

ಢಾಕಾ: ಹಿಂದೂ ದೇವಾಲಯದಲ್ಲಿ ದೇವತೆಯ ವಿಗ್ರಹವನ್ನು ಧ್ವಂಸಗೊಳಿಸಿರುವ ಘಟನೆ ಬಾಂಗ್ಲಾದೇಶದ ಬ್ರಾಹ್ಮಣಬಾರಿಯಾ ಜಿಲ್ಲೆಯ ನಿಯಾಮತ್ಪುರ ಗ್ರಾಮದಲ್ಲಿ ನಡೆದಿದೆ.
ಇದನ್ನು ಓದಿ: ಮೊದಲ ಹೆಂಡತಿಯ ರೀಲ್ಸ್ ನೋಡುತ್ತಿದ್ದ ಪತಿ: ರಿಯಲ್ ಆಗಿ ಬ್ಲೇಡ್ನಿಂದ ದಾಳಿ ಮಾಡಿದ ಎರಡನೇ ಪತ್ನಿ
ಗ್ರಾಮದ ದುರ್ಗಾ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಸ್ಥಳೀಯ ಹಿಂದೂ ಸಮುದಾಯದಲ್ಲಿ ಕೋಲಾಹಲ ಉಂಟು ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಖಲೀಲ್ ಮಿಯಾ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ವಿಧ್ವಂಸಕ ಕೃತ್ಯದ ಸುದ್ದಿ ಹರಡುತ್ತಿದ್ದಂತೆ, ಸ್ಥಳೀಯರು ಆರೋಪಿಗಳನ್ನು ಬೆನ್ನಟ್ಟಿ ಹಿಡಿಯಲು ಪೊಲೀಸರಿಗೆ ಸಹಾಯ ಮಾಡಿದ್ದಾರೆ.
ಆರೋಪಿಯ ಬಂಧನವನ್ನು ಪೊಲೀಸರು ದೃಢಪಡಿಸಿದ್ದು, ಈ ಕೃತ್ಯದ ಹಿಂದಿನ ಉದ್ದೇಶ ಹಾಗೂ ಈತ ಯಾಕೆ ಇಂತಹ ಹೀನಾಯ ಕೃತ್ಯಕ್ಕೆ ಕೈ ಹಾಕಿದ್ದಾನೆ ಎಂಬುದು ಇನ್ನೂ ಪತ್ತೆಯಾಗಿಲ್ಲ.ನಿಯಾಮತ್ಪುರ ಗ್ರಾಮದಲ್ಲಿರುವ ತನ್ನ ಸಹೋದರಿಯ ನಿವಾಸಕ್ಕೆ ಭೇಟಿ ನೀಡಿದ ಖಲೀಲ್, ಯಾವುದೋ ವಿಚಾರವಾಗಿ ಸ್ಥಳೀಯ ನಿವಾಸಿಗಳೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದರು.
ಈ ವೇಳೆ ಆರೋಪಿಯು, ದೇವಸ್ಥಾನದೊಳಗಿದ್ದ ಐದರಿಂದ ಆರು ಅಮೂಲ್ಯ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾನೆ. ಇದು ಇಡೀ ಸ್ಥಳೀಯ ಹಿಂದೂ ಸಮುದಾಯದ ಭಾವನೆಗಳ ಮೇಲೆ ಪರಿಣಾಮ ಬೀರಿದ್ದು, ಹಠಾತ್ ವಿಧ್ವಂಸಕ ಕೃತ್ಯದ ಬಗ್ಗೆ ತೀವ್ರ ದುಃಖ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.(ಏಜೆನ್ಸೀಸ್)