

ತಿರುವನಂತಪುರ: ಧಾರ್ಮಿಕ ಆಚರಣೆಗಳಿಗೆ ಆನೆಗಳನ್ನು ಬಾಡಿಗೆಗೆ ಪಡೆಯುವುದು ದುಬಾರಿಯಾಗಿರುವುದು ಮತ್ತು ಅನೆಗಳು ಮದವೇರಿ ಜನರನ್ನು ಸಾಯಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳದ ತ್ರಿಶೂರ್ ಜಿಲ್ಲೆಯ ಇಲಂಜಾಲಕುಡದ ಇರಿಜಾಡಪಿಳ್ಳಿ - ಶ್ರೀಕೃಷ್ಣ ದೇವಾಲಯವು. ಇ-ಆನೆ (ಎಲೆಕ್ಟ್ರಾನಿಕ್ ಆನೆ) ಹೊಂದಲು ನಿರ್ಧರಿಸಿದೆ.
ಸ್ಥಳೀಯ ಕುಶಲಕಾರ್ಮಿಕರ ತಂಡ ನಿರ್ಮಿಸಿರುವ ಎಲೆಕ್ಟ್ರಾನಿಕ್ ಆನೆ 11 ಅಡಿ ಎತ್ತರವಿದ್ದು, ಲೋಹ, ರಬ್ಬರ್ ಶೀಟ್ ಮತ್ತು ಮೋಟಾರ್ ಬಳಸಿ ತಯಾರಿಸಲಾಗಿದೆ. ಆನೆಯ ತಲೆ, ಕಿವಿ ಮತ್ತು ಬಾಲ ಚಲಿಸಲು ಮೋಟಾರ್ ಅಳವಡಿಸಲಾಗಿದೆ. ಆನೆ ಸೊಂಡಿಲಿನಿಂದ ನೀರು ಸಿಂಪಡಿಸುವಂತೆ ಮಾಡಲಾಗಿದೆ. ಕಾಲುಗಳಿಗೆ ಚಕ್ರಗಳನ್ನು ಅಳವಡಿಸಿ ಚಲಿಸುವಂತೆ ಮಾಡಲಾಗಿದ್ದು, ನಾಲ್ವರು ಕುಳಿತುಕೊಳ್ಳಬಹುದಾಗಿದೆ.
ಇ-ಆನೆಗೆ ಇರಿಂಜಾಡಪಿಳ್ಳಿ ರಾಮನ್' ಎಂದು ಹೆಸರಿಡಲಾಗಿದೆ. ಇದು ಕೇರಳದ ಜನಪ್ರಿಯ ಸಾಕಾನೆ ತೆಚಿಕೊಟ್ಟುಕಾವು ರಾಮಚಂದ್ರನ್ ಅವರನ್ನು ಹೋಲುತ್ತಿದೆ. ಇರಿಂಜಾಡಪಿಳ್ಳಿ ಶ್ರೀಕೃಷ್ಣ ದೇವಾಲಯವು ರಾಜ್‌ಕುಮಾರ್ ನಂಬೂದಿರಿ' ಎಂಬುವವರ ಕುಟುಂಬಕ್ಕೆ ಸೇರಿದ್ದು, ರಾಜ್‌ಕುಮಾರ್ ಅವರು ಇ-ಅನೆಯ ಮಾಲೀಕರಾಗಿದ್ದಾರೆ. ಇ-ಆನೆ ಅಭಿವೃದ್ಧಿಗೆ 5 ಲಕ್ಷ ರೂ. ವೆಚ್ಚವಾಗಿದ್ದು, ಫೆ.26ರಂದು ನಡೆಯುವ ಕಾರ್ಯಕ್ರಮದಲ್ಲಿ ದೇವಾಲಯಕ್ಕೆ ಪಡೆಯಲಾಗುವುದು ಎಂದು ಅವರು ಹೇಳಿದ್ದಾರೆ.