ವಾಹನಗಳ ಸಂಚಾರದಲ್ಲಿ ತಾತ್ಕಾಲಿಕ ಮಾರ್ಗ ಬದಲಾವಣೆ

Published on

ವಿರಾಜಪೇಟೆ: ಪಟ್ಟಣದಲ್ಲಿ ಐತಿಹಾಸಿಕ ಮಹತ್ವದ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆ ಸಂಬಂಧ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸೆ.6 ಅಪರಾಹ್ನ 2 ಗಂಟೆಯಿಂದ 7 ಬೆಳಗ್ಗೆ 10 ಗಂಟೆಯವರೆಗೆ ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ತಾತ್ಕಾಲಿಕ ವಾಹನ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸಲು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಆದೇಶ ಹೊರಡಿಸಿದ್ದಾರೆ.

ಪೆರಂಬಾಡಿ ಕಡೆಯಿಂದ ವಿರಾಜಪೇಟೆ ನಗರಕ್ಕೆ ಉತ್ಸವ ವೀಕ್ಷಣೆಗೆ ಬರುವ ವಾಹನಗಳನ್ನು ವಿರಾಜಪೇಟೆ ತಾಲೂಕು ಹಳೆಯ ತಹಸೀಲ್ದಾರ್ ಕಚೇರಿ ಮುಂಭಾಗದಿಂದ ಆರ್ಜಿ ಕಡೆಗೆ ಹೋಗುವ ರಸ್ತೆಯ ಎಡಭಾಗದ ಬದಿಯಲ್ಲಿ ಮಾತ್ರ ನಿಲ್ಲಿಸಬೇಕು.

ಕೇರಳದ ಮಾಕುಟ್ಟ ಮಾರ್ಗವಾಗಿ ಗೋಣಿಕೂಪ್ಪದ ಕಡೆ ಅಥವಾ ಸಿದ್ದಾಪುರದ ಕಡೆಗೆ ಹೋಗುವ ವಾಹನಗಳಿಗೆ ಪೆರುಂಬಾಡಿ ಚೆಕ್ ಪೋಸ್ಟ್, ಬಾಳುಗೋಡು, ಬಿಟ್ಟಂಗಾಲ ಜಂಕ್ಷನ್, ಕೈಕೇರಿ ಜಂಕ್ಷನ್, ಸಿ.ಎಂ.ಪೂಣಚ್ಚ ಅವರ ಮನೆಯ ರಸ್ತೆ ಜಂಕ್ಷನ್ ಮಾರ್ಗವಾಗಿ ಪಾಲಿಬೆಟ್ಟ-ಸಿದ್ದಾಪುರಕ್ಕೆ ಹೋಗುವುದು.

ಅದೇ ರೀತಿ ಸಿದ್ದಾಪುರ ಕಡೆಯಿಂದ ಕೇರಳದ ಕಡೆ ಹೋಗುವ ವಾಹನಗಳು ಕೈಕೇರಿ, ಬಿಟ್ಟಂಗಾಲ, ಬಾಳುಗೋಡು, ಪೆರುಂಬಾಡಿ ಮಾರ್ಗವಾಗಿ ಕೇರಳದ ಕಡೆ ಹೋಗುವುದು.

ಮಡಿಕೇರಿಯಿಂದ ಕೇರಳದ ಕಡೆ ಹೋಗುವ ವಾಹನಗಳು ಸಿದ್ದಾಪುರ, ಪಾಲಿಬೆಟ್ಟ, ಕೈಕೇರಿ, ಬಿಟ್ಟಂಗಾಲ, ಬಾಳುಗೋಡು, ಪೆರುಂಬಾಡಿ, ಮಾಕುಟ್ಟ ಮಾರ್ಗವಾಗಿ ಹೋಗುವುದು. ಮಡಿಕೇರಿ ಕಡೆಯಿಂದ ಮೈಸೂರು-ಬೆಂಗಳೂರಿಗೆ ಹೋಗುವ ವಾಹನಗಳು ಸಿದ್ದಾಪುರ ಮಾರ್ಗವಾಗಿ ಗೋಣೆಕೊಪ್ಪ-ಮೈಸೂರು, ಬೆಂಗಳೂರಿಗೆ ಹೋಗುವುದು.

