

ಶಿವಮೊಗ್ಗ: ನಾಲ್ವಡಿ ಕೃಷ್ಣರಾಜ ಒಡೆಯರ್ 1907ರಲ್ಲಿ ಆಡಳಿತಕ್ಕೆ ನೆರವಾಗಲು ಪ್ರಜಾಪ್ರತಿನಿಧಿ ಸಮಿತಿ ರಚಿಸಿದ್ದರು. ಆ ಸಮಿತಿಯಲ್ಲಿ ಸದಸ್ಯರಾಗಿ ಭೂಪಾಳಂ ಅವರು ಅನೇಕ ಸಲಹೆಗಳನ್ನು ನೀಡಿದ್ದರು. ಆ ಸಮಿತಿಯೇ ಈಗ ವಿಧಾನ ಪರಿಷತ್ ಆಗಿದೆ ಎಂದು ಎಂಎಲ್‌ಸಿ ಡಿ.ಎಸ್.ಅರುಣ್ ಹೇಳಿದರು.
ಶಿವಮೊಗ್ಗಕ್ಕೆ ಅವರು ಅನೇಕ ಕೊಡುಗೆಗಳನ್ನು ನೀಡಿದ ಸ್ಮರಣಾರ್ಥ ವಿನೋಬನಗರ ಇಂದಿರಾ ಕ್ಯಾಂಟೀನ್‌ನಿಂದ ಎಪಿಎಂಸಿವರೆಗಿನ ಮಾರ್ಗಕ್ಕೆ ಭೂಪಾಳಂ ಚಂದ್ರಶೇಖರಯ್ಯ ಮಾರ್ಗವೆಂದು ಅಧಿಕೃತವಾಗಿ ನಾಮಕರಣಗೊಳಿಸಿ ಮಾತನಾಡಿದ ಅವರು, ಬಹುದಿನದ ಕನಸು ನನಸಾಗಿದೆ ಎಂದರು.
ಗಣ್ಯ ವ್ಯಕ್ತಿಗಳು ಮತ್ತು ದಾರ್ಶನಿಕರನ್ನು ನಾವು ಆ ಸಮಾಜಕ್ಕೆ ಸೀಮಿತ ಮಾಡುತ್ತಿದ್ದೇವೆ ಮತ್ತು ಅವರ ನೆನಪಿಗಾಗಿ ರಜೆಗಳನ್ನು ನೀಡುತ್ತೇವೆ. ಹಾಗಾಗಬಾರದು ಎಂದು ನಾನು ಸದನದಲ್ಲೂ ವಾದಿಸಿದ್ದೆ. ರಜೆ ನೀಡುವ ಬದಲು ಒಂದು ತಾಸು ಹೆಚ್ಚು ಕೆಲಸ ಮಾಡಿ ಗಣ್ಯರ ಗುಣಗಾನ ಮತ್ತು ಅವರು ಸಮಾಜಕ್ಕೆ ನೀಡಿದ ಕೊಡುಗೆ ಮತ್ತು ಸೇವೆಗಳನ್ನು ತಿಳಿ ಹೇಳುವ ಮತ್ತು ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ನಮ್ಮ ದೇಶ ಇತಿಹಾಸದ ನೆಲೆಗಟ್ಟಿನ ಮೇಲೆ ನಿಂತಿದೆ. ಸಂವಿಧಾನ ಕೊಟ್ಟ ಜವಾಬ್ದಾರಿಗಳನ್ನು ನಾವೆಲ್ಲರೂ ಅನುಸರಿಸಬೇಕು ಎಂದು ತಿಳಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಹಿಂದು ಮಹಾಸಭಾ ಸ್ಥಾಪನೆಯಲ್ಲಿ ಭೂಪಾಳಂ ಅವರ ಪಾತ್ರವೂ ಇದೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ನಡೆಯಬೇಕು. ಸಾವರ್ಕರ್ ಅವರನ್ನು ಶಿವಮೊಗ್ಗಕ್ಕೆ ಕರೆತರುವಲ್ಲಿ ಅವರ ಪಾತ್ರ ಮಹತ್ವದ್ದು. ನಗರದ ರಸ್ತೆಗೆ ಅವರ ಹೆಸರನ್ನು ಇಡಲು ಅನೇಕ ವರ್ಷಗಳೇ ಬೇಕಾಯಿತು. ಇದು ನಮ್ಮ ಕರ್ತವ್ಯದ ಭಾಗ ಎಂದರು.
ಗಣಪತಿಯಿಂದ ಗಲಾಟೆ ಆಗುವುದಲ್ಲ. 1939ರಲ್ಲಿ ಬಸವೇಶ್ವರ ದೇವಸ್ಥಾನವನ್ನು ಒಡೆದು ಮುಂಭಾಗದ ಅಂಗಡಿಗಳನ್ನು ಲೂಟಿ ಮಾಡಿದ್ದರು. ಈ ಇತಿಹಾಸ, ಸತ್ಯವನ್ನು ನಾವು ಮರೆಯಬಾರದು ಎಂದರು. ಭೂಪಾಳಂ ಚಂದ್ರಶೇಖರಯ್ಯನವರು ಶಿವಮೊಗ್ಗದ ಬಗ್ಗೆ ಆಗಿನ ಕಾಲದಲ್ಲೇ ಅನೇಕ ಯೋಜನೆಗಳನ್ನು ರೂಪಿಸಿ ಆಡಳಿತದ ಗಮನಕ್ಕೆ ತಂದಿದ್ದರು. ಅವರ ಕೊಡುಗೆ ಅಮೂಲ್ಯ ಎಂದು ಹೇಳಿದರು.
ಭೂಪಾಳಂ ಅವರ ಜೀವನದ ಕೈಪಿಡಿ ವಿತರಿಸಲಾಯಿತು. ಅವರ ಜೀವನ ಚರಿತ್ರೆಯ ವಿಡಿಯೋ ಪ್ರದರ್ಶಿಸಲಾಯಿತು. ಚಂದ್ರಶೇಖರಯ್ಯ ಅವರ ಪುತ್ರ ಭೂಪಾಳಂ ಪ್ರಭಾಕರ್, ಮಾಜಿ ಕಾರ್ಪೋರೇಟರ್ ರಾಹುಲ್ ಬಿದರೆ, ಪ್ರಮುಖರಾದ ಭೂಪಾಳಂ ಶಶಿಧರ್, ಸುಮಾ ಭೂಪಾಳಂ ಇತರರಿದ್ದರು.