

ಬೆಂಗಳೂರು: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಭವಿಷ್ಯ ಉತ್ತಮವಾಗಿದೆ ಎಂಬ ಸಮೀಕ್ಷಾ ವರದಿಗಳು, ಪ್ರಚಾರ ಸಭೆ, ರ‌್ಯಾಲಿಗಳಿಗೆ ಜನರ ಸ್ಪಂದನೆಯಿಂದ ಉತ್ತೇಜಿತವಾಗಿರುವ ಕಾಂಗ್ರೆಸ್ ನಾಯಕರು ಮತ್ತಷ್ಟು ಪರಿಶ್ರಮ ಹಾಕುತ್ತಿದ್ದಾರೆ.
ತೆಲಂಗಾಣ ಚುನಾವಣೆಗೆ ರಾಜ್ಯದ ಸಚಿವರು ಮತ್ತು ಶಾಸಕರನ್ನು ಬಳಸಿಕೊಳ್ಳಬೇಕೆಂಬ ಸಿಎಂ, ಡಿಸಿಎಂ ಪ್ರಸ್ತಾವನೆಗೆ ಕರ್ನಾಟಕದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಪ್ಪಿಗೆ ನೀಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
ತೆಲಂಗಾಣ ಚುನಾವಣೆ ಕ್ಲಸ್ಟರ್ ಉಸ್ತುವಾರಿಗಳನ್ನಾಗಿ 10 ಜನ ಸಚಿವರು ಮತ್ತು 48 ಜನ ಶಾಸಕರು ಎಐಸಿಸಿ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಸಚಿವರಾದ ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಎಂ.ಸಿ.ಸುಧಾಕರ್, ಶರಣಪ್ರಕಾಶ್ ಪಾಟೀಲ್, ಕೆ.ಎಚ್.ಮುನಿಯಪ್ಪ, ಕೃಷ್ಣಬೈರೇಗೌಡ, ಶಿವರಾಜ ತಂಗಡಗಿ, ಜಮೀರ್ ಅಹ್ಮದ್ ಖಾನ್, ಈಶ್ವರ ಖಂಡ್ರೆ ಮತ್ತು ಬಿ.ನಾಗೇಂದ್ರ ಅವರು ಎಐಸಿಸಿ ಕ್ಲಸ್ಟರ್ ಉಸ್ತುವಾರಿಗಳಾಗಿದ್ದಾರೆ.
ಅಲ್ಲದೆ, 48 ವಿಧಾನಸಭೆ ಕ್ಷೇತ್ರಗಳಿಗೆ ತಲಾ ಒಬ್ಬ ಶಾಸಕ ಎಐಸಿಸಿ ವೀಕ್ಷಕರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಚುನಾವಣಾ ಕಾರ್ಯತಂತ್ರ, ಪ್ರಚಾರ, ಸಭೆಗಳ ಮತ್ತಿತರ ಚಟುವಟಿಕೆಗಳ ಬಗ್ಗೆ ಗಮನ, ಪಕ್ಷದ ಗೆಲುವಿಗೆ ಪೂರಕವಾಗಿ ಕ್ಷೇತ್ರಾವಾರು ಮಾಹಿತಿ ಸಂಗ್ರಹಿಸಿ ಕಾಲ ಕಾಲಕ್ಕೆ ಎಐಸಿಸಿಯಿಂದ ನಿಯೋಜಿತರಾದ ತೆಲಂಗಾಣ ಚುನಾವಣೆ ಉಸ್ತುವಾರಿಗೆ ಒಪ್ಪಿಸುವುದು ಉಸ್ತುವಾರಿಗಳು ಮತ್ತು ವೀಕ್ಷಕರ ಜವಾಬ್ದಾರಿಯಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.