ಮುತ್ತತ್ತಿರಾಯನ ದರ್ಶನ ಪಡೆದ ಅಶ್ವಿನಿ ಪುನೀತ್: ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ

11hgr2
Published on

ಹಲಗೂರು: ಮುತ್ತತ್ತಿ ಗ್ರಾಮದಲ್ಲಿ ನೆಲೆಸಿರುವ ಆರಾಧ್ಯ ದೈವ, ಡಾ.ರಾಜ್‌ಕುಮಾರ್ ಅವರ ಮನೆ ದೇವರಾದ ಮುತ್ತತ್ತಿರಾಯನ ದೇವಸ್ಥಾನಕ್ಕೆ ಗುರುವಾರ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಭೇಟಿ ನೀಡಿ ದೇವರ ದರ್ಶನ ಪಡೆದರು.

‘ಗಂಧದಗುಡಿ’ ಚಿತ್ರದ ಬಿಡುಗಡೆಯ ನಂತರ ನಾಡಿನ ಹಲವು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುವ ಅಶ್ವಿನಿ ಅವರು, ಅಂತೆಯೆ ಇಲ್ಲಿನ ಮುತ್ತತ್ತಿ ದೇಗುಲಕ್ಕೆ ಆಗಮಿಸಿದ ಪ್ರಾರ್ಥನೆ ಸಲ್ಲಿಸಿದರು.

ದೇವಸ್ಥಾನದ ಅರ್ಚಕ ರವಿ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಸಂಕಲ್ಪ ನೆರವೇರಿಸಿ ಅಶ್ವಿನಿ ಹಾಗೂ ಅವರ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ ಎಂದು ಪೂಜಿಸಿ ಪ್ರಸಾದ ನೀಡಿದರು.

ಪ್ರಕೃತಿ, ಸಾಹಸ ಶಿಬಿರಕ್ಕೆ ಭೇಟಿ:

ಮುತ್ತತ್ತಿಯಿಂದ ವಾಪಸ್ ಹಲಗೂರಿಗೆ ಬರುವಾಗ ದಾರಿ ಮಧ್ಯದಲ್ಲಿ ಸಿಗುವ ಭೀಮೇಶ್ವರಿಯಲ್ಲಿರುವ ಪ್ರಕೃತಿ ಮತ್ತು ಸಾಹಸ ಶಿಬಿರಕ್ಕೆ ಅಶ್ವಿನಿ ಅವರು ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದರು. ವ್ಯವಸ್ಥಾಪಕ ಪೂವಯ್ಯ ಅವರ ಜತೆ ಮಾತನಾಡಿ, ಈ ಸ್ಥಳ ತುಂಬ ಸೊಗಸಾಗಿದೆ. ಮತ್ತೊಮ್ಮೆ ನನ್ನ ಮಕ್ಕಳು ಮತ್ತು ಕುಟುಂಬದ ಜತೆ ಭೇಟಿ ನೀಡುವುದಾಗಿ ತಿಳಿಸಿದರು.

ಇದಕ್ಕೂ ಮೊದಲು ಹಲಗೂರಿನಲ್ಲಿ ಬಾಬು ಅವರ ಹೋಟೆಲ್ಗೆ ತೆರಳಿ ಚಿಬ್ಲು ಇಡ್ಲಿ ಸವಿದರು. ಹೋಟೆಲ್ ಮಾಲೀಕ ಭಕ್ತವಸ್ತಲ್(ಬಾಬು) ಮಾತನಾಡಿ, ನಮ್ಮ ಹೋಟೆಲ್‌ಗೆ ಪುನೀತ್ ಅವರು ಬರಬೇಕಾಗಿತ್ತು. ಶಿವರಾಜ್ಕುಮಾರ್ ಅವರು ಹಲವಾರು ಬಾರಿ ಬಂದಿದ್ದಾರೆ. ನಾವು ಪುನೀತ್ ಅವರ ನಿರೀಕ್ಷೆಯಲ್ಲಿದ್ದವು. ಆದರೆ ಅವರ ಅಕಾಲಿಕ ಸಾವಿನಿಂದ ತುಂಬ ನಿರಾಸೆಯಾಗಿದೆ. ಅವರ ಪತ್ನಿ ಬಂದಿರುವುದು ಸಂತಸ ತಂದಿದೆ ಎಂದರು.

ಅಶ್ವಿನಿ ಅವರ ಜತೆ ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವರಾಜ್, ರಾಜಕುಮಾರ ಚಿತ್ರದ ನಿರ್ದೇಶಕ ಸಂತೋಷ್, ಆನಂದ್ ರಾವ್, ಸೋಮಶೇಖರ್, ಮಹೇಶ್, ಕಿಟ್ಟಿ, ರವೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net