ಟಿಕೆಟ್ ದರದಲ್ಲಿ ಹೆಚ್ಚಳ ಬೇಕಿದ್ದಲ್ಲಿ ಹೀಗೆ ಮಾಡಿ! ನಿರ್ಮಾಪಕರಿಗೆ ತೆಲಂಗಾಣ ಸಿಎಂ ಕೊಟ್ಟ ಹೊಸ ಮಾರ್ಗಸೂಚಿ ಇದು

ವಿಜಯವಾಣಿ - 2024-07-02T181307.787
Published on

ತೆಲಂಗಾಣ: ಪ್ರಸ್ತುತ ಟಾಲಿವುಡ್​ನ ಸ್ಟಾರ್​ ನಟರ​ ಸಿನಿಮಾಗಳು ಚಿತ್ರಮಂದಿರಗಳಿಗೆ ಲಗ್ಗೆಯಿಡಲು ಸಾಲುಗಟ್ಟಿ ನಿಂತಿದ್ದು, ದಿನಾಂಕಗಳ ವ್ಯತ್ಯಾಸಗಳು ಮಾತ್ರ ಸದ್ಯದ ಸಮಸ್ಯೆಯಾಗಿದೆ. ಆದರೆ, ಈ ಮಧ್ಯೆ ಚಿತ್ರ ನಿರ್ಮಾಪಕರು ತಮ್ಮ ಬಿಗ್ ಬಜೆಟ್ ಸಿನಿಮಾಗಳಿಗೆ ಟಿಕೆಟ್ ದರದಲ್ಲಿ ಹೆಚ್ಚಳ ಮಾಡಿ ಎಂಬ ಮನವಿ ಮುಂದಿಟ್ಟ ಬೆನ್ನಲ್ಲೇ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದಾರೆ. ಇದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.

ಟಿಕೆಟ್ ದರದಲ್ಲಿ ಏರಿಕೆ ಬೇಕು ಎಂದಾದಲ್ಲಿ ಆಯಾ ಸಿನಿಮಾ ನಿರ್ಮಾಪಕರು ಈಗ ನಿರ್ದಿಷ್ಟ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಬೇಕಿದೆ. ಮನರಂಜನಾ ಉದ್ಯಮದ ಮೂಲಕ ಸಾಮಾಜಿಕ ಜಾಗೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಈ ಹೊಸ ನಿಯಮಗಳನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಹೊಸ ಮಾರ್ಗಸೂಚಿಗಳ ಅಡಿಯಲ್ಲಿ, ಒಂದು ಚಲನಚಿತ್ರವು ಟಿಕೆಟ್ ದರವನ್ನು ಹೆಚ್ಚಿಸಲು ಬಯಸಿದರೆ, ಆ ಸಿನಿಮಾದ ನಾಯಕ ನಟ ಎರಡು ಸಾರ್ವಜನಿಕ ಜಾಗೃತಿ ವಿಡಿಯೋಗಳಲ್ಲಿ ಅಭಿನಯಿಸಬೇಕು. ಒಂದು ಸೈಬರ್ ಕ್ರೈಂ ಮತ್ತೊಂದು ಮಾದಕ ದ್ರವ್ಯ ವಿರೋಧಿ. ಈ ದೃಶ್ಯಗಳನ್ನು ದರ ಏರಿಕೆಯ ವಿನಂತಿಯೊಂದಿಗೆ ಸಲ್ಲಿಸಬೇಕು ಮತ್ತು ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನಕ್ಕೂ ಮೊದಲು ಪ್ರಸಾರ ಮಾಡಬೇಕು ಎಂಬುದು ನಿಯಮ.

ಇದನ್ನು ಪರಿಶೀಲಿಸಿ, ಒಪ್ಪಿಗೆ ನೀಡಿದ ನಂತರವೇ ಸರ್ಕಾರ ಟಿಕೆಟ್ ದರ ಏರಿಕೆಗೆ ಅನುಮೋದಿಸಲಿದೆ ಎಂದು ಸಿಎಂ ರೇವಂತ್ ರೆಡ್ಡಿ ತಿಳಿಸಿದ್ದಾರೆ. ಈ ವಿನೂತನ ಪ್ರಯತ್ನಕ್ಕೆ ಮುಂದಾದ ಮುಖ್ಯಮಂತ್ರಿಗಳಿಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇನ್ನು ಟಾಲಿವುಡ್ ಸ್ಟಾರ್ ಮೆಗಾಸ್ಟಾರ್ ಚಿರಂಜೀವಿ ಮಾದಕ ದ್ರವ್ಯ ವಿರೋಧಿ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಕ್ಕಾಗಿ ಸಿಎಂ ಕೃತಜ್ಞತೆ ಸಲ್ಲಿಸಿದ್ದಾರೆ,(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net