

ರಾಯಚೂರು: ನಿಧಿಯಾಸೆಗೆ ಬಿದ್ದ ಪಾಪಿಗಳು, ನಿತ್ಯ ಪೂಜೆ ಸಲ್ಲುತ್ತಿದ್ದ ಶ್ರೀಕೃಷ್ಣನ ಪುಟ್ಟ ದೇಗುಲವನ್ನು ಧ್ವಂಸ ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ದುಷ್ಕರ್ಮಿಗಳು ದೇವರ ವಿಗ್ರಹವನ್ನು ಕಿತ್ತೆಸೆದು, ಭೂಮಿ ತೋಡಿ ದೇಗುಲ ಕುರೂಪಗೊಳಿಸಿದ್ದಾರೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಯಾಟಗಲ್ ಗ್ರಾಮದ ಸರ್ಕಾರಿ ಶಾಲೆ ಪಕ್ಕದಲ್ಲಿರುವ ಶ್ರೀ ಕೃಷ್ಣನ ದೇಗುಲ ಈ ರೀತಿ ಭಗ್ನಗೊಂಡಿದ್ದು, ಭಕ್ತರಿಗೆ ನೋವು ತಂದಿದೆ. ದೇಗುಲದ ವಿಗ್ರಹದ ಕೆಳಗೆ ನಿಧಿ ಇರುವುದಾಗಿ ಪ್ರತೀತಿ ಇರುವ ಕಾರಣದಿಂದ ಇದರ ಮೇಲೆ ದುಷ್ಕರ್ಮಿಗಳು ಕೆಟ್ಟ ಕಣ್ಣು ಹಾಕಿದ್ದಾರೆ. ನಿನ್ನೆ ತಡ ರಾತ್ರಿ ಎದೆಯೆತ್ತರ ಗುಂಡಿ ತೋಡಿ ಪೂಜಾ ಸ್ಥಳವನ್ನು ಭಗ್ನಗೊಳಿಸಿದ್ದಾರೆ.
ಬೆಳಿಗ್ಗೆ ಪೂಜೆಗೆಂದು ಬಂದ ಗ್ರಾಮಸ್ಥರು ದೇವರ ವಿಗ್ರಹ ಮತ್ತು ಪಾದಗಳು ನೆಲದ ಮೇಲೆ ಬಿದ್ದಿರುವುದನ್ನು ಕಂಡಿದ್ದಾರೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.