

ಹೈದರಾಬಾದ್: ತೆಲಂಗಾಣ ರಾಜ್ಯ ಗೀತೆ ‘ಜಯ ಜಯಹೇ ತೆಲಂಗಾಣ’ ರಚನೆಕಾರ, ಖ್ಯಾತ ಕವಿ 64 ವರ್ಷದ ಅಂದೆ ಶ್ರೀ (Ande Sri) ಸೋಮವಾರ (ನ. 10) ಮುಂಜಾನೆ ಹೈದರಾಬಾದ್ನ ಗಾಂಧಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಭಾನುವಾರ ರಾತ್ರಿ ಹಠಾತ್ ಅನಾರೋಗ್ಯದ ಕಾರಣ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ಅಂತ್ಯಕ್ರಿಯೆಯನ್ನು ಅಧಿಕೃತ ಸರ್ಕಾರಿ ಗೌರವಗಳೊಂದಿಗೆ ನಡೆಸಲು ತೆಲಂಗಾಣ ಸರ್ಕಾರ ಸಿದ್ದತೆ ನಡೆಸಿದೆ.
ಸಿದ್ದಿಪೇಟೆ ಜಿಲ್ಲೆಯ ರೆಬರ್ತಿ ಗ್ರಾಮದಲ್ಲಿ ಜನಿಸಿದ ಅಂದೆ ಶ್ರೀ, ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದರು. ಬಳಿಕ ಕೆಲ ಕಾರು ಕುರಿ ಕಾಯುವ ಕುರುಬನಾಗಿ ಬಳಿಕ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡಿದರು. ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆಯದಿದ್ದರೂ, ಅವರು ತೆಲುಗು ಸಾಹಿತ್ಯ ಮತ್ತು ತೆಲಂಗಾಣ ಚಳವಳಿಯಲ್ಲಿ ತಮ್ಮದೇ ಆದ ಒಂದು ಸ್ಥಾನವನ್ನು ಗಳಿಸಿಕೊಂಡರು. ತೆಲಂಗಾಣದ ಅತ್ಯಂತ ಪ್ರಸಿದ್ಧ ಕವಿಗಳಲ್ಲಿ ಒಬ್ಬರಾಗಿದ್ದಾರೆ.
ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದ ಸಮಯದಲ್ಲಿ ಮಾಯಾಮೈಪೋತುನ್ನಡಮ್ಮ ಎಂಬ ಜಾನಪದ ಗೀತೆ ವ್ಯಾಪಕ ಮನ್ನಣೆ ಗಳಿಸಿತ್ತು. ಕಾಕತೀಯ ವಿಶ್ವವಿದ್ಯಾಲಯವೂ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ. ಜೊತೆಗೆ ಇತ್ತೇಚೆಗೆ ಸಾಹಿತ್ಯ ಮತ್ತು ಸಂಸ್ಕೃತಿಗೆ ಅವರು ಕೊಟ್ಟ ಕೊಡುಗೆ ಗಮನಿಸಿ ತೆಲಂಗಾಣ ಸರ್ಕಾರ 1 ಕೋಟಿ ಹಣವನ್ನು ಬಹುಮಾನವಾಗಿ ಕೊಟ್ಟಿತ್ತು.
ಅಂದೆ ಶ್ರೀ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ತೆಲಂಗಾಣ ಸಾಹಿತ್ಯ ಲೋಕಕ್ಕೆ ಇದು ತುಂಬಲಾರದ ನಷ್ಟ ಎಂದು ಬಣ್ಣಿಸಿದ್ದಾರೆ. ಪ್ರತ್ಯೇಕ ರಾಜ್ಯ ಚಳವಳಿಯ ಸಂದರ್ಭದಲ್ಲಿ "ಜಯ ಜಯಹೇ ತೆಲಂಗಾಣ" ಲಕ್ಷಾಂತರ ಜನರ ಧ್ವನಿಯಾಯಿತು. ಇತ್ತೀಚೆಗೆ ನಮ್ಮ ಸರ್ಕಾರದ ಅಡಿಯಲ್ಲಿ ಹೊಸ ವಾದ್ಯವೃಂದದೊಂದಿಗೆ ರಾಜ್ಯ ಗೀತೆಯನ್ನು ಮರುಸಂಯೋಜಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. (ಏಜೆನ್ಸೀಸ್)