144 ಕ್ಷೇತ್ರಕ್ಕೆ ಬಿಜೆಪಿ ತಂತ್ರ: 2024ರ ಚುನಾವಣೆಗೆ 10 ಅಂಶದ ಸೂತ್ರ

Modi
ಹೈದರಾಬಾದ್​ನಲ್ಲಿ ರ‍್ಯಾಲಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ.
Published on

ನವದೆಹಲಿ: ಬಿಜೆಪಿ ಪ್ರಾಬಲ್ಯ ಹೊಂದಿರದ 144 ಕ್ಷೇತ್ರಗಳನ್ನು ಗುರುತಿಸಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ 10 ಸೂತ್ರಗಳನ್ನು ಪಕ್ಷ ಸಿದ್ಧಪಡಿಸಿದೆ. 2019ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಎರಡನೇ ಸ್ಥಾನಗಳಿಸಿದ 144 ಸ್ಥಾನಗಳನ್ನು ದುರ್ಬಲವೆಂದು ಗುರುತಿಸಲಾಗಿದ್ದು, ಇಲ್ಲಿ ಗೆಲುವಿನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ರಣತಂತ್ರ ಇದಾಗಿದೆ.

ನರೇಂದ್ರ ಮೋದಿ ಸರ್ಕಾರದ 8ನೇ ವರ್ಷ ಸಂಭ್ರಮಾಚರಣೆಯ ಅಂಗವಾಗಿ ‘ಸೇವೆ, ಸುಶಾಸನ, ಬಡವರ ಕಲ್ಯಾಣ’ ಧ್ಯೇಯ ವ್ಯಾಕ್ಯದೊಂದಿಗೆ ಮೇ 30ರಿಂದ ಜೂನ್ 15ರವರೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮದ ಭಾಗವಾಗಿ ದುರ್ಬಲವೆಂದು ಗುರುತಿಸಲಾದ ಲೋಕಸಭಾ ಕ್ಷೇತ್ರಗಳಿಗೆ ಕೇಂದ್ರ ಸಚಿವರು ಭೇಟಿ ನೀಡಲಿದ್ದು, ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜತೆ ರ್ಚಚಿಸಲಿದ್ದಾರೆ. ನಂತರದ ದಿನಗಳಲ್ಲಿ ಪಕ್ಷದ ಹಿರಿಯ ನಾಯಕರೂ ಭೇಟಿ ನೀಡಲಿದ್ದಾರೆ. ಬೂತ್ ಮಟ್ಟದಿಂದ ಪಕ್ಷದ ಬಲವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಹತ್ತು ಸೂತ್ರಗಳು

  1. 144 ಕ್ಷೇತ್ರಗಳಿಗೆ ಪಕ್ಷದ ಹಿರಿಯ ನಾಯಕರು, ಕೇಂದ್ರ ಸಚಿವರು ಭೇಟಿ ನೀಡಿ ಸರ್ಕಾರದ ಸಾಧನೆಯ ವ್ಯಾಪಕ ಪ್ರಚಾರ ನಡೆಸುವಂತೆ ಕಾರ್ಯಕರ್ತರನ್ನು ಹುರಿದುಂಬಿಸುವುದು.
  2. ಮಂತ್ರಿಗಳು, ಮುಖಂಡರು ಮತ್ತು ಕಾರ್ಯಕರ್ತರು ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ನೇರ ಭೇಟಿ. ಸ್ಥಳೀಯ ಪ್ರಭಾವಿ ಗಣ್ಯರು/ಮುಖಂಡರ ಮನೆಯಲ್ಲಿ ಭೋಜನ ಕೂಟ.
  3. ಕೇಂದ್ರ ಸಚಿವರಿಂದ ಫಲಾನುಭವಿಗಳ ಜತೆಗಿನ ಸೆಲ್ಪಿ ಚಿತ್ರಗಳ ಅಪ್​ಲೋಡ್.
  4. ದುರ್ಬಲವೆಂದು ಗುರುತಿಸಲಾದ ಕ್ಷೇತ್ರದಲ್ಲಿ ಪಕ್ಷವನ್ನು ಸಬಲಗೊಳಿಸಲು ಅಗತ್ಯ ಮಾಹಿತಿ ಕಲೆಹಾಕುವುದು. ಚುನಾವಣಾ ಡೇಟಾ, ಜಾತಿ, ಇನ್ನಿತರ ವಿಷಯಗಳ ಮಾಹಿತಿ ಸಂಗ್ರಹ.
  5. ಬೂತ್ ಮಟ್ಟದಿಂದ ಪಕ್ಷದ ಸಂಘಟನೆಗೆ ಒತ್ತು.
  6. 144 ಕ್ಷೇತ್ರಗಳಲ್ಲಿ ಪಕ್ಷದ ಮೂರು ಹಂತದ ನಾಯಕರು ಮುಂದಿನ ಎರಡು ವರ್ಷ ಅವಿರತವಾಗಿ ಶ್ರಮಿಸಿ ಚುನಾವಣೆಗೆ ಸಿದ್ಧತೆ.
  7. ಪಕ್ಷದ ಸಂಘಟನಾ ಉಸ್ತುವಾರಿಗಳು 2 ವಾರಕ್ಕೊಮ್ಮೆ ಒಂದು ದಿನ ಇಂತಹ ಕ್ಷೇತ್ರದಲ್ಲಿ ಖುದ್ದು ಮೊಕ್ಕಾಂ.
  8. ಇಂಥ ಲೋಕಸಭಾ ಕ್ಷೇತ್ರದಲ್ಲಿ ವಿಶೇಷ ಮಾಧ್ಯಮ ಉಸ್ತುವಾರಿ ನೇಮಕ.
  9. ಸಾರ್ವಜನಿಕರ ಭೇಟಿಗಾಗಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳ ಆಯೋಜನೆ.
  10. ಪಕ್ಷದ ಮುಂಚೂಣಿ ಮೋರ್ಚಾ, ವಿವಿಧ ವಿಭಾಗಗಳ ಮುಖಂಡರಿಂದ ಸಮಾಜದ ವಿವಿಧ ವರ್ಗದ ಭೇಟಿ. ಮಹಿಳೆಯರು, ರೈತರು, ಅಲ್ಪಸಂಖ್ಯಾತರು, ಯುವ ಸಮುದಾಯದ ಜತೆ ಸಂವಾದ.

