

Sanjay Raut : ಮಾಜಿ ಉಪರಾಷ್ಟ್ರಪತಿ ಜಗದೀಪ್ ದನಕರ್ ಎಲ್ಲಿದ್ದಾರೆ?, ನಾವು ಅವರನ್ನು ಸಂಪರ್ಕಿಸುವ ಪ್ರಯತ್ನಗಳು ವಿಫಲವಾಗಿವೆ. ಅವರು ಎಲ್ಲಿದ್ದಾರೆ? ತಿಳಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಶಿವಸೇನಾ(ಯುಬಿಟಿ) ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಆಗಸ್ಟ್ 10ರಂದು ಪತ್ರ ಬರೆದಿದ್ದಾರೆ.
ನಮ್ಮ ಮಾಜಿ ಉಪಾಧ್ಯಕ್ಷರು ಎಲ್ಲಿದ್ದಾರೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಅವರ ಪ್ರಸ್ತುತ ಇರುವ ಸ್ಥಳ ಯಾವುದು? ಅವರ ಆರೋಗ್ಯ ಹೇಗಿದೆ? ಈ ವಿಷಯಗಳ ಬಗ್ಗೆ ಸ್ಪಷ್ಟತೆ ಇಲ್ಲ. ಅವರು ಸುರಕ್ಷಿತವಾಗಿಲ್ಲ ಎಂದು ದೆಹಲಿಯಲ್ಲಿ ವದಂತಿಗಳು ಹರಡುತ್ತಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಾಜಿ ಉಪರಾಷ್ಟ್ರಪತಿ ಅಥವಾ ಅವರ ಸಿಬ್ಬಂದಿಯೊಂದಿಗೆ ಯಾವುದೇ ಸಂವಹನ ನಡೆದಿಲ್ಲ, ಇದು ತೀವ್ರ ಕಳವಳಕಾರಿ ವಿಷಯ. ರಾಜ್ಯಸಭೆಯ ಕೆಲವು ಸದಸ್ಯರು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು, ಆದರೆ ವಿಫಲರಾದರು, ಅವರಿಗೆ ಏನಾಗಿದೆ ಎಂಬ ಸತ್ಯವನ್ನು ತಿಳಿದುಕೊಳ್ಳಲು ದೇಶಕ್ಕೆ ಬೇಕಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸಭೆಯ ನಮ್ಮ ಕೆಲ ಸಹೋದ್ಯೋಗಿಗಳು ಈ ಬಗ್ಗೆ ಚಿಂತಿತರಾಗಿದ್ದು, ಸುಪ್ರೀಂ ಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿ ಸಲ್ಲಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಸುಪ್ರೀಂ ಬಾಗಿಲು ತಟ್ಟುವ ಮೊದಲು ನಿಮ್ಮಿಂದ ಈ ಮಾಹಿತಿಯನ್ನು ಪಡೆಯುವುದು ವಿವೇಕಯುತವಾಗಿದೆ ಎಂದು ನಾನು ಭಾವಿಸಿದೆ. ನೀವು ನನ್ನ ಭಾವನೆಗಳನ್ನು ಅರ್ಥಮಾಡಿಕೊಂಡು ಧನಕರ್ ಬಗ್ಗೆ ನಿಜವಾದ ಮಾಹಿತಿಯನ್ನು ಒದಗಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ರಾವತ್ ಹೇಳಿದ್ದಾರೆ.
ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನವಾದ ಜುಲೈ 21 ರಂದು ಜಗದೀಪ್ ಧನಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾತ್ರಿ 9.30ರ ಸುಮಾರಿಗೆ ಹಠಾತ್ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಆರೋಗ್ಯದ ನೆಪ ಹೇಳಿ ರಾಜೀನಾಮೆ ನೀಡಿದ್ದು ಅಚ್ಚರಿಯನ್ನುಂಟು ಮಾಡಿತ್ತು.
ಈ ಹಿಂದೆ ಕಪಿಲ್ ಸಿಬಲ್ ಸಹ ಪ್ರಶ್ನಿಸಿದ್ದರು
ರಾಜ್ಯಸಭಾ ಸದಸ್ಯ ಮತ್ತು ಸುಪ್ರೀಂಕೋರ್ಟ್ ಹಿರಿಯ ವಕೀಲ ಕಪಿಲ್ ಸಿಬಲ್ ಸುದ್ದಿಗೋಷ್ಠಿ ನಡೆಸಿ, "ಜುಲೈ 22 ರಂದು ನಮ್ಮ ಉಪಾಧ್ಯಕ್ಷ ಜಗದೀಪ್ ಧನಕರ್ ಅವರು ರಾಜೀನಾಮೆ ನೀಡಿದರು. ಇಂದು ಆಗಸ್ಟ್ 9, ಆ ದಿನದಿಂದ ಇಲ್ಲಿಯವರೆಗೆ ಅವರು ಎಲ್ಲಿದ್ದಾರೆಂದು ನಮಗೆ ತಿಳಿದಿಲ್ಲ. ಅವರು ತಮ್ಮ ಅಧಿಕೃತ ನಿವಾಸದಲ್ಲಿಲ್ಲ. ಮೊದಲ ದಿನ, ನಾನು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಅವರ ಕಾರ್ಯದರ್ಶಿ ಫೋನ್ ತೆಗೆದುಕೊಂಡು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಿದರು. ಲಾಪಾಟಾ ಲೇಡೀಸ್ ಚಿತ್ರದ ಬಗ್ಗೆ ಕೇಳಿದ್ದೇನೆ, ಆದರೆ ಲಾಪಾಟಾ ಉಪಾಧ್ಯಕ್ಷ ಬಗ್ಗೆ ಎಂದಿಗೂ ಕೇಳಿದ್ದಿಲ್ಲ" ಎಂದು ಹೇಳಿದರು.
"ಧನಕರ್ ಉಪರಾಷ್ಟ್ರಪತಿಯಾಗಿದ್ದರು, ತಮ್ಮ ಅಧಿಕಾರಾವಧಿಯ ಉದ್ದಕ್ಕೂ ಸರ್ಕಾರವನ್ನು ಬೆಂಬಲಿಸಿದರು, ಆದರೆ ಈಗ ವಿರೋಧ ಪಕ್ಷಗಳು ಅವರನ್ನು ರಕ್ಷಿಸಬೇಕಾಗಿ ಬರುತ್ತಿದೆ. ನಾವು ಏನು ಮಾಡಬೇಕು? ನಾವು ಹೇಬಿಯಸ್ ಕಾರ್ಪಸ್ ಸಲ್ಲಿಸಬೇಕೇ?, ಅವರು ಎಲ್ಲಿದ್ದಾರೆ ಎಂದು ಗೃಹಸಚಿವಾಲಯಕ್ಕೆ ತಿಳಿದಿರುತ್ತದೆ. ಈ ಕುರಿತು ಅಮಿತ್ ಶಾ ಹೇಳಿಕೆ ನೀಡಬೇಕು" ಎಂದು ವಾಗ್ದಾಳಿ ನಡೆಸಿದ್ದರು. (ಏಜೆನ್ಸೀಸ್)