

ಶ್ರೀರಂಗಪಟ್ಟಣ: ತಾಲೂಕಿನ ಚಂದಗಾಲು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಗುರುವಾರ ಬಿಜೆಪಿ ಮುಖಂಡರು ಆಗಮಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಗುರುವಾರ ಬೆಳಗ್ಗೆ ಅದೇ ಗ್ರಾಮದ ಗ್ರಾಮಸ್ಥ ಹಾಗೂ ಕಾಂಗ್ರೆಸ್ ಮುಖಂಡ ವಕೀಲ ವೆಂಕಟೇಶ್ ವಿರೋಧ ವ್ಯಕ್ತಪಡಿಸಿದರು.
ಶಾಲೆಯ ಒಳಭಾಗದಲ್ಲಿ ಗ್ರಾಮಸ್ಥರ ಸಮಸ್ಯೆ ಆಲಿಸಲು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೂರಲು ಹಾಕಿದ್ದ ಶಾಮಿಯಾನಕ್ಕೆ ಅವಕಾಶ ನೀಡಿದ್ದು ಯಾರು? ಹೇಗೆ ನೀಡಿದ್ದೀರಿ? ಎಂದು ಶಾಲೆಯ ಶಿಕ್ಷಕರನ್ನು ಕಾರಣ ಕೇಳಿ ತಕ್ಷಣ ತೆರವುಗೊಳಿಸುವಂತೆ ತಾಕೀತು ಮಾಡುತ್ತಿದ್ದ ವೇಳೆ, ಸ್ವಗ್ರಾಮದ ಜನರಿಂದಲೇ ವಿರೋಧ ವ್ಯಕ್ತವಾಯಿತು.
ಈ ವೇಳೆ ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು ಹಾಗೂ ವೆಂಕಟೇಶ್, ಮುಸ್ಲಿಂ ಸೌಹಾರ್ದ ವೇದಿಕೆ ಮುಖಂಡ ಅಬ್ದುಲ್ ಸುಕೂರ್, ಚಿಕ್ಕತಮ್ಮೇಗೌಡ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಪ್ರಕಾಶ್ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ತಕ್ಷಣ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ಶಾಂತಗೊಳಿಸಿದರು.
ಬಳಿಕ ಸ್ಥಳದಲ್ಲಿ ಪೊಲೀಸ್ ತುಕಡಿಗಳನ್ನು ನಿಯೋಜಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮೊಕ್ಕಾಂ ಹೂಡಿದ್ದರು.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ಯುವ ಮುಖಂಡ ಸಚ್ಚಿದಾನಂದ, ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದ ಶಾಸಕ ಮುನಿರಾಜು, ಮದ್ದೂರಿನ ಮುಖಂಡ ಎಸ್.ಪಿ.ಸ್ವಾಮಿ, ಪುರಸಭೆ ಸದಸ್ಯರಾದ ಗಂಜಾಂ ಕೃಷ್ಣಪ್ಪ, ಗಂಜಾಂ ಶಿವು, ಎಸ್.ಪ್ರಕಾಶ್, ಶ್ರೀನಿವಾಸ್ ಉಪಸ್ಥಿತರಿದ್ದರು.
ಅಧಿಕಾರಿ ವಿರುದ್ದ ಸಚ್ಚಿದಾನಂದ ಕೆಂಡಾಮಂಡಲ: ತಾಲೂಕಿನ ಮಹದೇವಪುರ ಗ್ರಾಮದ ಚಿಕ್ಕಮ್ಮ ದೇವಿ ದೇವಾಲಯಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಂಸದ ಯದುವೀರ್ ಹಾಗೂ ಬಿಜೆಪಿ ಮುಖಂಡರು ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಸರ್ಕಾರಿ ಶಾಲೆಯ ಪಹಣಿ ಸಮಸ್ಯೆ ಕುರಿತು ಪ್ರಶ್ನಿಸಿದ ವೇಳೆ ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಸರ್ವೇ ನಂ.215ರ ಸರ್ಕಾರಿ ಶಾಲೆಯ 30 ಗುಂಟೆ ಜಾಗ ವಕ್ಫ್ ಆಸ್ತಿ ಎಂದು ಸಮಜಾಯಿಷಿ ನೀಡಿದ ವೇಳೆ ಬಿಜೆಪಿ ಮುಖಂಡ ಸಚ್ಚಿದಾನಂದ ಆರ್.ಅಶೋಕ್ ಅವರ ಎದುರಲ್ಲೇ ಅಧಿಕಾರಿಗೆ ತರಾಟೆ ತೆಗದುಕೊಂಡರು. ಇದರಿಂದ ಅಧಿಕಾರಿ ಕೆಲಕಾಲ ತಬ್ಬಿಬ್ಬಾದರು.