ಕುಟುಂಬ ರಾಜಕಾರಣ ವಿರುದ್ಧ ವಾಗ್ದಾಳಿ

ತೆಲಂಗಾಣ ರಾಜಧಾನಿ ಹೈದರಾಬಾದ್​ನಲ್ಲಿ ಗುರುವಾರ ರ್ಯಾಲಿಯೊಂದರಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್​ರ ಕುಟುಂಬ ರಾಜಕಾರಣದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ವಂಶ ರಾಜಕಾರಣದ ಪಕ್ಷಗಳಿಂದಾಗಿ ದೇಶದ ಯುವಜನರಿಗೆ ರಾಜಕೀಯದಲ್ಲಿ ಅವಕಾಶ ಸಿಗುತ್ತಿಲ್ಲ. ‘ಪರಿವಾರವಾದಿ’ ಪಕ್ಷಗಳು ತಮ್ಮ ಅಭಿವೃದ್ಧಿ ಬಗ್ಗೆ ಮಾತ್ರವೇ ಚಿಂತಿಸುತ್ತವೆ. ಅವುಗಳು ಬಡವರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಒಂದು ಕುಟುಂಬ ಮಾತ್ರವೇ ಅಧಿಕಾರದಲ್ಲಿದ್ದು ಎಷ್ಟು ಲೂಟಿ ಹೊಡೆಯಬಹುದು ಎನ್ನುವುದಷ್ಟೇ ಅವುಗಳ ಯೋಚನೆಯಾಗಿರುತ್ತದೆ’ ಎಂದು ಮೋದಿ ಹೇಳಿದರು. ಕುಟುಂಬ-ಆಧಾರಿತ ರಾಜಕಾರಣವು ಒಂದು ರಾಜಕೀಯ ಸಮಸ್ಯೆ ಮಾತ್ರವೇ ಅಲ್ಲ. ಅದು ‘ಪ್ರಜಾಪ್ರಭುತ್ವದ ಅತಿ ದೊಡ್ಡ ಶತ್ರುವಾಗಿದೆ’ ಎಂದು ಪ್ರಧಾನಿ ಪ್ರತಿಪಾದಿಸಿದರು.

ಮೀಸಲಾತಿ ರದ್ದತಿ ಭರವಸೆ: ಬಿಜೆಪಿ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರ ಮೀಸಲಾತಿಯನ್ನು ರದ್ದುಮಾಡಲಾಗುತ್ತದೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮೇಲ್ಜಾತಿಗಳ ಬಡವರಿಗೆ ಅನುಕೂಲ ಒದಗಿಸಲಾಗುತ್ತದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ಬಂಡಿ ಸಂಜಯ್ ಕುಮಾರ್ ಬುಧವಾರ ಹೇಳಿದ್ದಾರೆ. ಪ್ರಖರ ಹಿಂದುತ್ವವಾದಿಯಾದ ಕುಮಾರ್, ಧಾರ್ವಿುಕ ಮತಾಂತರ ಮತ್ತು ಲವ್ ಜಿಹಾದ್ ವಿರುದ್ಧ ಕೆಲಸ ಮಾಡುವುದಾಗಿಯೂ ಪಣತೊಟ್ಟರು.

