ಉತ್ತರಾಖಂಡದಲ್ಲಿ ಧಾಮಿ 2ನೇ ಅವಧಿ ಆರಂಭ: ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿ

PM Modi
Published on

ನವದೆಹಲಿ: ಉತ್ತರಾಖಂಡದ 12ನೇ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದು, ಅವರೊಂದಿಗೆ 8 ಶಾಸಕರೂ ಮಂತ್ರಿಗಳಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಧಾಮಿ ಖತಿಮಾ ಕ್ಷೇತ್ರದಿಂದ ಚುನಾವಣೆ ಸೋತರೂ ಪಕ್ಷ ಚುನಾವಣೆ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಈ ಹಿನ್ನೆಲೆಯಲ್ಲಿ ದಿಲ್ಲಿ ನಾಯಕರು ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರು ಧಾಮಿ ಮುಂದುವರಿಸುವ ತೀರ್ಮಾನ ಕೈಗೊಂಡಿದ್ದರು.

ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕರಲ್ಲಿ 3 ಬ್ರಾಹ್ಮಣ, 3 ಠಾಕೂರ್, ಇಬ್ಬರು ದಲಿತ ಮತ್ತು ಓರ್ವ ವೈಶ್ಯ ಸಮುದಾಯಕ್ಕೆ ಸೇರಿದ್ದಾರೆ. ಸಂಪುಟದಲ್ಲಿ ಇನ್ನೂ ಮೂರು ಸ್ಥಾನ ಖಾಲಿ ಇದೆ. ಕಳೆದ ಅವಧಿಯಲ್ಲಿ ಸ್ಪೀಕರ್ ಆಗಿದ್ದ ಪ್ರೇಮ್ ಚಂದ್ ಅಗರ್ವಾಲ್​ರನ್ನು ಈ ಬಾರಿ ಮಂತ್ರಿಯನ್ನಾಗಿ ಮಾಡಲಾಗಿದೆ.

ಸಂಘದ ಹಿನ್ನೆಲೆಯ ಧಾಮಿ: 46 ವರ್ಷದ ಧಾಮಿ ಠಾಕೂರ್ ಸಮುದಾಯಕ್ಕೆ ಸೇರಿದವರು. 33 ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಅದರ ಅಂಗಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಉತ್ತರಾಖಂಡ ಬಿಜೆಪಿ ಯುವ ಮೋರ್ಚಾದಲ್ಲಿ 2002ರಿಂದ 2008ರ ತನಕ ಕಾರ್ಯನಿರ್ವಹಿಸಿದ್ದ ಧಾಮಿ, 2001ರಿಂದ 2002ರ ತನಕ ರಾಜ್ಯದ ಮೊದಲ ಸಿಎಂ ಆಗಿದ್ದ ಭಗತ್ ಸಿಂಗ್ ಕೋಶಿಯಾರಿ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದರು. 2012 ಮತ್ತು 17ರಲ್ಲಿ ಖತಿಮಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ರಾಜ್ಯದಲ್ಲಿ ಬಿಜೆಪಿ ಮರು ಆಯ್ಕೆಯಾದರೆ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದಾಗಿ ಧಾಮಿ ಚುನಾವಣೆಗೆ ಮುನ್ನ ಘೋಷಿಸಿದ್ದರು. ಈಗ ಈ ಘೋಷಣೆ ಈಡೇರಿಸುವ ಸವಾಲು ಮುಂದಿದೆ.

ಕೇಜ್ರಿವಾಲ್ ಸವಾಲು

ದಿಲ್ಲಿಯ ಉತ್ತರ, ಪೂರ್ವ ಮತ್ತು ಪಶ್ಚಿಮ ಭಾಗದ ಪಾಲಿಕೆಗಳನ್ನು ವಿಲೀನಗೊಳಿಸುವ ವಿಧೇಯಕ ವಿರೋಧಿಸಿರುವ ಆಪ್ ಸಂಚಾಲಕ ಹಾಗೂ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಪಾಲಿಕೆ ಚುನಾವಣೆಗಳನ್ನು ಸರಿಯಾದ ಸಮಯಕ್ಕೆ ನಡೆಸಿ ಬಿಜೆಪಿ ಗೆಲುವು ಸಾಧಿಸಿದರೆ ನಮ್ಮ ಪಕ್ಷರಾಜಕೀಯ ಸನ್ಯಾಸ ತೆಗೆದುಕೊಳ್ಳಲಿದೆ ಎಂದು ಸವಾಲು ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net