ನೈಸ್ ಯೋಜನೆ ಕೈಬಿಡಲು ಒಲವು

Nice Road
Published on

ಬೆಂಗಳೂರು: ಬೆಂಗಳೂರು-ಮೈಸೂರು ಮೂಲ ಸೌಕರ್ಯ ಕಾರಿಡಾರ್ ಎಂಟರ್‌ಪ್ರೈಸ್ (ನೈಸ್ ರಸ್ತೆ ) ಯೋಜನೆ ಕೈಬಿಡಲು ಸಚಿವ ಸಂಪುಟ ಉಪ ಸಮಿತಿ ಸರ್ಕಾರಕ್ಕೆ ಶಿಾರಸು ಮಾಡಲು ಒಲವು ಹೊಂದಿದ್ದು, ಈ ಪ್ರಕಾರ ಅಂದಾಜು 10,200 ಎಕರೆ ಭೂಮಿಯನ್ನು ರೈತರಿಗೆ ವಾಪಸ್ ಸಿಗುವ ಸಾಧ್ಯತೆ ದಟ್ಟವಾಗಿದೆ.

ನೈಸ್ ಯೋಜನೆಯ ಅನುಷ್ಠಾನ ಕುರಿತು ಪ್ರಗತಿ ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಸಂಬಂಧ ಪರಾಮರ್ಶಿಸಿ, ಸೂಕ್ತ ಶಿಾರಸು ಮಾಡುವಂತೆ ಸರ್ಕಾರ ಕಾನೂನು ಸಚಿವ ಎಚ್.ಕೆ. ಪಾಟೀಲ್, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಒಳಗೊಂಡಂತೆ ಸಚಿವ ಸಂಪುಟದ ಉಪ ಸಮಿತಿ ರಚಿಸಿ ಒಂದು ತಿಂಗಳು ಗಡುವು ನೀಡಿತ್ತು. ಇತ್ತೀಚೆಗೆ ಸುಪ್ರೀಂ ಕೋರ್ಟ್ ಹೊರಡಿಸಿದ ಆದೇಶವೂ ನೈಸ್ ಯೋಜನೆ ವಿರುದ್ಧವಾಗಿದೆ.

ಕೆಂಗೇರಿ ಬಳಿಯ ಸೋಂಪುರದ ವರೆಗೆ ರಸ್ತೆ ಮುಗಿದಿದೆ. ಅಲ್ಲಿಂದ ಮೈಸೂರು ವರೆಗೂ ಯಾವುದೇ ಕಾಮಗಾರಿ ನಡೆದಿಲ್ಲ. ಈಗಾಗಲೇ ಬೆಂಗಳೂರು-ಮೈಸೂರು ನಡುವಿನ 8 ಪಥ ರಸ್ತೆಯನ್ನು ಕೇವಲ ನಾಲ್ಕೈದು ವರ್ಷದಲ್ಲಿ ಸರ್ಕಾರವೇ ಪೂರ್ಣ ಮಾಡಿದೆ. ಖಾಸಗಿ ರಸ್ತೆಯ ಅಗತ್ಯವಿಲ್ಲ ಎಂದು ಸಚಿವ ಸಂಪುಟದ ಉಪ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಯೋಜನೆಯ ಚೌಕಟ್ಟಿನ ಕರಾರು ಪ್ರಕಾರ 13,237 ಎಕರೆ ಖಾಸಗಿ ಜಮೀನಿನ ಬದಲು ಕೆಐಎಡಿಬಿ ಒಪ್ಪಂದದಲ್ಲಿ 23,846 ಎಕರೆ ಜಮೀನು ನೀಡಲಾಗಿದೆ. 30 ವರ್ಷ ಮುಗಿಯುತ್ತಾ ಬಂದಿದ್ದು, ಯೋಜನೆ ಪೂರ್ಣಗೊಂಡಿಲ್ಲ. ರಸ್ತೆ ಜತೆಗೆ ಮೂಲ ಸೌಕರ್ಯ ಒದಗಿಸುವುದಾಗಿ ಹೇಳಿದ್ದ ನೈಸ್ ಸಂಸ್ಥೆ ಕಾಮಗಾರಿ ಶುರು ಮಾಡಿಲ್ಲ.

