ಪೆದ್ದಿ ವೃತ್ತಿ ಜೀವನದ ಸ್ಫೂರ್ತಿಯುತ ಸಿನಿಮಾ ಎಂದ ನಟ ರಾಮಚರಣ್​

ಪೆದ್ದಿ ಪೋಸ್ಟರ್​
ಪೆದ್ದಿ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ಪೆದ್ದಿ ಚಿತ್ರದಲ್ಲಿ ಮೂರು ಅವತಾರದಲ್ಲಿ ಕಾಣಿಸಿಕೊಂಡ ನಟ
  • ಹಿಂದಿಯ ದಂಗಲ್​, ಸುಲ್ತಾನ್ ಸ್ಪೂರ್ತಿ ಎಂದ ಗ್ಲೋಬಲ್ ಸ್ಟಾರ್
  • ಇದೇ ಜೂನ್​ 4ಕ್ಕೆ ಪೆದ್ದಿ ವಿಶ್ವಾದ್ಯಂತ ಬಿಡುಗಡೆ
ತೆಲುಗು ನಟ ರಾಮಚರಣ್ ಅಭಿನಯದ ‘ಪೆದ್ದಿ’ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಇದೇ ಜೂ. 4ಕ್ಕೆ ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಲಿದೆ. ‘ಉಪ್ಪೇನಾ’ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬುಚಿ ಬಾಬು ಸನಾ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದು, ರಾಮಚರಣ್‌ಗೆ ಬಾಲಿವುಡ್ ತಾರೆ ಜಾಹ್ನವಿ ಕಪೂರ್ ಜೋಡಿಯಾಗಿದ್ದಾರೆ. ರಿಲೀಸ್‌ಗೆ ಮುನ್ನವೇ ಚಿತ್ರತಂಡ ಮುಂಬೈನಲ್ಲಿ ಟ್ರೇಲರ್ ಬಿಡುಗಡೆ ಮಾಡಿ, ಸದ್ದು ಮಾಡಿದೆ. 3.07 ನಿಮಿಷದ ಟ್ರೇಲರ್‌ನಲ್ಲಿ ರಾಮ್ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು, ಕ್ರಿಕೆಟಿಗ, ಕುಸ್ತಿಪಟು ಹಾಗೂ ಅಥ್ಲೀಟ್ ಆಗಿ ಮಿಂಚಿದ್ದಾರೆ. ರಾಮಚರಣ್ ದೇಹವನ್ನು ಹುರಿಗೊಳಿಸಿ ಕುಸ್ತಿ ಅಖಾಡಕ್ಕಿಳಿದು ‘ಆಟನೇ ನನ್ನ ಪೊಗರು’ ಎಂದು ತೊಡೆ ತಟ್ಟಿ ಅಬ್ಬರಿಸಿದ್ದಾರೆ. ಗ್ರಾಮೀಣ ಪ್ರತಿಭೆ ‘ಪೆದ್ದಿ’ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸುವ ಅಂಶಗಳನ್ನು ಟ್ರೇಲರ್‌ನಲ್ಲಿ ಕಾಣಬಹುದು. ಇನ್ನು ಹಳ್ಳಿ ಹುಡುಗಿ ಪಾತ್ರದಲ್ಲಿದ್ದರೂ ನಟಿ ಜಾಹ್ನವಿ ಕಪೂರ್ ಗ್ಲಾಮರ್ ಗೊಂಬೆಯಂತೆ ಕಂಗೊಳಿಸಿದ್ದಾರೆ. ರಾಮಚರಣ್ ತೇಜ, "ನನ್ನ ವೃತ್ತಿ ಜೀವನದ ಸ್ಫೂರ್ತಿಯುತ ಸಿನಿಮಾ ಇದಾಗಲಿದೆ. ಹಿಂದಿಯ ‘ದಂಗಲ್’, ‘ಸುಲ್ತಾನ್’ ಚಿತ್ರಗಳು ಈ ಪಾತ್ರ ಮಾಡಲು ಮತ್ತಷ್ಟು ಪ್ರೇರೇಪಿಸಿದ್ದವು. ಎರಡು ವರ್ಷಗಳ ಈ ಜರ್ನಿಯಲ್ಲಿ ಸಾಕಷ್ಟು ಬಾರಿ ಗಾಯಗೊಂಡಿದ್ದೇನೆ. ಬೆಳಗ್ಗೆ ಎದ್ದರೆ ಅವೆಲ್ಲವನ್ನೂ ಮರೆತು ಸೆಟ್‌ಗೆ ಹೋಗಬೇಕು ಅನಿಸುತ್ತಿತ್ತು. ಬೆಳಗ್ಗೆ 5ಕ್ಕೆ ಎದ್ದು, ವರ್ಕೌಟ್ ಮುಗಿಸಿ ಶೂಟಿಂಗ್ ಸ್ಥಳದಲ್ಲಿ ಇರುತ್ತಿದ್ದೆ. ‘ಮಗಧೀರ’, ‘ರಂಗಸ್ಥಲಂ’, ‘ಆರ್‌ಆರ್‌ಆರ್’ಗಿಂತ ಈ ಚಿತ್ರದ ಚಿತ್ರೀಕರಣ ಬೇಗ ಮುಗಿದು, ರಿಲೀಸ್ ಆಗುತ್ತಿದೆ' ಎಂದು ಹೇಳಿದ್ದಾರೆ. ಶಿವರಾಜಕುಮಾರ್, ದಿವ್ಯೇಂದು ಶರ್ಮಾ, ಜಗಪತಿ ಬಾಬು, ಬೊಮನ್ ಇರಾನಿ ಪಾತ್ರಗಳ ಪರಿಚಯ ಕಾಣಬಹುದು. ಟ್ರೇಲರ್ ದೀರ್ಘ ಅನಿಸುವುದರ ಜತೆಗೆ ದೃಶ್ಯಗಳ ಕ್ರಮಬದ್ಧ ಜೋಡಣೆಯಾಗಿಲ್ಲ ಎಂಬ ಮಾತು ಕೇಳಿಬಂದಿದೆ. ‘ಪೈಲ್ವಾನ್’ ಗ್ಲಿಂಪ್ಸ್‌ನಲ್ಲಿದ್ದ ಹಿನ್ನೆಲೆ ಸಂಗೀತದ ಜೋರು ಟ್ರೇಲರ್‌ನಲ್ಲಿ ಅಷ್ಟೊಂದು ಕಾಣುತ್ತಿಲ್ಲ. ‘ಪೆದ್ದಿ’ ಗೆ ರತ್ನವೇಲು ಛಾಯಾಗ್ರಹಣ, ಎ.ಆರ್.ರೆಹಮಾನ್ ಸಂಗೀತ ಚಿತ್ರಕ್ಕಿದೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net