ಸುಖ-ಶಾಂತಿ ಸಿಗುವ ಸ್ಥಳ ದೇವಸ್ಥಾನ

IMG-20250424-WA0211
ಆಲೂರು ತಾಲೂಕು ಕವಳಿಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ದೇವಸ್ಥಾನ ಸಮಿತಿ ವತಿಯಿಂದ ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ, ಪತ್ನಿ ಚಂಚಲಾ ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ರೇಣುಕಾ ಧರ್ಮ, ಹಿರಿಯಣ್ಣಗೌಡ, ಸುಧಾ ನಾಗೇಂದ್ರ ಉಪಸ್ಥಿತರಿದ್ದರು.
Published on

ಆಲೂರು: ಸುಖ-ಶಾಂತಿ ಸಿಗುವ ಸ್ಥಳವೇ ದೇವಸ್ಥಾನ. ಆ ಭಾವವೇ ದೇವರು. ಶುದ್ಧ ಮನಸ್ಸು, ಅತ್ಯುತ್ತಮ ಕಾಯಕ ಸ್ವರ್ಗ ಸೃಷ್ಟಿಸುವ ಎರಡು ಮಾರ್ಗಗಳು. ಈ ದೇವಸ್ಥಾನ ಸ್ವರ್ಗಾನುಭವ ಕಲ್ಪಿಸುವ ಶಕ್ತಿ ಸ್ಥಾನ ಎಂದು ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳಿದರು.

ತಾಲೂಕಿನ ದೊಡ್ಡಕಣಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಳಿಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಮೌಲ್ಯಯುತ ಬದುಕು ನಮ್ಮದಾಗಿಸಿಕೊಂಡು, ಸಮಾಜದೆಡೆಯಲ್ಲಿ ಅರ್ಥಪೂರ್ಣ ಹೆಜ್ಜೆ ನಮ್ಮದಾದಲ್ಲಿ ಸುಂದರ ಜೀವನ ನಮ್ಮದಾಗಲಿದೆ. ಈ ಕಾರ್ಯಸಿದ್ಧಿ ಆಂಜನೇಯ ಭಕ್ತರ ಅತಿ ದೊಡ್ಡ ಶಕ್ತಿ ದೇವ ಎನ್ನುವದಕ್ಕೆ ಇಲ್ಲಿ ಕೂಡಿ ಸಂಭ್ರಮಿಸುತ್ತಿರುವ ಅಸಂಖ್ಯಾತ ಭಕ್ತರೇ ಸಾಕ್ಷಿ. ಇಲ್ಲಿ ಜರುಗುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿಯ ಭಕ್ತರ ಉದ್ಧರಿಸಿ ನಾಡು ದೇಶ ಮತ್ತಷ್ಟು ಸಂಪನ್ನಗೊಳಿಸಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ಬಿಜೆಪಿ ಮಹಿಳಾ ಮುಖಂಡರಾದ ಪ್ರತಿಭಾ ಮಂಜುನಾಥ್ ಮಾತನಾಡಿ, ಎಲ್ಲಿ ನಿಸ್ವಾರ್ಥತೆ ಇರುತ್ತದೋ ಅಲ್ಲಿ ಶಕ್ತಿ ಇರುತ್ತದೆ. ಆ ಶಕ್ತಿಯೇ ದೇವರು. ಕವಳಿಕೆರೆ ಗ್ರಾಮದಲ್ಲಿ ಆಂಜನೇಯಸ್ವಾಮಿ ಲೋಕಾರ್ಪಣೆಗೊಂಡಿರುವುದು ಇಲ್ಲಿಯ ಜನರ ಪರಿಶುದ್ಧ ಭಾವನೆಗಳ ಸಂಕೇತವಾಗಿದೆ. ಈ ದೇವಸ್ಥಾನ ನಿರ್ಮಿಸಲು ಕಾರಣರಾದವರನ್ನು ಸ್ಮರಣೆ ಮಾಡಬೇಕು ಎಂದರು.

ಶಾಸಕ ಸಿಮೆಂಟ್ ಮಂಜು ಪತ್ನಿ ಪ್ರತಿಭಾ ಮಂಜುನಾಥ್, ಕಾಂಗ್ರೆಸ್ ಮುಖಂಡ ಮುರಳಿಮೋಹನ್ ಸೇರಿದಂತೆ ತಾಲೂಕಿನ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಣುಕಾ ಧರ್ಮ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಿರಿಯಣ್ಣಗೌಡ, ಸದಸ್ಯೆ ಸುಧಾ ನಾಗೇಂದ್ರ, ತೀರ್ಥೇಶ್, ಹಿರಿಯ ಮುಖಂಡ ಪಟೇಲ್ ಹೀರೇಗೌಡ, ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net