ಹಸಿರೀಕರಣದಿಂದ ತಾಪಮಾನ ನಿಯಂತ್ರಣ

media
ಶಿವಮೊಗ್ಗದ ನ್ಯಾಯಾಂಗ ಬಡಾವಣೆಯಲ್ಲಿ ಎಚ್.ಎಸ್.ಸುಂದರೇಶ್ ಹಸಿರೀಕರಣಕ್ಕೆ ಚಾಲನೆ ನೀಡಿದರು. ಕೆ.ವಿ.ಶಿವಕುಮಾರ್, ವಿಶ್ವನಾಥ್ ಮುದ್ದಜ್ಜಿ, ಗೋಪಾಲ ಯಡಗೆರೆ, ಶ್ರೀಕಾಂತ್ ಕಾಮತ್, ನರಸಿಂಹಮೂರ್ತಿ, ವಿ.ಟಿ.ಅರುಣ್,ಕೆ.ಆರ್.ಸೋಮನಾಥ್ ಮುಂತಾದವರಿದ್ದರು.
Published on

ಶಿವಮೊಗ್ಗ: ವರ್ಷದಿಂದ ವರ್ಷಕ್ಕೆ ಮಲೆನಾಡು ಭಾಗದಲ್ಲಿ ತಾಪಮಾನ ಏರಿಕೆಯಾಗುತ್ತಿದೆ. ಅಪ್ಪಟ ಮಲೆನಾಡಾಗಿರುವ ನಮ್ಮ ಜಿಲ್ಲೆಯಲ್ಲೂ ಉಷ್ಣಾಂಶ ಹೆಚ್ಚುತ್ತಿರುವುದು ಕಳವಳಕಾರಿ. ಇದಕ್ಕೆ ಹಸಿರೀಕರಣವೊಂದೇ ಪರಿಹಾರ ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ, ಪ್ರೆಸ್‌ಟ್ರಸ್ಟ್, ಸೂಡಾ ಆಶ್ರಯದಲ್ಲಿ ಸೋಮಿನಕೊಪ್ಪ ನ್ಯಾಯಾಂಗ ಬಡಾವಣೆಯಲ್ಲಿ ಮಂಗಳವಾರ ಹಸಿರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಕೃತಿಯಲ್ಲಿ ಮಾನವಹಸ್ತಕ್ಷೇಪ ಹೆಚ್ಚುತ್ತಿದೆ. ಹೀಗಾಗಿ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ ಎಂದರು.
ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ವೇಳೆ ಕೆಲವೊಮ್ಮೆ ಅನಿವಾರ್ಯವಾಗಿ ಮರಗಳನ್ನು ಕಡಿಯಬೇಕಾಗುತ್ತದೆ. ಇದಕ್ಕೆ ಪರಿಹಾರವಾಗಿ ಬೇರೆಡೆ ಗಿಡ ನೆಡುವ ಅದನ್ನು ಸಂರಕ್ಷಿಸಿ ಮರವಾಗಿಸುವ ಕೆಲಸವೂ ಅವಶ್ಯ. ಭೂಮಿ ಹಾಗೂ ಪ್ರಾಣಿ ಸಂಕುಲದ ಉಳಿವಿಗೆ ಅರಣ್ಯ ಅತ್ಯವಶ್ಯ ಎಂದು ತಿಳಿಸಿದರು.
ಸೂಡಾದಿಂದ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಪ್ರಯತ್ನ ಮುಂದುವರಿದಿದೆ. ಸೂಡಾದಿಂದ 14ವರ್ಷಗಳ ಹಿಂದೆಯೇ 104 ಎಕರೆ ಜಮೀನನ್ನು ಗೋಪಶೆಟ್ಟಿಕೊಪ್ಪದಲ್ಲಿ ಗುರುತಿಸಲಾಗಿತ್ತು. ಅಲ್ಲಿನ ಕೆಲವು ರೈತರು ಜಮೀನು ನೀಡಲು ಒಪ್ಪಿಕೊಂಡಿದ್ದಾರೆ. ಇನ್ನು ಕೆಲವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಭೂಮಿ ನೀಡುವ ರೈತರಿಗೆ ಮಾರುಕಟ್ಟೆಯ ದರದಲ್ಲಿ ಪರಿಹಾರ ನೀಡಲಾಗುತ್ತಿಲ್ಲ. ಹೀಗಾಗಿ ನಿವೇಶನ ನಿರ್ಮಿಸುವುದು ಸಾಧ್ಯವಾಗುತ್ತಿಲ್ಲ. ಊರಗಡೂರಿನಲ್ಲಿ ನಾಲ್ಕು ಎಕರೆ ಜಾಗದಲ್ಲಿ ಶೀಘ್ರವೇ ನಿವೇಶನ ಹಂಚಲು ಯೋಚಿಸಲಾಗಿದೆ. ಸೋಮಿನಕೊಪ್ಪದಲ್ಲಿ ಎರಡು ಎಕರೆಯಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಲು ಚಿಂತನೆ ನಡೆದಿದೆ ಎಂದು ಹೇಳಿದರು.
ಸೂಡಾ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ನ್ಯಾಯಾಂಗ ಇಲಾಖೆ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಕಾರ್ಯದರ್ಶಿ ಪಾರ್ವತಮ್ಮ, ಪ್ರೆಸ್‌ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ, ಪತ್ರಕರ್ತರಾದ ಗೋಪಾಲ ಯಡಗೆರೆ, ಶ್ರೀಕಾಂತ್ ಕಾಮತ್, ವಾರ್ತಾಧಿಕಾರಿ ಮಾರುತಿ, ಸಂಘದ ಉಪಾಧ್ಯಕ್ಷರಾದ ವೈದ್ಯನಾಥ್, ಹಾಲಸ್ವಾಮಿ, ನಗರ ಕಾರ್ಯದರ್ಶಿ ಕೆ.ಆರ್.ಸೋಮನಾಥ್ ಮುಂತಾದವರಿದ್ದರು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net