ತೆಲಂಗಾಣದಲ್ಲಿ ಕೋಲಾಹಲ ಸೃಷ್ಟಿದ ಮುರಾಸು ಚಂಡಮಾರುತ
ಮೀನುಗಾರರ ರಕ್ಷಣೆಗೆ ತೆರಳಿದ್ದ ಎಸ್ಡಿಆರ್ಎಫ್ನ 2 ಬೋಟ್ಗಳೇ ಪಲ್ಟಿ
ಆಂಧ್ರಪ್ರದೇಶದಲ್ಲಿ ಹಳ್ಳಗಳು ಭರ್ತಿ, 20ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತ
ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ
Telangana Floods: ಮುರಾಸು ಸೈಕ್ಲೋನ್ ಆರ್ಭಟಕ್ಕೆ ತೆಲಂಗಾಣ ಹಾಗೂ ಆಂಧ್ರದಲ್ಲಿ ಭಾರೀ ಮಳೆಯಾಗಿ ಪ್ರವಾಹ ಸೃಷ್ಟಿಯಾಗಿದೆ. ತೆಲಂಗಾಣದ ಖಮ್ಮಂನಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಮೀನುಗಾರರ ರಕ್ಷಣೆಗೆ ಹೋದ ಎಸ್ಡಿಆರ್ಎಫ್ ತಂಡದ ಬೋಟ್ ಉರುಳಿ ಬಿದ್ದು, 11 ಸಿಬ್ಬಂದಿ ನೀರಿನಲ್ಲಿ ಕೊಚ್ಚಿಹೋದ ಘಟನೆ ಸಂಭವಿಸಿದೆ.
ಖಮ್ಮಂ ಜಿಲ್ಲೆಯ ಸತ್ತುಪಲ್ಲಿ ಮಂಡಲದ ಬೇತುಪಲ್ಲಿ ಕೆರೆಯಲ್ಲಿ ಸಿಲುಕಿದ್ದ ಐವರು ಮೀನುಗಾರರನ್ನು ರಕ್ಷಿಸಲು ಎಸ್ಡಿಆರ್ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ಬೋಟ್ಗಳಲ್ಲಿ ತೆರಳಿದ್ದರು. ಈ ವೇಳೆ ನೀರಿನ ಭಾರಿ ಹರಿವಿಗೆ ರಕ್ಷಣಾ ಬೋಟ್ಗಳು ಪಲ್ಟಿಯಾಗಿವೆ. ತಕ್ಷಣವೇ ಕಾರ್ಯಪ್ರವೃತ್ತರಾದ ತಂಡಗಳು ಇತರ ಬೋಟ್ಗಳ ನೆರವಿನಿಂದ ಕಾರ್ಯಾಚರಣೆ ನಡೆಸಿದೆ.
ಪಲ್ಟಿಯಾಗಿದ್ದ 11 ಸಿಬ್ಬಂದಿ ಪೈಕಿ 10 ಜನರನ್ನು ಸುರಕ್ಷಿತವಾಗಿ ದಂಡೆಗೆ ಕರೆತಂದಿದ್ದಾರೆ. ಇನ್ನುಳಿದ ಒಬ್ಬ ಸಿಬ್ಬಂದಿಯ ಸುಳಿವು ಸಿಕ್ಕಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಘಟನೆ ತಿಳಿಯುತ್ತಿದ್ದಂತೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹಾಗೂ ಕಂದಾಯ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಅವರು ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದಲ್ಲೂ ಚಂಡಮಾರುತದ ಆರ್ಭಟ ಜೋರಾಗಿದ್ದು, ಪೋಲವರಂ ಹಾಗೂ ಪೂರ್ವ ಗೋದಾವರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಕರೆ ಮಾಡಿ ಮಾಹಿತಿ ಪಡೆದು ಕೇಂದ್ರದಿಂದ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ. ಅಲ್ಲದೆ, ಸಿಎಂ ನಾಯ್ಡು ಅವರು ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. (ಏಜೆನ್ಸೀಸ್)