ಬೆಂಗಳೂರು-ಚೆನ್ನೈ ಹೆದ್ದಾರಿಗೆ ಚಾಲನೆ

ಚೆನ್ನೈ: ಹಲವು ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆ ಹಾಗೂ ಆರಂಭಕ್ಕೆ ಗುರುವಾರ ತಮಿಳುನಾಡಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ತಮಿಳು ಭಾಷೆ ಹಾಗೂ ಸಂಸ್ಕೃತಿಯನ್ನು ಶ್ಲಾಘಿಸಿದರು. 31,400 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಮೋದಿ ’ತಮಿಳು ಭಾಷೆ ಶಾಶ್ವತವಾದುದು ಹಾಗೂ ಅದರ ಸಂಸ್ಕೃತಿ ಜಾಗತಿಕವಾದುದು’ ಎಂದು ಹೇಳಿದರು. ಚೆನ್ನೈನಿಂದ ಕೆನಡಾವರೆಗೆ ಮಧುರೆಯಿಂದ ಮಲೇಷ್ಯಾ ವರೆಗೆ ನಮಕ್ಕಲ್​ನಿಂದ ನ್ಯೂಯಾರ್ಕ್ ವರೆಗೆ ಹಾಗೂ ಸೇಲಂನಿಂದ ದಕ್ಷಿಣ ಆಫ್ರಿಕಾವರೆಗೆ ಜಗದಗಲದಲ್ಲಿ ಪೊಂಗಲ್ ಮತ್ತು ಪೂತಂಡು ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಮೋದಿ ಹೇಳಿದರು. ಕಳೆದ ವರ್ಷ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿ.ಎಂ.ಕೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೋದಿಯವರ ಪ್ರಥಮ ತಮಿಳುನಾಡು ಭೇಟಿ ಇದಾಗಿದೆ. ಚೆನ್ನೈ-ಬೆಂಗಳೂರು ಎಕ್ಸ್​ಪ್ರೆಸ್ ಹೈವೇ ಸಹಿತ ಹಲವು ಮಹತ್ವದ ಮೂಲಸೌಕರ್ಯ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು. ನೂರಾರು ಬಿಜೆಪಿ ಕಾರ್ಯಕರ್ತರು ರಸ್ತೆಗಳ ಇಕ್ಕೆಲಗಳಲ್ಲಿ ನಿಂತು ಮೋದಿ ಪರ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು ಹಾಗೂ ಘೋಷಣೆಗಳನ್ನು ಕೂಗಿದರು.

ಡ್ರೋನ್ ಉತ್ಸವಕ್ಕೆ ಇಂದು ಚಾಲನೆ

ನವದೆಹಲಿ: ಭಾರತದ ಅತಿದೊಡ್ಡ ಡ್ರೋನ್ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟನೆ ಮಾಡಲಿದ್ದಾರೆ. ಜೊತೆಗೆ ರೈತ ಡ್ರೋನ್ ಪೈಲಟ್​ಗಳ ಜೊತೆಗೆ ಸಂವಾದ ನಡೆಸಲಿದ್ದು, ಡ್ರೋನ್ ಹಾರಾಟವನ್ನೂ ಅವರು ವೀಕ್ಷಿಸಲಿದ್ದಾರೆ. ಭಾರತ್ ಡ್ರೋನ್ ಮಹೋತ್ಸವ 2022 ಎರಡು ದಿನದ ಕಾರ್ಯಕ್ರಮವಾಗಿದ್ದು, ಮೇ 27 ಮತ್ತು 28 ರಂದು ನಡೆಯಲಿದೆ. ಮೇ 27 ರಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಸರ್ಕಾರಿ ಅಧಿಕಾರಿಗಳು, ವಿದೇಶಿ ಪರಿಣಿತರು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ಖಾಸಗಿ ಕಂಪನಿಗಳು ಮತ್ತು ಡ್ರೋನ್ ಸ್ಟಾರ್ಟಪ್​ಗಳು ಸೇರಿ 1600 ನಿಯೋಗಗಳು ಈ ಹಬ್ಬದಲ್ಲಿ ಭಾಗವಹಿಸಲಿವೆ.

ತಮಿಳಿಗೂ ಅಧಿಕೃತ ಭಾಷೆ ಸ್ಥಾನಕ್ಕೆ ಆಗ್ರಹ: ಪ್ರಧಾನಿ ಮೋದಿಯವರೊಂದಿಗೆ ವೇದಿಕೆಯಲ್ಲಿದ್ದ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಹಿಂದಿಯಂತೆ ತಮಿಳಿಗೂ ಅಧಿಕೃತ ಭಾಷೆಯ ಸ್ಥಾನಮಾನ ಒದಗಿಸುವಂತೆ ಆಗ್ರಹಿಸಿದರು. ಮದ್ರಾಸ್ ಹೈಕೋರ್ಟ್​ನಲ್ಲಿ ತಮಿಳನ್ನು ಅಧಿಕೃತ ಭಾಷೆಯಾಗಿ ಮಾಡಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net