ಸಿದ್ದಾಪುರ ಕಡೆಯಿಂದ ಮೆರವಣಿಗೆ ನೋಡಲು ವಿರಾಜಪೇಟೆಗೆ ಬರುವ ವಾಹನಗಳು ಮಗ್ಗುಲ ಜಂಕ್ಷನ್ (ಡೆಂಟಲ್ ಕಾಲೇಜ್ ಜಂಕ್ಷನ್) ಮತ್ತು ರವಿರಾಜ್ ಗ್ಯಾಸ್ ಏಜೆನ್ಸಿ ಕಚೇರಿಯಿಂದ ಐಮಂಗಲ ಕಡೆಗೆ ಹೋಗುವ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಬೇಕು. ಗೋಣಿಕೂಪ್ಪ ಕಡೆಯಿಂದ ಮೆರವಣಿಗೆ ನೋಡಲು ಬರುವಂತಹ ವಾಹನಗಳನ್ನು ಪಂಜರುಪೇಟೆಯ ಸರ್ವೋದಯ ಕಾಲೇಜಿನ ಬಳಿಯಿಂದ ಕಾವೇರಿ ಕಾಲೇಜು ಕಡೆಗೆ ಎಡಬದಿಯಲ್ಲಿ ಮಾತ್ರ ನಿಲುಗಡೆ ಮಾಡಬೇಕು.

ಬೇಟೋಳಿ, ಗುಂಡಿಗೆರೆ, ಚಿಟ್ಟಡೆ ಕಡೆಯಿಂದ ಮಹಿಳಾ ಸಮಾಜ ಮಾರ್ಗವಾಗಿ ಮೆರವಣಿಗೆ ನೋಡಲು ಬರುವಂತಹ ವಾಹನಗಳು ಮಹಿಳಾ ಸಮಾಜ ರಸ್ತೆಯ ಎಡಬದಿಯಲ್ಲಿ ನಿಲುಗಡೆ ಮಾಡಬೇಕು. ಮೈಸೂರು-ಬೆಂಗಳೂರು ಕಡೆಯಿಂದ ಮಡಿಕೇರಿಗೆ ಹೋಗುವ ವಾಹನಗಳು ಗೋಣಿಕೊಪ್ಪ-ಸಿದ್ದಾಪುರ ಮಾರ್ಗವಾಗಿ ಮಡಿಕೇರಿಗೆ ಸಂಚರಿಸಬೇಕು.

ಸೆ. 6ರ ಮಧ್ಯಾಹ್ನ 2 ಗಂಟೆಯಿಂದ ಸೆ.7 ರ ಬೆಳಗ್ಗೆ 10 ಗಂಟೆಯವರೆಗೆ ವಿರಾಜಪೇಟೆ ನಗರದ ತೆಲುಗರ ಬೀದಿ, ದೊಡ್ಡಟ್ಟಿ ವೃತ್ತ, ಅಪ್ಪಯ್ಯ ಸ್ವಾಮಿ ರಸ್ತೆ, ದಖ್ಖನಿ ಮೊಹಲ್ಲಾ ರಸ್ತೆ, ಅರಸು ನಗರ ರಸ್ತೆ, ಎಫ್‌ಎಂಸಿ ರಸ್ತೆ, ಗಡಿಯಾರ ಕಂಬ, ಮಲಬಾರ್ ರಸ್ತೆ, ಗೌರಿಕೆರೆ ರಸ್ತೆ, ಮೀನುಪೇಟೆ ರಸ್ತೆಯ ವಿರಾಜಪೇಟೆ ತಾಲೂಕು ತಹಸೀಲ್ದಾರ್ ಅವರ ಕಚೇರಿವರೆಗೆ ಹಾಗೂ ದೊಡ್ಡಟ್ಟಿ ವೃತ್ತದಿಂದ ಪಂಜರುಪೇಟೆ ಸರ್ವೋದಯ ಕಾಲೇಜಿನವರೆಗೆ ಹಾಗೂ ಮಗ್ಗುಲ ಜಂಕ್ಷನ್‌ನಿಂದ ದಖ್ಖನಿ ಮೊಹಲ್ಲಾ ಜಂಕ್ಷನ್‌ವರೆಗೆ ಯಾವುದೇ ವಾಹನಗಳು ಸಂಚರಿಸುವುದು ಮತ್ತು ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಈ ಮೇಲಿನ ಸಂಚಾರ ನಿಯಮಗಳಿಗೆ ಏನಾದರೂ ವ್ಯತ್ಯಾಸ ಅಥವಾ ಮಾರ್ಪಾಡು ಇದ್ದರೆ ಆಯಾ ಸ್ಥಳದಲ್ಲಿ ಇರುವ ಪೊಲೀಸರು ನೀಡುವ ನಿರ್ದೇಶನದಂತೆ ನಡೆದುಕೊಳ್ಳುವುದು. ಇದರೊಂದಿಗೆ ಸನ್ನಿವೇಶಕ್ಕೆ ತಕ್ಕಂತೆ ಅವಶ್ಯಕತೆ ಇದ್ದರೆ, ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡುವ ನಿಬಂಧನೆಗಳಿಗೊಳಪಟ್ಟಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net