವೆ. ಬಂಧಿತ 8ನೇ ಆರೋಪಿ ಮೊಹಮ್ಮದ್ ಜೈಜ್, ಡಾರ್ಕ್ ವೆಬ್ನಲ್ಲಿ ಉಗ್ರ ಚಟುವಟಿಕೆ ಯಲ್ಲಿ ಸಕ್ರಿಯ ಆಗಿರುವುದು ಗೊತ್ತಾಗಿದೆ. ಕೋಲಾರ ಮೂಲದ ಜೈಜ್, ಕಿಂಗ್ಪಿನ್ ಖ್ವಾಜಾ ಮೆಹದ್ದೀನ್ ಜತೆ ಸೇರಿ ಡಾರ್ಕ್ ವೆಬ್ನಲ್ಲಿ ಉಗ್ರ ಸಂಘಟನೆಗಳನ್ನು ಸಂಪರ್ಕ ಮಾಡಿದ್ದ.
ಡಾರ್ಕ್ ವೆಬ್ನ ಇ-ಮೇಲ್, ಮೆಸೆಂಜರ್ನಲ್ಲಿ ಯುವಕರನ್ನು ಸಂಪರ್ಕ ಮಾಡಿ ಉಗ್ರ ಸಂಘಟನೆಗೆ ಹೊಸ ಸದಸ್ಯರನ್ನು ನೇಮಕ ಮಾಡುತ್ತಿದ್ದ. ವಿದೇಶದಲ್ಲಿ ಸದಸ್ಯರಿಗೆ ಶಸ್ತ್ರಾಸ್ತ್ರ, ಸ್ಪೋಟಕ ವಸ್ತುಗಳ ಬಳಕೆ ಕುರಿತು ಟ್ರೖೆನಿಂಗ್ ಕ್ಯಾಂಪ್ಗಳಿಗೆ ಕಳುಹಿಸುವುದು ಮತ್ತು ದಕ್ಷಿಣ ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚುರೂಪಿಸಿದ್ದ. ಇದಕ್ಕೆ ಬೆಂಗಳೂರಿನ 9ನೇ ಆರೋಪಿ ಇಜಾಜ್ ಪಾಷಾ ಮತ್ತು ಮೆಹಬೂಬ್ ಪಾಷಾ ಕೈ ಜೋಡಿಸಿದ್ದರು. ಅಕ್ರಮವಾಗಿ ಪಿಸ್ತೂಲ್, ಅಲ್ಯೂಮಿನಿಯಂ ಖರೀದಿಸಿದ್ದರು. ಇತ್ತೀಚೆಗೆ ಬಂಧಿತನಾದ ಹುಸೇನ್ ಫರೀಫ್, ಇಮ್ರಾನ್ ಖಾನ್, ಮೊಹಮ್ಮದ್ ಹನೀಫ್ ಖಾನ್ಗೆ ಸೇರಿದ ಬೆಂಗಳೂರಿನ ಮನೆ ಮೇಲೆ ದಾಳಿ ನಡೆಸಿದಾಗ ಸ್ಪೋಟಕ ವಸ್ತುಗಳು ಪತ್ತೆಯಾಗಿವೆ. ಕೆಲವು ವಸ್ತುಗಳನ್ನು ಖ್ವಾಜಾ ಮೆಹದ್ದೀನ್ ಮತ್ತು ಸಹಚರರು ಕಾಡುಗಳಲ್ಲಿ ಸಂಗ್ರಹಿಸಿ ಅಲ್ಲಿಯೇ ಕೆಲಕಾಲ ನೆಲೆಸಿ ಭಯೋತ್ಪಾಕ ಕೃತ್ಯಕ್ಕೆ ಅವಣಿಸುತ್ತಿದ್ದರು. ಖ್ವಾಜಾ ಮೆಹದ್ದೀನ್ ಸೂಚನೆ ಮೇರೆಗೆ ಎಲ್ಲ 10 ಶಂಕಿತರು ನಕಲಿ ದಾಖಲೆ ಕೊಟ್ಟು ಮೊಬೈಲ್ ಸಿಮ್ ಖರೀದಿಸಿದ್ದರು. ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಬಗ್ಗೆ ದಾಖಲೆಗಳು ಪತ್ತೆಯಾಗಿವೆ. ಎಲ್ಲ ದಾಖಲೆ, ಸ್ಪೋಟಕ ವಸ್ತುಗಳನ್ನು ಚೆನ್ನೈ ಎನ್ಐ ವಿಶೇಷ ನ್ಯಾಯಾಲಯಕ್ಕೆ ರವಾನಿಸಲಾಗಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಡಾರ್ಕ್ ವೆಬ್ ಆತಂಕ: ಡಾರ್ಕ್ ವೆಬ್ ಈ ಮೊದಲು ಡ್ರಗ್ಸ್ ಮಾಫಿಯಾ, ಹವಾಲ ದಂಧೆಕೋರರಿಂದ ಬಳಕೆಯಾಗುತ್ತಿತ್ತು. ಇದೀಗ ಉಗ್ರ ಚಟುವಟಿಕೆಗಳಿಗೂ ಬಳಕೆ ಆಗಿರುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಇತ್ತೀಚೆಗೆ ರೈಲ್ವೆ ಇಲಾಖೆ ವೆಬ್ಸೈಟ್ ಹ್ಯಾಕ್ ಮಾಡಿ ನಕಲಿ ಯೂಸರ್ ಐಡಿ ಸೃಷ್ಟಿಸಿ ‘ಇ-ಟಿಕೆಟ್’ ಮಾರಾಟ ಜಾಲದಲ್ಲಿ ಸಿಕ್ಕಿಬಿದ್ದ ವಂಚಕ ಗುಲಾಮ್ ಮುಸ್ತಾಫ್, ಪಾಕಿಸ್ತಾನದ ಉಗ್ರ ಸಂಘಟನೆಗಳ ಜತೆ ನಂಟು ಇರುವ ಬಗ್ಗೆ ಪೊಲೀಸರು ದೃಢಪಡಿಸಿದ್ದರು. ಕೇಂದ್ರ ಸರ್ಕಾರದ ವೆಬ್ಗಳನ್ನು ಹ್ಯಾಕ್ ಮಾಡಿ ಪಾಕ್ ಉಗ್ರರಿಗೆ ಮಾಹಿತಿ ರವಾನಿಸುತ್ತಿದ್ದ. ಇದೀಗ ಜೈಜ್ ಡಾರ್ಕ್ ವೆಬ್ ಬಳಸಿರುವುದು ಬೆಳಕಿಗೆ ಬಂದಿದೆ.
ಏನಿದು ಡಾರ್ಕ್ ವೆಬ್?
ಅಮೆರಿಕಾ ಸೇನೆ 1990ರ ದಶಕದಲ್ಲಿ ಮಿಲಿಟರಿ ಮಾಹಿತಿ ವಿನಿಮಯಕ್ಕೆ ಟಾರ್ ಬ್ರೌಸರ್ ಮತ್ತು ಆನಿಯನ್ ನೆಟ್ವರ್ಕ್ ಅನ್ನು ಯುಎಸ್ ನೌಕಾಪಡೆಯ ಮಾಹಿತಿ ತಂತ್ರಜ್ಞಾನ ಪ್ರಯೋಗಾಲಯ ಅನ್ವೇಷಣೆ ಮಾಡಿತು. ಡಾರ್ಕ್ ವೆಬ್ನಲ್ಲಿ ಮಾಹಿತಿ ಅಥವಾ ಡಾಟಾ ಕಳುಹಿಸಿದವರು ಮತ್ತು ಡೌನ್ಲೋಡ್ ಮಾಡಿಕೊಂಡಿದ್ದವರು ಯಾರು ಎಂದು ಕಂಡು ಹಿಡಿಯಲು ಸಾಧ್ಯವಿಲ್ಲ. ಡೀಪ್ ವೆಬ್ ಮತ್ತು ಡಾರ್ಕ್ ವೆಬ್ ಪದಗಳು ಬೇರೆ ಬೇರೆ. ಡೀಪ್ ವೆಬ್ ಅಥವಾ ಡೀಪ್ ನೆಟ್ ಗೂಗಲ್ ರೀತಿಯ ಸರ್ಚ್ ಇಂಜಿನ್ಗಳಿಗೆ ಸಿಗಲಾರದು. ತಿಳಿದವರು ಬ್ರೌಸರ್ ಮೂಲಕ ಪ್ರವೇಶ ಮಾಡಬಹುದು. ಇದಕ್ಕೆ ಟಾರ್ ಬ್ರೌಸರ್ ಬೇಕೇಬೇಕು. ಸಾಮಾನ್ಯವಾಗಿ ಇಂಟರ್ನೆಟ್ ಬಳಸುವಾಗ ಕಂಪ್ಯೂಟರ್ ಅಥವಾ ಮೊಬೈಲ್ ಐಪಿ ವಿಳಾಸ ಹೊಂದಿರುತ್ತದೆ. ಡಾರ್ಕ್ ವೆಬ್ನಲ್ಲಿ ಇದ್ಯಾವುದು ಇರುವುದಿಲ್ಲ. ವಿಳಾಸವೂ ಬಿಟ್ಟು ಕೊಡುವುದಿಲ್ಲ. ಅದಕ್ಕಾಗಿ ಅಕ್ರಮ ದಂಧೆಗೆ ಬಳಸುತ್ತಾರೆ.