ಟೌನ್‌ಶಿಪ್‌ಗಳ ನಿರ್ಮಾಣಕ್ಕೆಂದು ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಸಾವಿರಾರು ಎಕರೆ ಜಮೀನಿನ ಪಹಣಿಯಲ್ಲಿ ಕೆಐಎಡಿಬಿ ಮತ್ತು ನೈಸ್ ಸಂಸ್ಥೆ ಹೆಸರು ಉಲ್ಲೇಖಿಸಲಾಗಿದೆ. ರೈತರು ಪರಿಹಾರ ಪಡೆದಿಲ್ಲ. ಅವರ ಅನುಭೋಗದಲ್ಲಿದೆ. ಆದರೆ, ಮಾರಾಟ ಅಥವಾ ಸಾಲಸೌಲಭ್ಯ ಪಡೆಯಲು ಸಾಧ್ಯವಾಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂಬುದು ಸಮಿತಿ ಸಭೆಯಲ್ಲಿ ಚರ್ಚೆಗಳು ನಡೆದಿದೆ.

ಡ್ರೋನ್ ಸರ್ವೇ:

ನೈಸ್ ರಸ್ತೆ ಒಟ್ಟಾರೆ ದೃಶ್ಯ ನೋಟಕ್ಕಾಗಿ ಮತ್ತು ಟ್ರಾಫಿಕ್ ಅಧ್ಯಯನ ನಡೆಸಲು ಡ್ರೋನ್ ಸರ್ವೇ ನಡೆಸಲಾಗುತ್ತಿದೆ. ಯೋಜನೆಗಾಗಿ ನೀಡಿರುವ ಜಮೀನಿನ ವಾಸ್ತವ ತಿಳಿಯಲು ದಾಖಲಾತಿಗಳ ಪರಿಶೀಲನೆಗೆ ಮತ್ತು ಸರ್ವೇ ಕಾರ್ಯ ಕೈಗೊಳ್ಳಲು ಎರಡು ಪ್ರತ್ಯೇಕ ತಂಡ ರಚನೆ ಮಾಡಲಾಗಿತ್ತು.

ಕೋರ್ಟ್‌ನಲ್ಲಿ ನೂರಾರು ಕೇಸ್ :

ನೈಸ್ ರಸ್ತೆ ಒಪ್ಪಂದ ಮತ್ತು ಪರಿಹಾರ ನೀಡುವ ವಿಚಾರದಲ್ಲಿ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಸಿವಿಲ್ ಕೋರ್ಟ್‌ನಲ್ಲಿ 189 ಪ್ರಕರಣ, ಹೈಕೋರ್ಟ್‌ನಲ್ಲಿ 164 ಪ್ರಕರಣಗಳಿದ್ದು, ಈ ಪೈಕಿ 64 ಪ್ರಕರಣ ವಜಾಗೊಂಡಿವೆ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ 21 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

ಬಿಡದಿವರೆಗೆ ವಿಸ್ತರಣೆ ?:

ಕೆಂಗೇರಿ ಬಳಿಯ ಸೋಂಪುರದಿಂದ ಬಿಡದಿ ವರೆಗೆ ನೈಸ್ ರಸ್ತೆ ಕಾಮಗಾರಿ ಪೂರ್ಣ ಮಾಡಿ ಬೆಂಗಳೂರು-ಮೈಸೂರು 8 ಪಥ ರಸ್ತೆಗೆ ಲಿಂಕ್ ಮಾಡಬೇಕೆಂದು ಸಚಿವರೊಬ್ಬರು ಪ್ರಸ್ತಾಪ ಮಾಡಿದ್ದಾರೆ. ಒಂದು ವೇಳೆ ಭೂಸ್ವಾಧೀನ ಮಾಡಿದರೆ ಪ್ರಸ್ತುತ ದರ ನೀಡಬೇಕೆಂದು ಸಚಿವ ಸಂಪುಟ ಉಪಸಮಿತಿ ಸರ್ಕಾರಕ್ಕೆ ಶಿಾರಸು ಮಾಡಿದೆ. ಈ ಬಗ್ಗೆ ಯಾವುದೇ ನಿರ್ಣಯವಾಗಿಲ್ಲ ಎಂದು ಖಚಿತ ಮೂಲಗಳು ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net